ಬುಧವಾರ, ಏಪ್ರಿಲ್ 1, 2020
19 °C
₹ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಸ್ನೇಹಿತನ ಬಂಧನ

ಸ್ನೇಹಿತೆಯ ಸ್ನಾನದ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್, ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಸ್ನೇಹಿತೆಯ ಸ್ನಾನದ ವಿಡಿಯೊ ಇಟ್ಟುಕೊಂಡು ₹ 3 ಲಕ್ಷ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ದೀಪಕ್‌ ಕುಮಾರ್ ಸೇರಕರ್‌ (30) ಎಂಬಾತನನ್ನು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಮಧ್ಯಪ್ರದೇಶದ ದೀಪಕ್‌ ಕುಮಾರ್, ಖಾಸಗಿ ಕಂಪನಿ ಉದ್ಯೋಗಿ. ಆತನ ವಿರುದ್ದ ಕಾಲೇಜು ಸ್ನೇಹಿತೆ ದೂರು ನೀಡಿದ್ದಳು. ಆರೋಪಿಯನ್ನು ಬಂಧಿಸಿ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಡಿಸಿಪಿ ಎಂ.ಎನ್‌.ಅನುಚೇತ್ ತಿಳಿಸಿದರು.


ಆರೋಪಿ ದೀಪಕ್ ಕುಮಾರ್

‘ಬಿ.ಎಸ್ಸಿ ವಿದ್ಯಾಭ್ಯಾಸಕ್ಕಾಗಿ 2008ರಲ್ಲಿ ನಗರಕ್ಕೆ ಬಂದಿದ್ದ ದೀಪಕ್‌, ಖಾಸಗಿ ಕಾಲೇಜು ಸೇರಿದ್ದ. ಅಲ್ಲಿಯೇ ಯುವತಿ ಪರಿಚಯವಾಗಿ ಸ್ನೇಹ ಬೆಳೆದಿತ್ತು. 2011ರಲ್ಲಿ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರಳಿದ್ದ ದೀಪಕ್, 2013ರಲ್ಲಿ ಪುನಃ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಯುವತಿ ಸಹ ಬೇರೊಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು’

‘ಇದೇ ಜ.13ರಂದು ಭಟ್ಟರಹಳ್ಳಿಯ ವೆಂಕಟಪ್ಪ ಗಾರ್ಡನ್‌ನಲ್ಲಿರುವ ಆರೋಪಿ ಮನೆಗೆ ಹೋಗಿದ್ದ ಯುವತಿ ಒಂದು ದಿನ ಅಲ್ಲಿಯೇ ತಂಗಿದ್ದರು. ಅದೇ ಮನೆಯಲ್ಲಿ ಯುವತಿ ಸ್ನಾನ ಮಾಡುವಾಗ ಅದರ ವಿಡಿಯೊವನ್ನು ಆರೋಪಿ ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ’ ಎಂದು ಮಾಹಿತಿ ನೀಡಿದರು.

ನಕಲಿ ಇ–ಮೇಲ್ ಸೃಷ್ಟಿಸಿದ್ದ : ‘ನಗರದಲ್ಲಿರುವ ಮನೆ ಖಾಲಿ ಮಾಡಿಕೊಂಡು ವಾಪಸು ಊರಿಗೆ ಹೋಗಿದ್ದ ಆರೋಪಿ, ನಕಲಿ ಇ–ಮೇಲ್ ಸೃಷ್ಟಿಸಿದ್ದ. ಅದರ ಮೂಲಕವೇ ಯುವತಿಗೆ ಸಂದೇಶ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ಅದಕ್ಕೆ ಯುವತಿ ಪ್ರತಿಕ್ರಿಯಿಸಿರಲಿಲ್ಲ’ ಎಂದು ಅನುಚೇತ್ ಹೇಳಿದರು.

‘2019ರ ಡಿ. 4ರಂದು ವಿಡಿಯೊ ಸಮೇತ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದ ಆರೋಪಿ, ‘ನನಗೆ ₹3 ಲಕ್ಷ ಕೊಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ. ನಿನ್ನ ಜೀವನವನ್ನೇ ಹಾಳು ಮಾಡುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದ. ವಿಡಿಯೊ ನೋಡಿದ್ದ ಯುವತಿಗೆ, ಅದು ದೀಪಕ್‌ಕುಮಾರ್ ಮನೆಯಲ್ಲಿ ಚಿತ್ರೀಕರಿಸಿದ್ದ ವಿಡಿಯೊ ಎಂಬುದು ಗೊತ್ತಾಗಿತ್ತು. ಆತನ ಮೇಲೆ ಅನುಮಾನ ವ್ಯಕ್ತಪಡಿಸಿ ಕೆ.ಆರ್‌.ಪುರ ಠಾಣೆಗೆ ದೂರು ನೀಡಿದ್ದಳು’ ಎಂದು ತಿಳಿಸಿದರು.

‘ಯುವತಿ ಪೊಲೀಸರಿಗೆ ದೂರು ನೀಡಿದ್ದು ಗೊತ್ತಾಗುತ್ತಿದ್ದಂತೆ ಆರೋಪಿ, ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದ. ನಕಲಿ ಇ–ಮೇಲ್ ಅನ್ನು ಅಳಿಸಿ ಹಾಕಿ ತನ್ನೂರಿಗೆ ಹೋಗಿ ತಲೆಮರೆಸಿಕೊಂಡಿದ್ದ. ಕರೆಗಳ ವಿವರ ಸಂಗ್ರಹಿಸಿದ್ದ ಪೊಲೀಸರ ತಂಡ, ಮಧ್ಯಪ್ರದೇಶಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು