ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮ್ಮನ ಮಗನ ಜೊತೆ ಸಲುಗೆ: ಗುಪ್ತಾಂಗಕ್ಕೆ ಇರಿದು ಪತ್ನಿಯ ಹತ್ಯೆ

ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ | ತೀವ್ರ ರಕ್ತಸ್ರಾವದಿಂದ ಮೃತಪಟ್ಟ ನಾಗರತ್ನಾ
Published 6 ಜೂನ್ 2023, 1:00 IST
Last Updated 6 ಜೂನ್ 2023, 1:00 IST
ಅಕ್ಷರ ಗಾತ್ರ

ಬೆಂಗಳೂರು: ಬಸವೇಶ್ವರನಗರ ಠಾಣೆ ವ್ಯಾಪ್ತಿಯ ಮಂಜುನಾಥನಗರದ ಮನೆಯೊಂದರಲ್ಲಿ ನಾಗರತ್ನಾ (32) ಎಂಬುವವರನ್ನು ಹತ್ಯೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ಅಯ್ಯಪ್ಪನನ್ನು (35) ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ನಾಗರತ್ನಾ, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿದ್ದು, ಆರೋಪಿ ಅಯ್ಯಪ್ಪನನ್ನು ಬಂಧಿಸಲಾಗಿದೆ. ಸಂಬಂಧಿ ನೀಡಿರುವ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಯ್ಯಪ್ಪ, ಕೆ.ಆರ್. ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಅನಾಥಾಶ್ರಮದಲ್ಲಿ ಬೆಳೆದಿದ್ದ ನಾಗರತ್ನಾ ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಂಜುನಾಥ ನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಮಕ್ಕಳು, ಅಯ್ಯಪ್ಪನ ಸಂಬಂಧಿಕರ ಮನೆಯಲ್ಲಿದ್ದರು. ನಾಗರತ್ನಾ ಅವರ ಸಂಬಂಧಿಕರು ಮೈಸೂರಿನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದಾರೆ’ ಎಂದು ತಿಳಿಸಿದರು.

ಪರ ವ್ಯಕ್ತಿ ಜೊತೆ ಸಂಬಂಧ: ‘ಆರೋಪಿ ಅಯ್ಯಪ್ಪ ಕೆಲಸಕ್ಕೆ ಹೋದರೆ ಎರಡು–ಮೂರು ದಿನ ಬಿಟ್ಟು ಮನೆಗೆ ವಾಪಸು ಬರುತ್ತಿದ್ದ. ನಾಗರತ್ನಾ ಕೆಲಸಕ್ಕೆ ಹೋಗಿ ಬರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿ, ಅಕ್ರಮ ಸಂಬಂಧ ಏರ್ಪಟ್ಟಿತ್ತು. ಈ ಸಂಗತಿ ಪತಿ ಅಯ್ಯಪ್ಪಗೆ ಗೊತ್ತಾಗಿ ಗಲಾಟೆ ಆಗಿತ್ತು ಎಂಬ ಮಾಹಿತಿ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.

ಚಿಕ್ಕಮ್ಮನ ಮಗನ ಜೊತೆ ಸಿಕ್ಕಿಬಿದ್ದಿದ್ದ ನಾಗರತ್ನಾ

‘ಪರ ವ್ಯಕ್ತಿಯಿಂದ ದೂರ ಉಳಿದಿದ್ದ ನಾಗರತ್ನಾ, ಮೈಸೂರಿನಲ್ಲಿದ್ದ ತಮ್ಮ ಚಿಕ್ಕಮ್ಮನ ಮಗನ ಜೊತೆ ಸಲುಗೆ ಬೆಳೆಸಿದ್ದರು. ಅವರಿಬ್ಬರ ಅಕ್ರಮ ಸಂಬಂಧ ವಿಷಯ ಸಂಬಂಧಿಕರಿಗೆ ಗೊತ್ತಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಜೂನ್ 3ರಂದು ಮಂಜುನಾಥ್‌ನಗರದ ಮನೆಗೆ ಬಂದಿದ್ದ ಚಿಕ್ಕಮ್ಮನ ಮಗ, ನಾಗರತ್ನಾ ಜೊತೆ ಖಾಸಗಿ ಕ್ಷಣ ಕಳೆಯುತ್ತಿದ್ದ. ದಿಢೀರ್ ಮನೆಗೆ ಬಂದಿದ್ದ ಅಯ್ಯಪ್ಪ, ಬೆತ್ತಲೆಯಾಗಿದ್ದ ಇಬ್ಬರನ್ನೂ ನೋಡಿದ್ದ. ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ, ಸಂಬಂಧಿಕರನ್ನು ಸ್ಥಳಕ್ಕೆ ಕರೆಸಿದ್ದ. ಇಬ್ಬರಿಗೂ ಹಿರಿಯರು ಎಚ್ಚರಿಕೆ ನೀಡಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಹೇಳಿದರು.

ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಕೊಂದ: ‘ಅಯ್ಯಪ್ಪ ಹಾಗೂ ನಾಗರತ್ನಾ ಇಬ್ಬರೂ ಭಾನುವಾರ ಮನೆಯಲ್ಲಿದ್ದರು. ದೈಹಿಕ ಸಂಪರ್ಕಕ್ಕಾಗಿ ಅಯ್ಯಪ್ಪ ಒತ್ತಾಯಿಸಿದ್ದ. ಅದಕ್ಕೆ ನಾಗರತ್ನಾ ಒಪ್ಪಿರಲಿಲ್ಲ. ಊಟ ಮಾಡಿದ ನಂತರ, ನಾಗರತ್ನಾ ಪ್ರತ್ಯೇಕವಾಗಿ ಮಲಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮಲಗಿದ್ದ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಅಯ್ಯಪ್ಪ, ಅವರ ಗುಪ್ತಾಂಗಕ್ಕೆ ಹೊಡೆದಿದ್ದ. ನಂತರ, ಗುಪ್ತಾಂಗಕ್ಕೆ ಚಾಕುವಿನಿಂದ ಐದಾರು ಬಾರಿ ಇರಿದಿದ್ದ. ತೀವ್ರ ರಕ್ತಸ್ರಾವದಿಂದಾಗಿ ನಾಗರತ್ನಾ ಮೃತಪಟ್ಟಿದ್ದರು. ಮೃತದೇಹದ ಮೇಲಿನ ಬಟ್ಟೆ ಬಿಚ್ಚಿಟ್ಟಿದ್ದ ಅಯ್ಯಪ್ಪ, ಮನೆಯಿಂದ ಹೊರಗಡೆ ಹೋಗಿದ್ದ’ ಎಂದು ಹೇಳಿದರು.

ಅಯ್ಯಪ್ಪ
ಅಯ್ಯಪ್ಪ

‘ಗಲಾಟೆ ಬಗ್ಗೆ ಸ್ಥಳೀಯರೊಬ್ಬರು ಮೈಸೂರಿನಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಅವರು ನಗರದಲ್ಲಿದ್ದ ಸಂಬಂಧಿಕರಿಬ್ಬರಿಗೆ ವಿಷಯ ತಿಳಿಸಿದ್ದರು. ಇಬ್ಬರು ಸಂಬಂಧಿಕರು ಮನೆಯತ್ತ ಹೊರಟಿದ್ದರು. ಮಾರ್ಗಮಧ್ಯೆ ಅಯ್ಯಪ್ಪ ಸಿಕ್ಕಿದ್ದ. ಆತನನ್ನೂ ಕರೆದುಕೊಂಡು ಮನೆಗೆ ಹೋದಾಗ, ಬೆತ್ತಲೆ ಸ್ಥಿತಿಯಲ್ಲಿ ನಾಗರತ್ನಾ ಬಿದ್ದಿದ್ದರು. ‘ಸ್ನಾನ ಮಾಡಿ ಕೊಠಡಿಯಿಂದ ಹೊರಗೆ ಬಂದಿದ್ದ ಪತ್ನಿ ತಲೆ ತಿರುಗಿ ಬಿದ್ದಿದ್ದಾಳೆ’ ಎಂದು ಅಯ್ಯಪ್ಪ ಸುಳ್ಳು ಹೇಳಿದ್ದ. ಮೃತದೇಹಕ್ಕೆ ಚೂಡಿದಾರ ತೊಡಿಸಿ, ಎತ್ತಿಕೊಂಡು ಮನೆ ಎದುರಿನ ನೀರಿನ ಸಂಪಿನ ಬಳಿ ಮಲಗಿಸಿದ್ದ. ಅಯ್ಯಪ್ಪನ ಮಾತು ನಂಬಿದ್ದ ಸಂಬಂಧಿಕರು, ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಆಂಬುಲೆನ್ಸ್ ಸಿಬ್ಬಂದಿ, ತಪಾಸಣೆ ನಡೆಸಿ ನಾಗರತ್ನಾ ಮೃತಪಟ್ಟಿರುವುದಾಗಿ ಹೇಳಿದ್ದರು’

‘ತಪಾಸಣೆ ಸಂದರ್ಭದಲ್ಲಿ ಸ್ಥಳದಲ್ಲಿ ರಕ್ತ ಚೆಲ್ಲಿದ್ದನ್ನು ನೋಡಿ ಸಂಬಂಧಿಕರಿಗೆ ಅನುಮಾನ ಬಂದಿತ್ತು. ಅವರೇ ಠಾಣೆಗೆ ವಿಷಯ ತಿಳಿಸಿದ್ದರು. ಅಯ್ಯಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT