ಮಂಗಳವಾರ, ಅಕ್ಟೋಬರ್ 20, 2020
21 °C
‘ಎ’ ದರ್ಜೆಯ 40 ದೇವಾಲಯಗಳಲ್ಲಿ 252 ಜೋಡಿಗೆ ಸಾಮೂಹಿಕ ವಿವಾಹ

ಕೋವಿಡ್‌ ಮಧ್ಯೆಯೇ ‘ಸಪ್ತಪದಿ’

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಹರಡುತ್ತಿರುವ ಮಧ್ಯೆಯೂ ಈಗಾಗಲೇ ನೋಂದಣಿ ಮಾಡಿಕೊಂಡಿರುವ 252 ಜೋಡಿಗೆ ‘ಎ’ ದರ್ಜೆಯ ವಿವಿಧ ದೇವಾಲಯಗಳಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಹಿಂದೆ, ಏ. 26 ಮತ್ತು ಮೇ 24ರಂದು ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು. ಯಾವುದೇ ವಿಳಂಬ ಮಾಡದೆ, ಸಾಮೂಹಿಕ ವಿವಾಹ ಹಮ್ಮಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

ಕೋವಿಡ್‌ –19 ನಿಬಂಧನೆಗಳನ್ನು ಅನುಸರಿಸಿಕೊಂಡು ನ. 19, 27, ಡಿ. 2, 7, 10 ಈ ಐದು ದಿನಗಳಲ್ಲಿ, ದಿನ ಆಯ್ಕೆ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ.

5 ಜೋಡಿಗಿಂತ ಕಡಿಮೆ ನೋಂದಣಿ ಮಾಡಿಕೊಂಡಿರುವ 27 ದೇವಾಲಯಗಳು ಒಂದು ದಿನವನ್ನು ನಿಗದಿ‍ಪಡಿಸಿಕೊಳ್ಬೇಕು. 6ರಿಂದ 10 ಜೋಡಿನೋಂದಾಯಿಸಿಕೊಂಡಿರುವ 8 ದೇವಾಲಯಗಳು ಒಂದು ಅಥವಾ ಎರಡು ದಿನ ನಿಗದಿಪಡಿಸಿಕೊಳ್ಳಬೇಕು. ತಲಾ 12 ಜೋಡಿ ನೋಂದಾಯಿಸಿರುವ ಎರಡು ಮತ್ತು ತಲಾ 23 ಜೋಡಿ ನೋಂದಾಯಿಸಿಕೊಂಡಿರುವ ಎರಡು ದೇವಾಲಯಗಳು ಎರಡು ಅಥವಾ ಮೂರು ದಿನ ನಿಗದಿಪ‍ಡಿಸಿಕೊಳ್ಳಬೇಕು ಎಂದೂ ತಿಳಿಸಲಾಗಿದೆ.‌

ಅತೀ ಹೆಚ್ಚು 60 ಜೋಡಿ ನೋಂದಾಯಿಸಿಕೊಂಡಿರುವ ಒಂದು ದೇವಾಲಯದಲ್ಲಿ (ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕನಕಗಿರಿಯ ಕನಕಾಚಲಪತಿ) ಕೋವಿಡ್‌ ಕಾರಣಕ್ಕೆ ಮದುವೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ನಿಗದಿಪಡಿಸಿರುವ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ದಿನಗಳನ್ನು ಗೊತ್ತು ಮಾಡಿ ವಿವಾಹ ನಡೆಸಿ ಎಂದೂ ಸ್ಪಷ್ಟಪಡಿಸಲಾಗಿದೆ.

‘ಸಪ್ತಪದಿ’ 2019–20ನೇ ಸಾಲಿನ ಕಾರ್ಯಕ್ರಮವಾಗಿದ್ದು, ಇಲಾಖೆ ವ್ಯಾಪ್ತಿಯ ಉತ್ತಮ ಆದಾಯವಿರುವ, ಕಲ್ಯಾಣ ಮಂಟಪ, ಶೌಚಾಲಯ, ಕುಡಿಯುವ ನೀರು, ಅನ್ನ ದಾಸೋಹ ವ್ಯವಸ್ಥೆ ಇರುವ ‘ಎ’ ದರ್ಜೆಯ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.

***

ಸಪ್ತಪದಿ’ಯನ್ನು ಮುನ್ನೆಚ್ಚರಿಕೆ ವಹಿಸಿಕೊಂಡು ಯಾವ ರೀತಿ ಆಯೋಜಿಸಬೇಕು ಎಂಬ ಬಗ್ಗೆ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಸಿದ್ಧಪಡಿಸುತ್ತಿದ್ದೇವೆ.

- ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

***

ವಧುವಿಗೆ 8 ಗ್ರಾಂ ಚಿನ್ನ

‘ಪ್ರತಿ ವಧುವಿಗೆ 8 ಗ್ರಾಂ ಚಿನ್ನ ಅಥವಾ ₹ 40 ಸಾವಿರ ಮೌಲ್ಯಕ್ಕೆ ಲಭ್ಯವಾಗುವ ಚಿನ್ನ ನೀಡುವ ಕುರಿತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಕೋವಿಡ್‌ ಕಾರಣಕ್ಕೆ ಈಗಾಗಲೇ ನಿಗದಿಪಡಿಸಿರುವ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಪ್ರಕಾರ ಸಾಮೂಹಿಕ ವಿವಾಹ ನಡೆಸಲು ಪ್ರತಿ ವಿಭಾಗಕ್ಕೆ ನೋಡಲ್‌ ಅಧಿಕಾರಿ ನಿಯೋಜಿಸಬೇಕು’ ಎಂದೂ ಆಯುಕ್ತರಿಗೆ ಬರೆದ ಪತ್ರದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು