ಶನಿವಾರ, ಡಿಸೆಂಬರ್ 7, 2019
21 °C
ಅಕ್ರಮ ಪತ್ತೆ ಹಚ್ಚಿದ ಸಹಾಯಕ ಸಂಚಾರ ಇನ್‌ಸ್ಪೆಕ್ಟರ್‌

ಪ್ರಿಂಟಿಂಗ್ ಪ್ರೆಸ್‌ನಲ್ಲೇ ಬಸ್ ಪಾಸ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಪಾಸ್‌ಗಳನ್ನು ಅಕ್ರಮವಾಗಿ ನವೀಕರಣ ಮಾಡಿಕೊಡುತ್ತಿದ್ದ ಆರೋಪದಡಿ ಜಗದೀಶ್ ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಹಾಲಕ್ಷ್ಮಿ ಲೇಔಟ್‌ನ 9ನೇ ಮುಖ್ಯರಸ್ತೆಯಲ್ಲಿರುವ ಸಹೋದರನ ‘ಕ್ರಿಯೇಟಿವ್ ಪ್ರಿಂಟರ್ಸ್ ಮತ್ತು ಸಲ್ಯೂಷನ್’ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಸಹೋದರನ ಗಮನಕ್ಕೆ ಬಾರದಂತೆ ಪಾಸ್‌ ನವೀಕರಣ ಮಾಡಿಕೊಡುತ್ತಿದ್ದ’ ಎಂದು ಪೊಲೀಸರು ಹೇಳಿದರು. ‘ಪ್ರಿಂಟಿಂಗ್ ಪ್ರೆಸ್ ಮೇಲೆ ದಾಳಿ ಮಾಡಿ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ. ಸಹೋದರ ನಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

‘ಆರೋಪಿ ನೀಡಿದ ಪಾಸ್‌ಗಳನ್ನೇ ಬಳಸಿಕೊಂಡು ವಿದ್ಯಾರ್ಥಿಗಳು, ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಇತ್ತೀಚೆಗೆ ಬಿಎಂಟಿಸಿಯ ಸಹಾಯಕ ಸಂಚಾರ ಇನ್‌ಸ್ಪೆಕ್ಟರ್‌ ಶಿವಾನಂದ ನಾವದಗಿ ಅವರು ಬಸ್ಸಿನಲ್ಲಿ ಟಿಕೆಟ್ ತಪಾಸಣೆ ನಡೆಸುತ್ತಿದ್ದರು. ಅದೇ ವೇಳೆ ವಿದ್ಯಾರ್ಥಿ
ಯೊಬ್ಬನ ಬಳಿ ಇದ್ದ ಪಾಸ್‌ ಪರಿಶೀಲಿಸಿದಾಗ ಅನುಮಾನ ಬಂದಿತ್ತು. ವಿದ್ಯಾರ್ಥಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಅಕ್ರಮವಾಗಿ ಪಾಸ್ ನವೀಕರಣ ಮಾಡಿಸಿದ್ದು ಗೊತ್ತಾಗಿತ್ತು’ ಎಂದು ಹೇಳಿದರು.

‘ವಿದ್ಯಾರ್ಥಿ ಪ್ರಿಂಟಿಂಗ್ ಪ್ರೆಸ್‌ನ ಹೆಸರು ಹೇಳಿದ್ದ. ಆತನ ಹೇಳಿಕೆ ಆಧರಿಸಿ ಶಿವಾನಂದ್ ಅವರು ಠಾಣೆಗೆ ದೂರು ನೀಡಿದ್ದರು. ವಂಚನೆ (ಐಪಿಸಿ 420) ಹಾಗೂ ನಕಲಿ ದಾಖಲೆ ಸೃಷ್ಟಿ (ಐಪಿಸಿ 468) ಆರೋಪದಡಿ ಪ್ರಿಂಟಿಂಗ್ ಪ್ರೆಸ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳ
ಲಾಗಿತ್ತು’ ಎಂದು ಅವರು ಹೇಳಿದರು.

₹ 500 ರೂಪಾಯಿ ನಿಗದಿ

‘ಸ್ನೇಹಿತರ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಜಗದೀಶ್, ಅವ
ರನ್ನು ಪ್ರಿಂಟಿಂಗ್ ಪ್ರೆಸ್‌ಗೆ ಕರೆಸುತ್ತಿದ್ದ. ಅವರ ಪಾಸ್‌ನ ಹಿಂಬದಿಯಲ್ಲಿ ’ REN-2019-20’ ಎಂದು ನಮೂದಿಸಿ ನವೀಕರಣ ಮಾಡಿಕೊಡುತ್ತಿದ್ದ. ಒಂದು ಪಾಸ್ ನವೀಕರಣಕ್ಕೆ ₹ 500 ಪಡೆಯುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)