ಮಂಗಳವಾರ, ಜನವರಿ 25, 2022
28 °C

ಮಂತ್ರಿ ಮಾಲ್‌: ಶಾಶ್ವತ ಪರಿಹಾರಕ್ಕೆ ಹೈಕೋರ್ಟ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ (ಮಲ್ಲೇಶ್ವರ) ಪದೇ ಪದೇ ಬೀಗ ಹಾಕುವ ಬದಲಿಗೆ ಈ ವಿಷಯದಲ್ಲಿ ಬಿಬಿಎಂಪಿಯು ಮಂತ್ರಿಮಾಲ್‌ನ ಬ್ಯಾಂಕ್‌ ಖಾತೆ ಅಥವಾ ಸ್ಥಿರ ಇಲ್ಲವೇ ಚರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಿವಿಲ್‌ ದಾವೆ ದಾಖಲಿಸಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುವುದು ಒಳಿತು’ ಎಂದು ಹೈಕೋರ್ಟ್‌ ಉಭಯತ್ರರಿಗೆ ಸಲಹೆ ನೀಡಿದೆ. 

‘ತೆರಿಗೆ ಬಾಕಿ ಪಾವತಿಸದ ಕಾರಣಕ್ಕೆ ಹಾಕಲಾಗಿರುವ ಬೀಗ ತೆರವುಗೊಳಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಮಂತ್ರಿ ಮಾಲ್‌ ಆಡಳಿತ ಮಂಡಳಿಯ ಮೆಸರ್ಸ್‌ ಅಭಿಷೇಕ್‌ ಪ್ರೊಪ್‌ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹಾಗೂ ಮೆಸರ್ಸ್‌ ಹಮಾರಾ ಶೆಲ್ಟರ್ಸ್‌ ಪ್ರವೇಟ್‌ ಲಿಮಿಟೆಡ್‌ ಕಂಪನಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿತು. 

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಬಿ.ಎಸ್.ಕಾರ್ತಿಕೇಯನ್‌, ‘ಮಂತ್ರಿ ಮಾಲ್‌ ನಾಲ್ಕು ವರ್ಷಗಳಿಂದ ₹ 33 ಕೋಟಿಗೂ ಅಧಿಕ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು 2021ರ ಡಿಸೆಂಬರ್ 5ರಂದು ಸಂಪೂರ್ಣ ಚುಕ್ತಾ ಮಾಡುವುದಾಗಿ ಕಳೆದ ವರ್ಷದ ಆರಂಭದಲ್ಲೇ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಆಡಳಿತ ಮಂಡಳಿ ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಕೋವಿಡ್‌ ನೆಪ ಹೇಳಿ ತೆರಿಗೆ ಪಾವತಿ ಮಾಡಿಲ್ಲ’ ಎಂದು ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಬಾಕಿ ಪಾವತಿಸಿಲ್ಲ ಎಂದು ನೀವು ಪದೇ ಪದೇ ಬೀಗ ಹಾಕುವುದು. ಅವರು ಅಷ್ಟೋ ಇಷ್ಟೋ ಪಾವತಿಸಿ ತತ್ಕಾಲದ ಸಂಕಷ್ಟ ಬಗೆಹರಿಸಿಕೊಳ್ಳಲು ಬೀಗ ತೆರವಿಗೆ ಮನವಿ ಮಾಡುವುದು ಸಮಂಜಸ ನಡೆಯಲ್ಲ. ಈ ಬದಲಿಗೆ ಸಿವಿಲ್‌ ದಾವೆಯ ಮುಖಾಂತರ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಿ’ ಎಂದು ಸಲಹೆ ನೀಡಿತು.

ಪರೀಕ್ಷೆಗೆ ಹೈಕೋರ್ಟ್‌ ಅನುಮತಿ: ನಿಗದಿತ ಅವಧಿಯೊಳಗೆ ಬೋಧನಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಏಳನೇ ಸೆಮಿಸ್ಟರ್‌ ಪರೀಕ್ಷೆಗೆ ಹಾಜರಾಗಲು ಸಮ್ಮತಿ ನೀಡದ ಖಾಸಗಿ ವಿಶ್ವವಿದ್ಯಾಲಯಕ್ಕೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿರುವ ಹೈಕೋರ್ಟ್‌, ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ಕಲ್ಪಿಸಿದೆ.

ಈ ಕುರಿತಂತೆ ನಗರದ ಅಮರೇಶ್ವರ ಕಾರಟಗಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಅಮರೇಶ್ವರ ಕಾರಟಗಿ ಯಲಹಂಕದ ರೇವಾ ಖಾಸಗಿ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಶನ್ ಬಿ.ಟೆಕ್‌ ಪದವಿ ವಿದ್ಯಾರ್ಥಿಯಾಗಿ 2018–19ರಲ್ಲಿ ಪ್ರವೇಶ ಪಡೆದಿದ್ದರು. ₹ 95 ಸಾವಿರ ಬೋಧನಾ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ವಿಶ್ವವಿದ್ಯಾಲಯ ಏಳನೇ ಸೆಮಿಸ್ಟರ್‌ ಪರೀಕ್ಷೆಗೆ ಹಾಲ್‌ ಟಿಕೆಟ್‌ ನೀಡಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು