ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಅಪಹರಣ: ಪತ್ನಿ ಬಂಧನ, ಸ್ನೇಹಿತ ಆತ್ಮಹತ್ಯೆ

Last Updated 19 ಆಗಸ್ಟ್ 2022, 22:14 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯ ಠಾಣೆ ವ್ಯಾಪ್ತಿಯ ನಿವಾಸಿ ನವೀನ್ ಎಂಬುವರ ಅಪಹರಣ ಪ್ರಕರಣ ಸಂಬಂಧ, ಅವರ ಪತ್ನಿ ಅನುಪಲ್ಲವಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಅನುಪಲ್ಲವಿ ಸ್ನೇಹಿತ ಹೇಮಂತ್, ಪೊಲೀಸರ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಾಗಲಗುಂಟೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

‘ಕ್ಯಾಬ್ ಚಾಲಕ ನವೀನ್ ಅವರನ್ನು ಅಪಹರಣ ಮಾಡಿ, ತಮಿಳುನಾಡಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಲಾಗಿತ್ತು. ನವೀನ್ ನಾಪತ್ತೆ ಬಗ್ಗೆ ತಂಗಿ ವರಲಕ್ಷ್ಮಿ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೀಣ್ಯ ಪೊಲೀಸರು ಹೇಳಿದರು.

₹ 2 ಲಕ್ಷಕ್ಕೆ ಸುಪಾರಿ: ‘ಅನುಪಲ್ಲವಿ ಹಾಗೂ ಹೇಮಂತ್, ಹಲವು ವರ್ಷಗಳ ಸ್ನೇಹಿತರು. ಇಬ್ಬರ ನಡುವೆ ಸಲುಗೆ ಇತ್ತು. ಈ ಸಂಗತಿ ಗೊತ್ತಾಗುತ್ತಿದ್ದಂತೆ ನವೀನ್, ಪತ್ನಿ ಅನುಪಲ್ಲವಿ ಅವರಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಸಿಟ್ಟಾದ ಪತ್ನಿ, ಪತಿಯನ್ನು ಅಪಹರಣ ಮಾಡಿಸಲು ಮುಂದಾಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಪರಾಧ ಹಿನ್ನೆಲೆಯುಳ್ಳ ನಾಗರಾಜು, ಹರೀಶ್ ಹಾಗೂ ಮುಗಿಲನ್ ಎಂಬುವರನ್ನು ಸಂಪರ್ಕಿಸಿದ್ದ ಅನುಪಲ್ಲವಿ, ಪತಿಯನ್ನು ಅಪಹರಿಸಲು ₹ 2 ಲಕ್ಷ ಸುಪಾರಿ ನೀಡಿದ್ದರು. ‍ಪ್ರವಾಸಕ್ಕೆ ಹೋಗುವ ಸೋಗಿನಲ್ಲಿ ಆರೋಪಿಗಳು, ನವೀನ್‌ ಅವರನ್ನು ಅಪಹರಿಸಿದ್ದರು. ಅವರನ್ನು ಕೊಲೆ ಮಾಡಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ, ನವೀನ್ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾರೆ’ ಎಂದು ಹೇಳಿವೆ.

ಸಂಭಾಷಣೆ ನೀಡಿದ ಸುಳಿವು: ‘ಪ್ರಕರಣ ದಾಖಲಾಗುತ್ತಿದ್ದಂತೆ ಅನುಪಲ್ಲವಿ ಮೊಬೈಲ್ ಸಂಭಾಷಣೆ ವಿವರ ಪರಿಶೀಲಿಸಲಾಗಿತ್ತು. ಉದ್ಯಮಿಯಾದ ಸ್ನೇಹಿತ ಹೇಮಂತ್‌ಗೆ ಹಲವು ಬಾರಿ ಕರೆ ಮಾಡಿದ್ದು ಗೊತ್ತಾಗಿತ್ತು. ಆತನನ್ನು ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಅಷ್ಟರಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನುಪಲ್ಲವಿ ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT