ಉನ್ನತಾಧಿಕಾರಿಯಿಂದ ತನಿಖೆ: ಸಚಿವ ಭರವಸೆ

7
ಮಂಡ್ಯ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಭ್ರಷ್ಟಾಚಾರ: ಆರೋಪ

ಉನ್ನತಾಧಿಕಾರಿಯಿಂದ ತನಿಖೆ: ಸಚಿವ ಭರವಸೆ

Published:
Updated:

ಬೆಂಗಳೂರು: ಮಂಡ್ಯ ಹಾಲು ಉತ್ಪಾದಕರ ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಿಂದ ತನಿಖೆ ನಡೆಸುವುದಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಈ ವಿಚಾರ ಪ್ರಸ್ತಾಪಿಸಿದ ಎನ್‌. ಅಪ್ಪಾಜಿ ಗೌಡ, ‘ಒಕ್ಕೂಟವು 40 ಹುದ್ದೆಗಳಿಗೆ ನೇಮಕಾತಿ ನಡೆಸುವಾಗ ನಿಯಮಗಳನ್ನು ಉಲ್ಲಂಘಿಸಿದೆ. ಹೊರರಾಜ್ಯಗಳ ವಿಶ್ವವಿದ್ಯಾಲಯಗಳಿಮದ ನಕಲಿ ಅಂಕ ಪಟ್ಟಿ ತರಿಸಿಕೊಂಡು ಕೆಲವು ಹುದ್ದೆಗಳನ್ನು ಗಿಟ್ಟಿಸಿದ್ದಾರೆ. ಕೆಲವು ಅಭ್ಯರ್ಥಿಗಳಿಂದ ಲಕ್ಷಗಟ್ಟಲೆ ರೂಪಾಯಿ ಲಂಚ ಪಡೆಯಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ರೈತರ ಕಲ್ಯಾಣ ಟ್ರಸ್ಟ್‌ ರಚಿಸಿಕೊಂಡು ವಸತಿಶಾಲೆ ಆರಂಭಿಸಲು ಜಮೀನು ಖರೀದಿಸಲಾಗಿದೆ. ಈ ಜಾಗದ ಸುತ್ತ ಕ್ವಾರಿ ಇದೆ. ಇಲ್ಲೂ ಹಣ ದುರುಪಯೋಗವಾಗಿದೆ. ಹಾಲು ಉತ್ಪಾದಕರಿಗೆ ನೀಡುವ ಹಣವನ್ನು ಕಡಿತ ಮಾಡುವ ಮೂಲಕವೂ ಅಕ್ರಮ ನಡೆಸಲಾಗಿದೆ’ ಎಂದು ಅವರು ಆರೋಪಿಸಿದರು.

ಒಕ್ಕೂಟದಲ್ಲಿ ನಡೆದ ಅಕ್ರಮದ ಬಗ್ಗೆ ನಿಬಂಧಕರು ತನಿಖೆ ನಡೆಸಿದಾಗ ನಾಲ್ವರು ಸಿಬ್ಬಂದಿ ನಕಲಿ ಅಂಕ ಪಟ್ಟಿ ಸಲ್ಲಿಸಿ ಆಯ್ಕೆ ಆಗಿರುವುದು ಸಾಬೀತಾಗಿದ್ದು, ಅವರನ್ನು ವಜಾ ಮಾಡಲಾಗಿದೆ. ಅವರ ವಿರುದ್ಧ ಮದ್ದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ನಿರ್ದೇಶಕರು ಮತ್ತು ಅಧಿಕಾರಿಗಳು ಸೇರಿ 24 ಆರೋಪಿಗಳ ವಿರುದ್ಧ ತನಿಖೆ ನಡೆಸಲಾಗಿತ್ತು. ಈ ಪೈಕಿ ಒಬ್ಬ ಮಾತ್ರ ತಪ್ಪಿತಸ್ಥ ಎಂದು ಸಾಬೀತಾಗಿದೆ ಎಂದು ಸಚಿವರು ತಿಳಿಸಿದರು.

ಈ ತನಿಖೆಯ ಬಗ್ಗೆಯೇ ಅಪ್ಪಾಜಿ ಗೌಡ ಹಾಗೂ ವಿ.ಎಸ್‌.ಉಗ್ರಪ್ಪ ಸದಸ್ಯರು ಸಂದೇಹ ವ್ಯಕ್ತಪಡಿಸಿದರು. ಈ ಅಕ್ರಮ ತನಿಖೆಗೆ ಸದಸನ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಇದಕ್ಕೆ ಒಪ್ಪದ ಸಚಿವರು, ಹಿರಿಯ ಅಧಿಕಾರಿಗಳಿಂದ ಮತ್ತೊಮ್ಮೆ ತನಿಖೆ ನಡೆಸಲು ಸಮ್ಮತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !