ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಧರಿಸಿ ನೋಡುತ್ತಿರುವುದಷ್ಟೇ ಈ ಸಲದ ವಿಶೇಷ

ಹಾರಟ ನಡೆಸದ ವಿದೇಶಿ ವಿಮಾನ *ಇಲ್ಲದ ಹೊಸತನ –ಪ್ರೇಕ್ಷಕರಿಗೆ ನಿರಾಸೆ
Last Updated 4 ಫೆಬ್ರುವರಿ 2021, 18:16 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ವಾಯುನೆಲೆಯ ಮೇಲಿನ ನೀಲಾಗಸದಲ್ಲಿ ಗುರುವಾರವು ಸೂರ್ಯಕಿರಣ– ಸಾರಂಗ ತಂಡಗಳದ್ದೇ ಕಾರುಬಾರು. ತೇಜಸ್‌, ಸುಖೋಯ್‌–30 ಹಾಗೂ ರಫೆಲ್‌ ವಿಮಾನಗಳದ್ದೇ ಆರ್ಭಟ. ಮೊದಲ ಬಾರಿ ಈ ಕಸರತ್ತುಗಳನ್ನು ವೀಕ್ಷಿಸುವವರಿಗೆ ಈ ವಿಮಾನಗಳು ಬಾನಿನಲ್ಲಿ ಮೂಡಿಸಿದ ವಿನ್ಯಾಸಗಳು ರೋಮಾಂಚನ ಮೂಡಿಸಿದವು. ಅವರು ಕಣ್ರೆಪ್ಪೆ ಮುಚ್ಚದೆಯೇ ಈ ಸಾಹಸಗಳನ್ನು ಆಸ್ವಾದಿಸಿದರು.

ಆದರೆ, ಏರೊ ಇಂಡಿಯಾದ ಈ ಹಿಂದಿನ ಆವೃತ್ತಿಗಳಲ್ಲಿ ಭಾಗಿಯಾಗಿ ವಿದೇಶಿ ಯುದ್ಧವಿಮಾನಗಳ ರಣೋತ್ಸಾಹದ ಕ್ಷಣಗಳ ಕಣ ಕಣಗಳನ್ನೂ ಕಣ್ತುಂಬಿಕೊಂಡವರಿಗೇಕೋ ಈ ತಂಡಗಳ ಕಸರತ್ತು ಅಷ್ಟಾಗಿ ರುಚಿಸಿದಂತೆ ಕಾಣಿಸಲಿಲ್ಲ.ದಿನವಿಡಿ ಯಾವುದೇ ವಿದೇಶಿ ವಿಮಾನ ಹಾರಾಟ ನಡೆಸಲಿಲ್ಲ ಎಂಬ ನಿರಾಸೆಯೂ ಅವರಲ್ಲಿ ಮನೆ ಮಾಡಿತ್ತು.

‘ಕೋವಿಡ್‌ ಸಂದರ್ಭದಲ್ಲಿ ಇಂತಹ ಪ್ರದರ್ಶನಗಳನ್ನು ಸಂಘಟಿಸುವುದು ಸುಲಭವಲ್ಲ. ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆಯೂ ಅನೇಕ ನಿರ್ಬಂಧಗಳಿರುತ್ತದೆ. ಇಂತಹ ಕ್ಲಿಷ್ಟಕರ ಸಮಯದಲ್ಲೂ ಇಂತಹದ್ದೊಂದು ವೈಮಾನಿಕ ಹಬ್ಬವನ್ನು ಹಮ್ಮಿಕೊಂಡಿದ್ದು ಒಳ್ಳೆಯದೇ. ಆದರೆ, ಈ ಬಾರಿ ಹೊಸತನ್ನು ವೀಕ್ಷಿಸಲು ಏನೂ ಇಲ್ಲ ಎಂಬ ಬೇಸರವಿದೆ’ ಎಂದು ಕೆಲವರು ‘ಪ್ರಜಾವಾಣಿ' ಜೊತೆ ಅಭಿಪ್ರಾಯ ಹಂಚಿಕೊಂಡರು.

‘ನಾನು ಏರೊ ಇಂಡಿಯಾದ ಅನೇಕ ಆವೃತ್ತಿಗಳಲ್ಲಿ ಭಾಗವಹಿಸಿದ್ದೇನೆ. ಈ ಬಾರಿ ನಾವೆಲ್ಲ ಮಾಸ್ಕ್‌ ಧರಿಸಿದ್ದು ಬಿಟ್ಟರೆ, ಬೇರೇನೂ ಹೊಸತು ಕಾಣಿಸಲಿಲ್ಲ’ ಎಂದು ರಷ್ಯಾದಿಂದ ಬಂದಿರುವ ಮರಿನಾ ಅಭಿಪ್ರಾಯಪಟ್ಟರು.

‘ಈ ಬಾರಿ ಪ್ರದರ್ಶನದಲ್ಲಿ ಎಲ್ಲ ವ್ಯವಸ್ಥೆಗಳನ್ನು ಚೆನ್ನಾಗಿ ಮಾಡಿದ್ದಾರೆ. ರಫೆಲ್‌ ಹಾಗೂ ತೇಜಸ್‌ ಹಾರಾಟ ಖುಷಿ ಕೊಟ್ಟಿತು. ಈ ಬಾರಿ ಜನಜಂಗುಳಿ ಇಲ್ಲದೇ ಪ್ರದರ್ಶನ ವೀಕ್ಷಿಸಲು ಸಾಧ್ಯವಾಗಿದೆ’ ಎಂದು ಮೋಹನ್‌ ಅಭಿಪ್ರಾಯಪಟ್ಟರು. ಈ ಬಾರಿ ವಿದೇಶಿ ವಿಮಾನಗಳ ಹಾರಾಟ ನೋಡಲು ಅವಕಾಶ ಸಿಗದ ಬಗ್ಗೆ ತುಸು ಅಸಮಾಧಾನವನ್ನೂ ಅವರು ತೋಡಿಕೊಂಡರು.

ಮೊದಲ ಸಲ ಈ ಪ್ರದರ್ಶನ ವೀಕ್ಷಿಸಿದ ಸುನೀತಾ ಅವರಿಗೆ ಖುಷಿಯೋ ಖುಷಿ. ‘ವಿಮಾನಗಳ ಕಸರತ್ತುಗಳನ್ನು ನೋಡಿದಾಗ ಇದೆಲ್ಲ ನಿಜಕ್ಕೂ ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ಇಷ್ಟು ಹತ್ತಿರದಿಂದ ಇದನ್ನೆಲ್ಲ ನೋಡುತ್ತೇನೆ ಎಂದು ಭಾವಿಸಿರಲಿಲ್ಲ’ ಎಂದು ಮೈಸೂರಿನಿಂದ ಬಂದಿರುವ ಸುನೀತಾ ಹೇಳಿದರು.

‘ನಾನು ವಿಮಾನದಲ್ಲಿ ವಿದೇಶಗಳಿಗೆ ಓಡಾಡಿದ್ದೇನೆ. ಆದರೆ, ಆಗಸದಲ್ಲಿ ಇಷ್ಟೆಲ್ಲ ಕಸರತ್ತು ಪ್ರದರ್ಶಿಸುವುದು ಸುಮ್ಮನೇನಾ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಪ್ರದರ್ಶನ ಮುದ ನೀಡಿತು’ ಎಂದು ವನಜಾಕ್ಷಿ ತಿಳಿಸಿದರು.

ಪ್ರದರ್ಶನ: ಇಂದು ಕೊನೇ ದಿನ

ಮೂರು ದಿನಗಳ ವೈಮಾನಿಕ ಪ್ರದರ್ಶನ ಶುಕ್ರವಾರ ಕೊನೆಗೊಳ್ಳಲಿದೆ. ರಾಷ್ಟ್ರಪತಿ ರಮಾನಾಥ ಕೋವಿಂದ್‌ ಅವರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ಏರೊ ಇಂಡಿಯಾ ಪ್ರದರ್ಶನದಲ್ಲಿ ಯುದ್ಧವಿಮಾನಗಳ ಕಣ್ಸೆಳೆವ ಕಸರತ್ತುಗಳನ್ನು ರಾಷ್ಟ್ರಪತಿಯೊಬ್ಬರು ಖುದ್ದಾಗಿ ಕಣ್ತುಂಬಿಕೊಳ್ಳುತ್ತಿರುವುದು ಇದೇ ಮೊದಲು.

-0-

- ಬದುಕಿನಲ್ಲಿ ಇವೆಲ್ಲವನ್ನು ನೋಡುತ್ತೇನೆ ಎಂದು ಕೊಂಡಿರಲಿಲ್ಲ. ಈ ಪ್ರದರ್ಶನ ತುಂಬಾ ಖುಷಿ ನೀಡಿದೆ
ವನಜಾಕ್ಷಿ

-0-

ವೈಮಾನಿಕ ಪ್ರದರ್ಶನ ವೀಕ್ಷಿಸಬೇಕು ಎಂಬ ಆಸೆ ತುಂಭಾ ಸಮಯದಿಂದ ಇತ್ತು. ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ಕೋವಿಡ್‌ ಇದ್ದರೂ ಇದನ್ನು ವೀಕ್ಷಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಪುಣ್ಯ
ಸುನೀತಾ

-0-

ಈ ಬಾರಿ ಅಚ್ಚುಕಟ್ಟಾಗಿ ಪ್ರದರ್ಶನ ಆಯೋಜಿಸಿದ್ದಾರೆ. ಯಾವುದೇ ಗೊಂದಲಗಳಿಲ್ಲದೇ ವಿಮಾನಗಳ ಕಸರತ್ತು ನೋಡಲು ಸಾಧ್ಯವಾಗಿದೆ
ಮೋಹನ್‌

-0-

ಕೋವಿಡ್‌ ಹರಡದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಏರೋ ಇಂಡಿಯಾ ಮುಂದುವರಿಸಿರುವುದು ನಿಜಕ್ಕೂ ಖುಷಿಯ ವಿಷಯ
ಮರೀನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT