ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಶಿಬಿರಕ್ಕೆ ಪ್ರಣವ್‌ ಹೋಗಿದ್ದೇ ನಿಗೂಢ: ಮಲ್ಲಿಕಾರ್ಜುನ ಖರ್ಗೆ

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಖರ್ಗೆ, ಸಿದ್ದರಾಮಯ್ಯ, ಮುನಿಯಪ್ಪ
Last Updated 1 ಸೆಪ್ಟೆಂಬರ್ 2020, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದಲ್ಲಿ ಹಲವು ಸ್ಥಾನಗಳೂ ಸೇರಿ, ರಾಷ್ಟ್ರಪತಿಯಂಥ ಅತ್ಯುನ್ನತ ಹುದ್ದೆಗೇರಿ ಎಲ್ಲವನ್ನೂ ನಿಭಾಯಿಸಿದ್ದ ಮೇಧಾವಿ ಪ್ರಣವ್ ಮುಖರ್ಜಿ ಅವರು ಕೊನೆಗೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಳ್ಳಲು ಹೋಗಿದ್ದು ಯಾಕೆ ಎನ್ನುವುದು ಇನ್ನೂ ನಿಗೂಢ’ ಎಂದು ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಣವ್‌ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಖರ್ಗೆ, ‘ಇಂದಿರಾ ಗಾಂಧಿಯವರ ತತ್ವದ ಮೇಲೆ ಅವರು ನಂಬಿಕೆ ಇಟ್ಟವರು. ಅಂಥವರು ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಹೋಗಿದ್ದು ಕುತೂಹಲ ಮೂಡಿಸಿತ್ತು. ಅದರ ಬಗ್ಗೆ ಅವರ ಜೊತೆ ನಾನು ಮಾತನಾಡಬೇಕಿತ್ತು. ಆದರೆ, ಮುಖಾಮುಖಿ ಮಾತನಾಡಲು ಕೊನೆಗೂ ಅವಕಾಶ ಸಿಗಲಿಲ್ಲ’ ಎಂದರು.

‘ಪ್ರಣವ್ ಮುಖರ್ಜಿ ದೊಡ್ಡ ವಿಚಾರವಾದಿ. ಅವರಿಗೆ ಓದುವ ಚಟ ಹೆಚ್ಚಿತ್ತು. ಕಲಬುರ್ಗಿಯಲ್ಲಿ ಪಾಲಿ ಇನ್ಸ್‌ಟಿಟ್ಯೂಟ್ ಮಾಡುವಂತೆ ಅವರು ಸಲಹೆ ನೀಡಿದ್ದರು. ಆದರೆ, ಪಾಲಿ ಭಾಷೆ ವಿದ್ಯಾರ್ಥಿಗಳು ಬರುವುದಿಲ್ಲ. ಆ ಭಾಷೆಯ ಶಿಕ್ಷಕರೂ ಸಿಗುವುದಿಲ್ಲ ಎಂದಿದ್ದೆ. ಆಗ ನಾನೇ ಪಶ್ಚಿಮ ಬಂಗಾಳದಿಂದ ಕಳುಹಿಸಿ ಕೊಡುತ್ತೇನೆ ಎಂದಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಅದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು. ಆದರೆ, ಅದನ್ನು ಆರಂಭಿಸಲು ಸಾಧ್ಯವಾಗಲೇ ಇಲ್ಲ’ ಎಂದರು.

ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ‘ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಪ್ರಣವ್‌ ಹೋಗುವ ಮೊದಲು ಅವರನ್ನು ಭೇಟಿ ಮಾಡಿದ್ದೆ. ಇಲ್ಲಿಯವರೆಗೆ ನೀವು ಪಕ್ಷವನ್ನು ಕಟ್ಟಿದ್ದೀರಾ. ಈಗ ಕೋಮುವಾದಿ ಸಂಘಟನೆ ಕಡೆಗೆ ಹೋಗುತ್ತಿದ್ದೀರಾ. ನಿಮ್ಮ‌ ಹೆಸರಿಗೆ ಕಳಂಕ ಬರುವುದಿಲ್ಲವೇ ಎಂದಿದ್ದೆ. ಅದಕ್ಕೆ, ಸಂದರ್ಭ ಬಂದಾಗ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದರು’ ಎಂದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಆರ್‌ಎಸ್‌ಎಸ್‌ ಶಿಬಿರಕ್ಕೆ ಪ್ರಣವ್ ಮುಖರ್ಜಿ ಹೋಗಿದ್ದೇ ಯಕ್ಷಪ್ರಶ್ನೆ. 50 ವರ್ಷ ಜಾತ್ಯತೀತವಾಗಿ ರಾಜಕಾರಣ ಮಾಡಿದವರು, ಆರ್‌ಎಸ್‌ಎಸ್‌ನಂತಹ ಕೋಮುವಾದಿ ಸಂಘಟನೆ‌ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾರೆಂದರೆ ಹೇಗೆ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಶಾಸಕ ದಿನೇಶ್ ಗುಂಡೂರಾವ್, ಮುಖಂಡರಾದ ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಬಿ.ಎನ್‌. ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT