ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣೆಗೆ ಬಹುಪಯೋಗಿ ‘ಮುಖಗವಚ’

3 ಸಾವಿರ ಸಿಬ್ಬಂದಿಗೆ ವಿತರಣೆ l 16 ಸಾವಿರ ಸಿಬ್ಬಂದಿಗೆ ನೀಡುವ ಗುರಿ
Last Updated 10 ಏಪ್ರಿಲ್ 2020, 21:15 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯಲು ಸರ್ಕಾರ ರೂಪಿಸುತ್ತಿರುವ ನಿಯಮಗಳನ್ನು ಜಾರಿಗೆ ತರುವು
ದಕ್ಕಾಗಿ ಪೊಲೀಸರು ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ.ನಿತ್ಯವೂ ಜನರೊಂದಿಗೆ ಒಡನಾಟವಿಟ್ಟುಕೊಳ್ಳುವ ಪೊಲೀಸರ ರಕ್ಷಣೆಗಾಗಿ ಬಹುಪಯೋಗಿ ‘ಮುಖಗವಚು’ಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳ ವಿತರಣೆಯೂ ಆರಂಭವಾಗಿದೆ.

ಲಾಕ್‌ಡೌನ್ ಹಾಗೂ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕಾಗಿ ನಗರದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಪ್ರದೇಶಗಳಲ್ಲೂ ಬ್ಯಾರಿಕೇಡ್ ಹಾಗೂ ಹಗ್ಗದ ಮೂಲಕ ರಸ್ತೆಯನ್ನು ಬಂದ್ ಮಾಡಲಾಗಿದೆ. ಅಲ್ಲೆಲ್ಲ ದಿನದ 24 ಗಂಟೆಯೂ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದು, ಅವರ ರಕ್ಷಣೆಗಾಗಿ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.

ರಸ್ತೆಯಲ್ಲಿ ಓಡಾಡುವ ಹಾಗೂ ವಾಹನಗಳಲ್ಲಿ ಸಂಚರಿಸುವ ಸಾರ್ವಜನಿಕರನ್ನು ತಡೆದು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಇದೇ ವೇಳೆ ಅವರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಮಾಸ್ಕ್‌ ಮಾತ್ರ ಧರಿಸುವುದರಿಂದ ರಕ್ಷಣೆ ಸಿಗುವುದಿಲ್ಲ. ಹೀಗಾಗಿ, ಮುಖವನ್ನು ಪೂರ್ತಿಯಾಗಿ ರಕ್ಷಿಸುವ ಕವಚಗಳನ್ನು ಪೊಲೀಸರಿಗೆ ನೀಡಲಾಗುತ್ತಿದೆ.

‘ವೈದ್ಯಕೀಯ ಸಿಬ್ಬಂದಿ ಮರುಬಳಕೆ ಮಾಡದ ಮುಖಕವಚಗಳನ್ನು ಬಳಸುತ್ತಾರೆ. ಅಂಥ ಕವಚಗಳಲ್ಲೇ ಕೆಲ ಮಾರ್ಪಾಡುಗಳನ್ನು ಮಾಡಿ ಮರುಬಳಕೆ ಮಾಡುವ ರೀತಿಯಲ್ಲಿ ಪೊಲೀಸರಿಗಾಗಿ ಹೊಸ ಮುಖಗವಚ ಸಿದ್ಧಪಡಿಸಲಾಗಿದೆ. ಅದರ ಬಳಕೆಯೂ ಶುರುವಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್ ಶುರುವಾಗುತ್ತಿದ್ದಂತೆ ಪೊಲೀಸರ ರಕ್ಷಣೆಗೆ ಒತ್ತು ನೀಡಬೇಕಾಯಿತು. ಅವಾಗಲೇ ಈ ಮುಖಗವಚ ಯೋಚನೆ ಹೊಳೆಯಿತು. ಪೀಣ್ಯದ ಕಂಪನಿಯೊಂದರ ಪ್ರತಿನಿಧಿಯನ್ನು ಸಂಪರ್ಕಿಸಿ ನಮ್ಮ ಅಗತ್ಯಕ್ಕೆ ತಕ್ಕಂತೆ ಮುಖಗವಚ ಸಿದ್ಧಪಡಿಸಲಾಯಿತು. ಕೊರೊನಾ ವೈರಾಣು ಮಾತ್ರವಲ್ಲದೇ ಇತರೆ ಕರ್ತವ್ಯದ ವೇಳೆಯಲ್ಲೂ ಈ ಮುಖಗವಚ ಉಪಯೋಗಕ್ಕೆ ಬರಲಿದೆ’ ಎಂದು ಅವರು ಹೇಳಿದರು.

16 ಸಾವಿರ ಸಿಬ್ಬಂದಿಗೆ ವಿತರಿಸುವ ಗುರಿ: ‘ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 16 ಸಾವಿರ ಸಿಬ್ಬಂದಿಗೆ ಮುಖಗವಚ
ವಿತರಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಕಂಪನಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ’ ಎಂದು ರವಿಕಾಂತೇಗೌಡ ಹೇಳಿದರು.

‘ಹೊಸ ರೀತಿಯ ಮುಖಗವಚಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ನಗರ ಕಮಿಷನರ್ ಭಾಸ್ಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಖಗವಚ ಖರೀದಿಗೆ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ನೆರವು ನೀಡಲು ಒಪ್ಪಿದೆ’ ಎಂದು ರವಿಕಾಂತೇಗೌಡ ಹೇಳಿದರು.

‘3 ಸಾವಿರ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಮುಖಗವಚ ವಿತರಿಸಲಾಗಿದೆ. ಅದನ್ನು ಧರಿಸಿಯೇ ಅವರೆಲ್ಲ ಕೆಲಸ ಮಾಡುತ್ತಿದ್ದಾರೆ. ಮತ್ತೆಏನಾದರೂ ಮಾರ್ಪಾಡುಗಳು ಇದ್ದರೆ,ಅದಕ್ಕೆ ತಕ್ಕಂತೆ ಮುಖಗವಚ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಗಟ್ಟಿಮುಟ್ಟಾದ ಕವಚ

ಫೈಬರ್ ಬಳಕೆ ಮಾಡಿ ಮುಖಗವಚ ಸಿದ್ಧಪಡಿಸಲಾಗಿದ್ದು, ಹೆಚ್ಚು ಗಟ್ಟಿಮುಟ್ಟಾಗಿದೆ. ಕವಚ ತುದಿಯಲ್ಲಿ ಪಟ್ಟಿ ಇದೆ. ಪ್ರತಿಯೊಬ್ಬರ ಹಣೆಯ ಗಾತ್ರಕ್ಕೆ ತಕ್ಕಂತೆ ಈ ಕವಚವನ್ನು ಹಾಕಿಕೊಳ್ಳಬಹುದಾಗಿದೆ. ಗಾಳಿ ಹಾಗೂ ಬಿಸಿಲಿನಿಂದಲೂ ರಕ್ಷಣೆ ಸಿಗಲಿದೆ.

ಕವಚದ ವೈಸರ್‌ನ್ನು ಮೇಲೆ ಹಾಗೂ ಕೆಳಗೆ ಸರಿಸಬಹುದಾಗಿದೆ. ಜನರು ಇದ್ದ ವೇಳೆ ಮಾತ್ರ ವೈಸರ್ ಬಳಸಿ, ನಂತರ ತೆಗೆಯಲೂ ಅವಕಾಶವಿದೆ.

ಕೊರೊನಾ ವೈರಾಣು ಹರಡುವಿಕೆ ತಡೆಯುವ ಕರ್ತವ್ಯದಲ್ಲಿರುವ ಪೊಲೀಸರಿಗೆ ಈ ಮುಖಗವಚ ಅತೀ ಉಪಯೋಗಕಾರಿಯಾಗಿದೆ. ಇದರ ಹೊರತಾಗಿ ಪ್ರತಿಭಟನೆ, ಗಲಾಟೆ ಸೇರಿ ಇತರೆ ಸಂದರ್ಭದಲ್ಲೂ ಪೊಲೀಸರು ಇದನ್ನು ಬಳಸಬಹುದಾಗಿದೆ. ಜೊತೆಗೆ, ಮರುಬಳಕೆ ಮಾಡಬಹುದಾದ ಮುಖಗವಚ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT