ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಸ್ಪಷ್ಟ ವೈಜ್ಞಾನಿಕ ನೀತಿ ಅಗತ್ಯ: ಎಚ್‌.ಎನ್‌. ನಾಗಮೋಹನ ದಾಸ್‌

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಅಭಿಮತ
Last Updated 2 ಜನವರಿ 2023, 21:51 IST
ಅಕ್ಷರ ಗಾತ್ರ

ಬೆಂಗಳೂರು: ‘ಮೀಸಲಾತಿ ಕುರಿತು ವೈಜ್ಞಾನಿಕವಾದ ಸ್ಪಷ್ಟ ನೀತಿ ರೂಪಿಸದ ಪರಿಣಾಮ ಈಗ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಅಭಿಪ್ರಾಯಪಟ್ಟರು.

‘ ಕೇವಲ ರಾಜಕೀಯ ಲಾಭ ಅಥವಾ ಒತ್ತಡಗಳಿಗೆ ಮೀಸಲಾತಿ ಕಲ್ಪಿಸುವುದರಿಂದ ಯಾವುದೇ ಸಮುದಾಯವು ಸಮಗ್ರ ಅಭಿವೃದ್ಧಿ ಸಾಧಿಸುವುದು ಕಷ್ಟಸಾಧ್ಯ’ ಎಂದು ಅವರು ಹೇಳಿದರು.

ದಲಿತ ಹಕ್ಕುಗಳ ಸಮಿತಿ -ಕರ್ನಾಟಕ, ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ), ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಮೀಸಲಾತಿ–ಸಮುದಾಯಗಳು ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರವೇ?’ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಒಕ್ಕಲಿಗರು, ಲಿಂಗಾಯತರು ಸೇರಿ 44ಕ್ಕೂ ಹೆಚ್ಚು ಸಮುದಾಯಗಳು ಮೀಸಲಾತಿಗೆ ಹೋರಾಟ ನಡೆಸಿವೆ. ಈ ಸಮುದಾಯಗಳಲ್ಲಿ ಇರುವವರು ಬಹುತೇಕ ಕೃಷಿಕರು. ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದ ಕೃಷಿಕರು ಈಗ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಈ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದರೂ ಶೇ 4ರಷ್ಟು ಮಂದಿಗೆ ಮಾತ್ರವೇ ನೆರವಾಗಬಹುದು. ಉಳಿದವರ ಪರಿಸ್ಥಿತಿ ಬಗ್ಗೆಯೂ ಸರ್ಕಾರ ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯ ಸರ್ಕಾರಕ್ಕೆ 2ಸಿ ಮತ್ತು 2ಡಿ ವರ್ಗ ರೂಪಿಸುವ ಅಧಿಕಾರವಿದೆ. ಈ ರೀತಿ ವರ್ಗೀಕರಣಗಳಿಂದ ಯಾವ ರೀತಿ ಮೀಸಲಾತಿ ಕಲ್ಪಿಸಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಹೀಗಾಗಿ, ಮೀಸಲಾತಿ ಕಲ್ಪಿಸುವ ಮುನ್ನ ಆಕ್ಷೇಪಗಳು ಬಾರದಂತೆ ಸಮಗ್ರ ಮಾಹಿತಿ ಸಂಗ್ರಹಿಸಿ ನಿಯಮಾವಳಿಗಳನ್ನು ರೂಪಿಸಬೇಕು. ನಂತರವೇ ನಿರ್ಧಾರಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ದಲಿತ ಹಕ್ಕುಗಳ ಸಮಿತಿಯ ಬಿ.ರಾಜಶೇಖರಮೂರ್ತಿ ಅವರು, ‘ಎಲ್ಲ ಸಮುದಾಯಗಳು ಇಂದು ಮೀಸಲಾತಿಗೆ ಆಗ್ರಹಿಸುತ್ತಿವೆ. ರೈತರು, ಈ ಪರಿಸ್ಥಿತಿಯನ್ನು ಕೆಲ ರಾಜಕಾರಣಿಗಳು ಮತ್ತು ಮಠಾಧಿಪತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅರ್ಹ ಬಡವರಿಗೂ ಮೀಸಲಾತಿ ದೊರೆಯುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT