ಕಾಣೆಯಾಗಿವೆ ಮಲ್ಲೇಶ್ವರ ಫುಟ್‌ಪಾತ್‌ಗಳು!

7
ದಿನನಿತ್ಯ ನಡೆದಾಡುವ ಹಾದಿಯ ಅತಿಕ್ರಮಣ ತಡೆಯಲು ಸ್ಥಳೀಯರ ಒಕ್ಕೊರಲಿನ ಒತ್ತಾಯ l ಆಂದೋಲನ ನಡೆಸಲು ನಿವಾಸಿಗಳ ನಿರ್ಧಾರ

ಕಾಣೆಯಾಗಿವೆ ಮಲ್ಲೇಶ್ವರ ಫುಟ್‌ಪಾತ್‌ಗಳು!

Published:
Updated:
Deccan Herald

ಬೆಂಗಳೂರು: ‘ಜನರು ಪಾದ ಬೆಳೆಸಲು ಅನುಕೂಲವಾಗುವಂತಹ ಪಾದಚಾರಿ ಮಾರ್ಗಗಳನ್ನು ಪಾಲಿಕೆ ನಿರ್ಮಿಸಬೇಕು. ಆ ಮಾರ್ಗಗಳು ಜನಬಳಕೆಯ ಹೊರತಾಗಿ ಅತಿಕ್ರಮಣ ಆಗದಂತೆ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಮಲ್ಲೇಶ್ವರದ ನಿವಾಸಿಗಳು ಗಟ್ಟಿಧ್ವನಿಯಿಂದ ಒತ್ತಾಯಿಸುತ್ತಿದ್ದಾರೆ.

ಅವರ ಈ ಒತ್ತಾಯಕ್ಕೆ ಕಾರಣ, ಮಲ್ಲೇಶ್ವರದ ಬಹುತೇಕ ಪಾದಚಾರಿ ಮಾರ್ಗಗಳು ಬೀದಿ ಬದಿ ವ್ಯಾಪಾರಿಗಳ ಬಯಲಂಗಡಿಗಳಾಗಿವೆ. ಫಾಸ್ಟ್‌ಫುಡ್‌ಗಳ ಡೈನಿಂಗ್‌ ಹಾಲ್‌ಗಳಾಗಿವೆ. ನಿರ್ಮಾಣ ಹಂತದ ಕಟ್ಟಡ ಸಾಮಗ್ರಿಗಳನ್ನು ಶೇಖರಿಸುವ ಗೋದಾಮುಗಳಾಗಿವೆ. ಉಳಿದಂತೆ ಕಾರುಗಳನ್ನು ನಿಲ್ಲಿಸುವ ಪಾರ್ಕಿಂಗ್‌ ಸ್ಥಳವಾಗಿವೆ.

ಸಂಪಿಗೆ ಹಾಗೂ ಮಾರ್ಗೊಸಾ ರಸ್ತೆಗಳ ನಡುವಿನ ಅಡ್ಡರಸ್ತೆಗಳ ಬದಿಯಲ್ಲಿ ಪಾದಚಾರಿ ಮಾರ್ಗಗಳಿವೆ. ಆದರೆ, ಅವುಗಳ ಮೇಲೆ ಜನರು ಸುಗಮವಾಗಿ ಓಡಾಡಲು ಈ ಮೇಲಿನ ಕಾರಣಗಳು ಅಡ್ಡಿಯಾಗಿವೆ. ಅದರಲ್ಲೂ ಎಂಟನೇ ಅಡ್ಡರಸ್ತೆಯ ಅಕ್ಕಪಕ್ಕದ ಮಾರ್ಗಗಳಲ್ಲಿ ಫುಟ್‌ಪಾತ್‌ ಕಾಣದಂತೆ ಬೀದಿ ವ್ಯಾಪಾರಿಗಳು ಕಿಕ್ಕಿರಿದು ತುಂಬಿಹೋಗಿದ್ದು, ಪಾದಚಾರಿಗಳ ಓಡಾಟ ಇಲ್ಲಿ ಹರಸಾಹಸವಾಗಿದೆ.

ಬೀದಿಬದಿ ವ್ಯಾಪಾರಿಗಳಿಂದ ಅತಿಕ್ರಮಣ: ‘ಸಂಪಿಗೆ ರಸ್ತೆಯ ಎರಡೂ ಬದಿಯ ಫುಟ್‌ಪಾತ್‌ಗಳನ್ನು ತರಹೇವಾರಿ ವಸ್ತುಗಳನ್ನು ಮಾರುವ ಬೀದಿ ವ್ಯಾಪಾರಿಗಳೇ ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಪ್ರದೇಶದ ನಿವಾಸಿಗಳು ಸರಾಗವಾಗಿ ಓಡಾಡಲು ಆಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ರವಿ ಆಚಾರ್ಯ ದೂರಿದರು. 

‘ನಮಗೆ ಬೀದಿ ವ್ಯಾಪಾರಿಗಳ ಬಗ್ಗೆ ಕಾಳಜಿ ಇದೆ. ಹಾಗಂತ, ನಾವು ಅನುಭವಿಸುತ್ತಿರುವ ತೊಂದರೆಯನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು. ಆ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ ಗುರುತಿಸಲಿ. ಅಲ್ಲಿ ಅವರು ವ್ಯಾಪಾರ ಮಾಡಲಿ. ನಾವು ಅಲ್ಲಿಗೆ ಹೋಗಿ ಬೇಕಾದ ವಸ್ತುಗಳನ್ನು ಕೊಳ್ಳುತ್ತೇವೆ’ ಎಂದು ಅವರು ಸಲಹೆ ನೀಡಿದರು. 

‘ಈ ವ್ಯಾಪಾರಿಗಳಿಂದ ಪೊಲೀಸರು, ಅಧಿಕಾರಿಗಳು ಮಾಮೂಲಿ ವಸೂಲಿ ಮಾಡುತ್ತಾರೆ. ಹಾಗಾಗಿ ಅವರನ್ನು ಇಲ್ಲಿಂದ ತೆರವುಗೊಳಿಸಲ್ಲ’ ಎಂದು ಸ್ಥಳೀಯರೊಬ್ಬರು ತಿಳಿಸಿದರು. 

ಫಾಸ್ಟ್‌ಫುಡ್‌ಗಳ ಡೈನಿಂಗ್‌ ಹಾಲ್‌: ‘ರಸ್ತೆ ಬದಿಯ ಚಾಟ್ಸ್‌, ಫಾಸ್ಟ್‌ ಫುಡ್‌ ಮತ್ತು ಟಿಫನ್‌ ಸೆಂಟರ್‌ನ ವರು ಫುಟ್‌ಪಾತ್‌ಗಳನ್ನು ಆಕ್ರಮಿಸಿ ಕೊಂಡಿದ್ದಾರೆ. ಜನರು ನಿಂತುಕೊಂಡು ತಿಂಡಿ–ತಿನಿಸು ತಿನ್ನಲು ಪಾದಚಾರಿ ಮಾರ್ಗದ ಮೇಲೆಯೇ ಟೇಬಲ್‌ಗಳನ್ನು ಹಾಕುತ್ತಾರೆ. ಇದರಿಂದ ಫುಟ್‌ಪಾತ್‌ಗಳೇ ಡೈನಿಂಗ್‌ ಹಾಲ್‌ಗಳಾಗಿವೆ. ಹೀಗಾಗಿ ಜನ ಫುಟ್‌ಪಾತ್‌ ಬಿಟ್ಟು ರಸ್ತೆಗೆ ಇಳಿಯಬೇಕಾಗಿದೆ. ಹಾಗೆ ರಸ್ತೆಗಿಳಿದು ನಡೆಯುವಾಗ, ಗಾಡಿಗಳಿಂದ ಗುದ್ದಿಸಿಕೊಂಡು ಕೆಲವರು ಗಾಯಗೊಂಡಿದ್ದಾರೆ’ ಎಂದು ಸ್ಥಳೀಯ ನಿವಾಸಿ ಸುಚಿತ್ರಾ ದೀಪ್‌ ಸಮಸ್ಯೆಯ ತೀವ್ರತೆಯನ್ನು ಬಿಚ್ಚಿಟ್ಟರು. 

ಅವೈಜ್ಞಾನಿಕವಾಗಿ ನಿರ್ಮಾಣ: ‘ಪ್ರದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಿದೆ. ಬಹುತೇಕ ರಸ್ತೆಗಳಿಂದ ಮನೆ, ಅಪಾರ್ಟ್‌ಮೆಂಟ್‌ಗಳಿಗೆ ಸಂಪರ್ಕ ಕಲ್ಪಿಸುವ ದಾರಿಗಳಲ್ಲಿ ಫುಟ್‌ಪಾತ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಅಲ್ಲಿನ ಮೆಟ್ಟಿಲಾಕಾರದ ರಚನೆಗಳನ್ನು ಹತ್ತಿಳಿಯಲು ಹಿರಿಯ ನಾಗರಿಕರಿಗೆ ಆಗಲ್ಲ. ಅಲ್ಲಿಯೂ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ’ ಎಂದು 74 ವರ್ಷದ ಹಿರಿಜೀವ ಸೂರ್ಯನಾರಾಯಣ ಅವರು ತಮ್ಮ ಸಮವಯಸ್ಕರ ಕಷ್ಟವನ್ನು ವಿವರಿಸಿದರು.

ದಾರಿಯಲ್ಲೇ ಶೆಡ್‌ ನಿರ್ಮಾಣ: ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳ ಸಾಮಗ್ರಿಗಳನ್ನು ಜನ ನಡೆಯುವ ದಾರಿಯಲ್ಲೆ ಸುರಿದಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ 11ನೇ ಅಡ್ಡರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ‘ನಮಗೆ ಕಾರ್ಮಿಕರ ಬಗ್ಗೆ ಕನಿಕರವಿದೆ. ಬಿಲ್ಡಿಂಗ್‌ ಕಟ್ಟುವವರು ಕಾರ್ಮಿಕರಿಗೆ ಸೂಕ್ತ ಸೂರು ಕಲ್ಪಿಸಲಿ. ನಮಗೆ ನಮ್ಮ ಫುಟ್‌ಪಾತ್‌ ಬೇಕು ಅಷ್ಟೆ’ ಎಂದು ಸ್ಥಳೀಯರೊಬ್ಬರು ಒತ್ತಾಯಿಸಿದರು. 

ಕಳೆದುಕೊಂಡಿರುವ ಫುಟ್‌ಪಾತ್‌ಗಳನ್ನು ಮರಳಿ ಪಡೆಯಲು ಆಂದೋಲನ ನಡೆಸಲಿದ್ದೇವೆ ಎಂದು ಸುಚಿತ್ರಾ ದೀಪ್‌ ಹೇಳಿದರು.

***

‘ಆಮೆಗತಿಯಲ್ಲಿ ಸಾಗಿದೆ ಜಲಮಂಡಳಿ ಕಾಮಗಾರಿ’

‘ಕೊಳಚೆ ನೀರು ಹರಿಯುವ ಕೊಳವೆಗಳ ಜೋಡಣಾ ಕಾಮಗಾರಿ ತುಂಬಾ ನಿಧಾನವಾಗಿ ಸಾಗಿದೆ. ಈ ಬಿಡಬ್ಲ್ಯುಎಸ್‌ಎಸ್‌ಬಿ ಅವರು ಒಂದು ಕಡೆ ರಸ್ತೆ ಅಗೆದು, ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಕಡೆ ಅಗೆಯಲು ಹೋಗುತ್ತಾರೆ. ಇದರಿಂದಾಗಿ ಕೊಳವೆಗಳು ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂದಿನ ಫುಟ್‌ಪಾತ್‌ನಲ್ಲಿ ಬಿದ್ದಿವೆ. ಇದರಿಂದ ಓಡಾಟಕ್ಕೆ ತೊಂದರೆಯಾಗುತ್ತಿದೆ’ ಎಂದು ಹೆಸರು ಹಾಕಬೇಡಿ ಎಂಬ ನಿಬಂಧನೆ ಹಾಕಿ ಜಲಮಂಡಳಿ ಮೇಲಿನ ಸಿಟ್ಟನ್ನು ನಿವಾಸಿಯೊಬ್ಬರು ಹೊರಹಾಕಿದರು.

***

ಕೆಲವು ಮನೆಯವರು, ಅಂಗಡಿಯವರು ಫುಟ್‌ಪಾತ್‌ಗಳ ಮೇಲೇನೆ ಕಾರು, ಬೈಕುಗಳನ್ನು ನಿಲ್ಲಿಸುತ್ತಾರೆ. ಅವರಿಗೆ ಪೊಲೀಸರು ದಂಡ ವಿಧಿಸಿ, ಬುದ್ಧಿ ಕಲಿಸಬೇಕು.
-ಶಶಿಕಲಾ, ಸ್ಥಳೀಯ ನಿವಾಸಿ

ಫುಟ್‌ಪಾತ್‌ಗಳು ಅತಿಕ್ರಮ ಆಗಿರುವುದು ನಿಜ. ಅದನ್ನು ತಡೆಯಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.
-ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕ, ಮಲ್ಲೇಶ್ವರ

ನಮ್ಮ ಏರಿಯಾದ ಫುಟ್‌ಪಾತ್‌ಗಳು ಸರಿಯಿಲ್ಲದ್ದರಿಂದ ನಾನು ವಾಕಿಂಗ್‌ ಮಾಡುವುದನ್ನೆ ನಿಲ್ಲಿಸಿದ್ದೇನೆ. –ವೆಂಕಟರಮಣ, ಸ್ಥಳೀಯ ಹಿರಿಯ ನಾಗರಿಕ

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !