‘ಕಾಮಣ್ಣ’ನಿಗೆ ಏಳು ವರ್ಷ ಜೈಲು

7

‘ಕಾಮಣ್ಣ’ನಿಗೆ ಏಳು ವರ್ಷ ಜೈಲು

Published:
Updated:

ಬೆಂಗಳೂರು: 17 ವರ್ಷದ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಕಾಮಣ್ಣ ಅಲಿಯಾಸ್ ರವಿಕುಮಾರ್ ಎಂಬಾತನಿಗೆ, ಏಳು ವರ್ಷ ಜೈಲು ಶಿಕ್ಷೆ ಹಾಗೂ ₹ 80 ಸಾವಿರ ದಂಡ ವಿಧಿಸಿ 54ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಲತಾಕುಮಾರಿ ಆದೇಶ ಹೊರಡಿಸಿದರು.

ಕಾಮಣ್ಣನ ವಿರುದ್ಧ ಸಂತ್ರಸ್ತೆಯ ಪೋಷಕರು 2014ರ ಡಿ.2ರಂದು ಸಿ.ಕೆ.ಅಚ್ಚುಕಟ್ಟು ಠಾಣೆಗೆ ದೂರು ಕೊಟ್ಟಿದ್ದರು. ಆಟೊ ಚಾಲಕನಾಗಿದ್ದ ಆತ, ಪತ್ನಿಯೊಂದಿಗೆ ಬನಶಂಕರಿ 3ನೇ ಹಂತದ ಮಂಜುನಾಥ ಕಾಲೊನಿಯಲ್ಲಿ ನೆಲೆಸಿದ್ದ.

ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡ ಕಾಮಣ್ಣ, ತಾನು ವಿವಾಹಿತ ಎಂಬ ಸಂಗತಿ ಮುಚ್ಚಿಟ್ಟು ಆಕೆಯನ್ನು ಪ್ರೀತಿಸುವ ನಾಟಕವಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮದುವೆ ಆಗುವುದಾಗಿ ಪುಸಲಾಯಿಸಿ, ಬಲವಂತವಾಗಿ ಆಕೆಯನ್ನು ಬೇರೆ ಊರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಆ ವಿಚಾರವನ್ನು ಸಂತ್ರಸ್ತೆ ಪೋಷಕರ ಬಳಿ ಹೇಳಿಕೊಂಡಿದ್ದಳು.

ಅತ್ಯಾಚಾರ (ಐಪಿಸಿ 376), ಅಪಹರಣ (363,366) ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಡಿ.6ರಂದು ಆರೋಪಿಯನ್ನು ಬಂಧಿಸಿದ ಪೊಲೀಸರು, 90 ದಿನಗಳ ಒಳಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನಾಲ್ಕು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಆತ, 2015ರ ಏ.6ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆ ನಂತರ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಹೀಗಾಗಿ ಕಾಮಣ್ಣನ ಬಂಧನಕ್ಕೆ ನ್ಯಾಯಾಲಯ ಇದೇ ಫೆ.6ರಂದು ವಾರಂಟ್ ಜಾರಿ ಮಾಡಿತ್ತು. ಅದರನ್ವಯ ಪೊಲೀಸರು ಆರೋಪಿಯನ್ನು ಪುನಃ ಬಂಧಿಸಿದ್ದರು.

ನ್ಯಾಯಾಧೀಶರು ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಚಿನ್ನವೆಂಕಟರಮಣಪ್ಪ ವಾದ ಮಂಡಿಸಿದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !