ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಾನ್ಯತಾ' ಸುತ್ತಲ ಬಡಾವಣೆಗಳಿಗೆ ಜಲಕಂಟಕದ ಭಯ

ಕಿರಿದಾಗುತ್ತಾ ಸಾಗುವ ರಾಜಕಾಲುವೆ; ನಿವಾಸಿಗಳ ನೆಮ್ಮದಿ ಕೆಡಿಸಿದ ಪ್ರವಾಹ
Last Updated 22 ಜುಲೈ 2021, 20:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆಯಿಂದ ನೀರು ಉಕ್ಕಿ ಮನೆಗೆ ನುಗ್ಗುವ ಭಯ, ಮಳೆಗಾಲದಲ್ಲಿ ಮಾಯವಾದ ಸುಖನಿದ್ರೆ, ಮನೆಗಳ ತಳಪಾಯವನ್ನೇ ಎತ್ತರಿಸುತ್ತಿರುವ ನಿವಾಸಿಗಳು...

ಇದು ಮಾನ್ಯತಾ ಟೆಕ್‌ಪಾರ್ಕ್ ಹಿಂಭಾಗದಲ್ಲಿರುವ ಮರಿಯಣ್ಣಪಾಳ್ಯದ ಡಿಫೆನ್ಸ್ ಲೇಔಟ್‌ ನಿವಾಸಿಗಳ ಸ್ಥಿತಿ. ಕಳೆದ ವರ್ಷ ಮಳೆಗಾಲದಲ್ಲಿ ಕೆರೆ, ಕಟ್ಟೆಗಳು, ರಾಜಕಾಲುವೆಗಳೆಲ್ಲವೂ ತುಂಬಿ ಹರಿದವು. ಈ ಸಂದರ್ಭದಲ್ಲಿ ಮರಿಯಣ್ಣಪಾಳ್ಯ ಮತ್ತು ಮಾನ್ಯತಾ ಟೆಕ್‌ಪಾರ್ಕ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿತ್ತು. ಇಲ್ಲಿನ ನಿವಾಸಿಗಳಲ್ಲಿ ಜಲಪ್ರಳಯವೇ ಸಂಭವಿಸಿರಬಹುದು ಎಂಬ ಅನುಮಾನ ಹುಟ್ಟುವಂತೆ ಮಾಡಿತ್ತು.

ಹೆಬ್ಬಾಳ ಕೆರೆ ಮತ್ತು ನಾಗವಾರ ಕೆರೆಗಳು ತುಂಬಿದ ನಂತರ ಪಿನಾಕಿನಿ ಕಣಿವೆ ಕಡೆಗೆನೀರು ಹರಿಯುತ್ತದೆ.ಯಲಹಂಕ, ಅಲ್ಲಾಳಸಂದ್ರ, ಜಕ್ಕೂರು, ರಾಚೇನಹಳ್ಳಿ ಕೆರೆಗಳ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆ ಮತ್ತು ಹೆಗಡೆ ನಗರ, ಶಿವರಾಮ ಕಾರಂತ ನಗರ ಕಡೆಯಿಂದ ಬರುವ ಮಗದೊಂದು ರಾಜಕಾಲುವೆ ಕೂಡ ಮಾನ್ಯತಾ ಟೆಕ್‌ಪಾರ್ಕ್‌ ಆವರಣ ಪ್ರವೇಶಿಸುವ ಮೊದಲೇ ಒಟ್ಟುಗೂಡಿ ಹರಿಯುತ್ತವೆ.

‘ಆಗ ನೀರಿನ ಪ್ರಮಾಣ ಮೂರುಪಟ್ಟು ಹೆಚ್ಚಾಗುತ್ತದೆ. ನೀರಿನ ಹರಿವಿಗೆ ತಕ್ಕಂತೆ ರಾಜಕಾಲುವೆ ದೊಡ್ಡದಾಗುತ್ತಾ ಹೋಗಬೇಕು. ಆದರೆ, ಇಲ್ಲಿ ತದ್ವಿರುದ್ಧವಾಗಿದೆ. ನಾಗವಾರ ಬಳಿ ದೊಡ್ಡದಾಗಿ ಕಾಣಿಸುವ ರಾಜಕಾಲುವೆ ಮಾನ್ಯತಾ ಟೆಕ್ ಪಾರ್ಕ್‌ ದಾಟಿ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿನ ಎಲಿಮೆಂಟ್ಸ್‌ ಮಾಲ್‌ ಬಳಿಗೆ ಹೋಗುವಷ್ಟರಲ್ಲಿ ಚಿಕ್ಕದಾಗಿದೆ. ಹೀಗಾಗಿಯೇ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಸುತ್ತಮುತ್ತಲ ಬಡಾವಣೆಗಳಿಗೆ ನುಗ್ಗುತ್ತಿದೆ’ ಎನ್ನುತ್ತಾರೆ ಸ್ಥಳೀಯರು.

‘ರಾಜಕಾಲುವೆಯನ್ನು ಕಾಂಕ್ರಿಟ್ ಮಯ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ನೀರು ಇಂಗಲು ಅವಕಾಶ ಇರಬೇಕು. ಪ್ರತಿ ರಾಜಕಾಲುವೆಗೂ ಬಫರ್ ವಲಯ ಇರಬೇಕು. ರಾಜಕಾಲುವೆಯನ್ನೇ ಕಿರಿದು ಮಾಡಿದ್ದು, ಬಫರ್‌ ವಲಯವಂತೂ ಇಲ್ಲವೇ ಇಲ್ಲ. ಹೀಗಾಗಿ ಜೋರು ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗುತ್ತಿದೆ’ ಎನ್ನುತ್ತಾರೆ ಅವರು.

ಮಾನ್ಯತಾ ಟೆಕ್‌ಪಾರ್ಕ್ ಆವರಣದೊಳಗಿನ ರಾಜಕಾಲುವೆಗೆ ಹಾಕಿದ್ದ ಚಾವಣಿಯನ್ನು ಬಿಬಿಎಂಪಿ ಅಧಿಕಾರಿಗಳು ಕಳೆದ ವರ್ಷ ತೆರವುಗೊಳಿಸಿದ್ದರು. ಈಗ ಡಿಫೆನ್ಸ್ ಲೇಔಟ್‌ ಪಕ್ಕದಲ್ಲಿ ಎರಡು ರಾಜಕಾಲುವೆ ವಿಲೀನ ಆಗುವ ಸ್ಥಳದಲ್ಲಿದ್ದ ಚಾವಣಿಯನ್ನೂ ತೆಗೆದು ಅದರಲ್ಲಿದ್ದ ಕಸ–ಕಡ್ಡಿಯನ್ನು ಹೊರ ಹಾಕಿದ್ದಾರೆ. ನೀರು ನುಗ್ಗಿದ್ದ ಸ್ಥಳ ಗುರುತಿಸಿ ತಡೆಗೋಡೆಯನ್ನೂ ಎತ್ತರಿಸಿದ್ದಾರೆ.

ಆದರೂ, ಕಿರಿದಾಗಿರುವ ರಾಜಕಾಲುವೆ ಉಕ್ಕುವ ಭಯ ಜನರಲ್ಲಿ ಕಡಿಮೆಯಾಗಿಲ್ಲ. ಈ ವರ್ಷ ಇನ್ನೂ ಜೋರು ಮಳೆ ಬಂದಿಲ್ಲ. ನಾಗವಾರ ಮತ್ತು ರಾಚೇನಹಳ್ಳಿ ಕೆರೆಗಳು ತುಂಬಿದರೆ ಸಮಸ್ಯೆ ಮತ್ತೆ ಎದುರಾಗಲಿದೆ ಎಂಬ ಆತಂಕದಲ್ಲಿದ್ದಾರೆ.

ಅಡಿಪಾಯವನ್ನೇ ಎತ್ತರಿಸುತ್ತಿರುವ ನಿವಾಸಿಗಳು

ಮರಿಯಣ್ಣಪಾಳ್ಯದ ಡಿಫೆನ್ಸ್ ಲೇಔಟ್‌ನಲ್ಲಿ ಇತ್ತೀಚೆಗೆ ಮನೆ ಕಟ್ಟುತ್ತಿರುವ ಜನರು, ಅಡಿಪಾಯವನ್ನೇ ಎತ್ತರಿಸುತ್ತಿದ್ದಾರೆ. ಒಬ್ಬರು ರಸ್ತೆಯಿಂದ ಎರಡೂವರೆ ಅಡಿ ಎತ್ತರಕ್ಕೆ ಅಡಿಪಾಯ ಎತ್ತರಿಸಿದ್ದರೆ, ಮತ್ತೊಬ್ಬರು 5 ಅಡಿಯಷ್ಟು ಎತ್ತರಿಸಿ ಕಟ್ಟಡ ನಿರ್ಮಿಸುತ್ತಿದ್ದಾರೆ.

‘ಮಳೆಗಾಲದಲ್ಲಿ ಆಗುವ ಸಮಸ್ಯೆ ನೆನಪಿಸಿಕೊಂಡರೆ ಈ ಬಡಾವಣೆಯಲ್ಲಿ ಮನೆ ಕಟ್ಟುವುದೇ ಬೇಡ ಎಂದುಕೊಂಡಿದ್ದೆವು. ಅನಿವಾರ್ಯವಾಗಿ ತಳಪಾಯ ಎತ್ತರಿಸಿ ಕಟ್ಟುತ್ತಿದ್ದೇವೆ’ ಎಂದು ಮನೆ ನಿರ್ಮಾಣ ಕೆಲಸ ಮಾಡಿಸುತ್ತಿದ್ದ ಸೋಮಶೇಕರ್ ಹೇಳಿದರು.

ಮಳೆಗಾಲದಲ್ಲಿ ಮನೆಗೆ ನೀರು ನುಗ್ಗಲಿದೆ ಎಂಬ ಆತಂಕದಲ್ಲಿ ನೆಲಮಹಡಿಯ ಮನೆಗಳನ್ನು ಹಲವರು ಖಾಲಿ ಮಾಡಿದ್ದಾರೆ ಎಂದೂ ತಿಳಿಸಿದರು.

‘ಯಾವುದೇ ಸಮಸ್ಯೆ ಆಗದು’

‘ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿ ರಾಜಕಾಲುವೆಗೆ ಹಾಕಿದ್ದ ಚಾವಣಿ ಮತ್ತು ಪೈಪ್‌ಗಳನ್ನು ತೆರವುಗೊಳಿಸಿದ್ದೇವೆ. ಆದ್ದರಿಂದ ಈ ವರ್ಷ ಯಾವುದೇ ಸಮಸ್ಯೆ ಆಗದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಾಜಕಾಲುವೆ) ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

‘ಡಿಫೆನ್ಸ್ ಲೇಔಟ್‌ ಪಕ್ಕದ ರಾಜಕಾಲುವೆ ಚಾವಣಿಯನ್ನೂ ತೆಗೆದು ಸ್ವಚ್ಛಗೊಳಿಸಲಾಗಿದೆ. ಜನರು ಆತಂಕಪಡದೆ ನೆಮ್ಮದಿಯಿಂದ ಇರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT