ಉಡುಗೊರೆ ಕಳುಹಿಸುವುದಾಗಿ ₹3.25 ಲಕ್ಷ ಪಡೆದು ವಂಚನೆ

7

ಉಡುಗೊರೆ ಕಳುಹಿಸುವುದಾಗಿ ₹3.25 ಲಕ್ಷ ಪಡೆದು ವಂಚನೆ

Published:
Updated:

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ನಗರದ ನಿವಾಸಿ ಸಾಧನಾ ಎಂಬುವರಿಂದ ₹3.25 ಲಕ್ಷ ಪಡೆದು ವಂಚಿಸಿದ್ದಾನೆ.

ಈ ಸಂಬಂಧ ಸಾಧನಾ ಅವರು ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ವಿಕ್ರಮ್ ಧಿಯೋಧರ್‌ ಎಂಬಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ.  

‘ವರನನ್ನು ಹುಡುಕುವುದಕ್ಕಾಗಿ ಭಾರತ್ ಮ್ಯಾಂಟ್ರಿಮೋನಿಯಲ್ ಜಾಲತಾಣದಲ್ಲಿ ಖಾತೆ ತೆರೆದಿದ್ದೆ. ಅದರ ಮೂಲಕ ವಿಕ್ರಮ್ ಧಿಯೋಧರ್ ಪರಿಚಯವಾಗಿತ್ತು. ನಂತರ, ಇಬ್ಬರು ಚಾಟಿಂಗ್‌ ಮಾಡಲಾರಂಭಿಸಿದ್ದೆವು. ಉಡುಗೊರೆ ಕಳುಹಿಸುವುದಾಗಿ ಇತ್ತೀಚೆಗೆ ಹೇಳಿದ್ದ ಆತ, ತನ್ನ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ’ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ.

‘ಬೆಲೆಬಾಳುವ ಉಡುಗೊರೆ ಕಳುಹಿಸುತ್ತಿದ್ದೇನೆ. ಕಸ್ಟಮ್ಸ್‌ಗೆ ಹಣ ಕಟ್ಟಬೇಕು. ಹೀಗಾಗಿ, ಖಾತೆಗೆ ಹಣ ಜಮೆ ಮಾಡು’ ಎಂದು ಆತ ಹೇಳಿದ್ದ. ಅದನ್ನು ನಂಬಿ ಹಣ ಜಮೆ ಮಾಡಿದ್ದೆ. ಅದಾದ ಕೆಲವೇ ಗಂಟೆಗಳಲ್ಲೇ ಆತ, ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ’ ಎಂದಿದ್ದಾರೆ.

ಪೊಲೀಸರು, ‘ಆರೋಪಿಯ ನಿಖರ ವಿಳಾಸ ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಲು ಜಾಲತಾಣ ನಿರ್ವಹಣೆ ಮಾಡುತ್ತಿರುವವರಿಗೆ ಪತ್ರ ಬರೆಯಲಾಗಿದೆ’ ಎಂದರು.

₹65,500 ಸಾವಿರ ವಂಚನೆ: ಭಾರತ್ ಮ್ಯಾಂಟ್ರಿಮೋನಿಯಲ್ ಜಾಲತಾಣದ ಮೂಲಕವೇ ಪರಿಚಯವಾಗಿದ್ದ ಫೇರೆಡ್ ರಾಹುಲ್ ಎಂಬಾತ ನಗರದ ನಿವಾಸಿ ಜ್ಯೋತಿ ಎಂಬುವರಿಂದ ₹65,500 ಸಾವಿರ ಪಡೆದು ವಂಚಿಸಿದ್ದಾನೆ. ಈ ಸಂಬಂಧವೂ ಪ್ರಕರಣ ದಾಖಲಾಗಿದೆ.

‘ಆರೋಪಿಯು ತನ್ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಖಾತೆಗೆ ಹಣ ಜಮೆ ಮಾಡಿಸಿಕೊಂಡಿದ್ದಾನೆ. ಅದಾದ ನಂತರ, ಮೊಬೈಲ್ ಸ್ವಿಚ್ಡ್ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ’ ಎಂದು ಸೈಬರ್ ಕ್ರೈಂ ಠಾಣೆಯ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !