ಸೋಮವಾರ, ಮಾರ್ಚ್ 27, 2023
31 °C
ಕೊಲೆಗೂ ಮುನ್ನವೇ ನವದೆಹಲಿಗೆ ಟಿಕೆಟ್ ಕಾಯ್ದಿರಿಸಿದ್ದ ಆರೋಪಿ

ಪತ್ನಿಯನ್ನು ಕೊಂದು ವಿಮಾನದಲ್ಲಿ ಪರಾರಿ: ಪತಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಜ್ (22) ಎಂಬ ಮಹಿಳೆ ಕೊಲೆ ಪ್ರಕರಣದಲ್ಲಿ,ಪತಿ ನಾಸಿರ್ ಹುಸೇನ್ ಅವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

‘ತಾವರೆಕೆರೆಯ ಸುಭಾಷ್‌ ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಜ. 15ರಂದು ನಾಜ್ ಕೊಲೆ ಆಗಿತ್ತು. ಕೃತ್ಯ ಎಸಗಿ ಮನೆಯಿಂದ ಪರಾರಿಯಾಗಿದ್ದ ನಾಸಿರ್ ಹುಸೇನ್‌ನನ್ನು ದೆಹಲಿಯಲ್ಲಿ ಸೆರೆ ಹಿಡಿದು, ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಾಜ್ ಹಾಗೂ ನಾಸಿರ್, ಪರಸ್ಪರ ಪ್ರೀತಿಸಿ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ನಾಜ್ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಆರೋಪಿ ನಾಸಿರ್, ನಿತ್ಯವೂ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ನಾಜ್‌ ಅವರು ಗರ್ಭಿಣಿ ಎಂಬುದು ಇತ್ತೀಚೆಗೆ ಗೊತ್ತಾಗಿತ್ತು. ಅಷ್ಟಕ್ಕೆ ಕೋಪಗೊಂಡಿದ್ದ ಪತಿ, ‘ನೀನು ಅಕ್ರಮ ಸಂಬಂಧವಿಟ್ಟುಕೊಂಡಿದ್ದಿಯಾ? ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ. ಗರ್ಭಪಾತ ಮಾಡಿಸು’ ಎಂದು ಪಟ್ಟು ಹಿಡಿದಿದ್ದ.’

‘ಗರ್ಭಪಾತ ಮಾಡಿಸುವುದಿಲ್ಲವೆಂದು ನಾಜ್ ಹೇಳಿದ್ದರು. ಮತ್ತಷ್ಟು ಕೋಪಗೊಂಡಿದ್ದ ನಾಸಿರ್, ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಕೊಲೆಗೂ ಮುನ್ನವೇ ಬೆಂಗಳೂರಿನಿಂದ ದೆಹಲಿಗೆ ವಿಮಾನದ ಟಿಕೆಟ್ ಕಾಯ್ದರಿಸಿದ್ದ’ ಎಂದು ಮೂಲಗಳು ತಿಳಿಸಿವೆ.

ವಿಮಾನದಲ್ಲಿ ಕುಳಿತು ಕೊಲೆ ಸಂದೇಶ: ‘ಪತ್ನಿ ನಾಜ್ ಅವರನ್ನು ಕೊಲೆ ಮಾಡಿದ್ದ ನಾಸಿರ್, ಮನೆಯಿಂದ ನೇರವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದ. ನಿಗದಿಯಂತೆ ದೆಹಲಿ ವಿಮಾನದಲ್ಲಿ ಕುಳಿತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಮಾನದೊಳಗಿನಿಂದಲೇ ನಾಜ್ ಸಹೋದರನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ನಾಸಿರ್, ‘ನಿನ್ನ ತಂಗಿ ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆಕೆಯನ್ನು ಕೊಂದಿದ್ದು, ಮನೆಯಲ್ಲಿ ಮೃತದೇಹವಿದೆ’ ಎಂದು ಹೇಳಿದ್ದ’.

‘ಆರೋ‍ಪಿ ವಿಮಾನದಲ್ಲಿ ಪ್ರಯಾಣಿಸಿದ್ದ ಮಾಹಿತಿ ಲಭ್ಯವಾಗಿತ್ತು. ಅದೇ ಸುಳಿವು ಆಧರಿಸಿ ತನಿಖೆ ಮುಂದುವರಿಸಿದಾಗ, ಆತ ದೆಹಲಿಯಲ್ಲಿದ್ದ ಮಾಹಿತಿ ಸಿಕ್ಕಿತ್ತು’ ಎಂದು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು