ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಮರುಬಳಕೆ– ನೆರವು ಕೋರಿದ ಪಾಲಿಕೆ

ಕೇಂದ್ರ ಹಣಕಾಸು ಆಯೋಗದ ಜೊತೆ ಚರ್ಚೆ
Last Updated 24 ಜೂನ್ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ಒಳಚರಂಡಿ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ಯೋಜನೆಗೆ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗವನ್ನು ಬಿಬಿಎಂಪಿ ಕೋರಿದೆ.

ಆಯೋಗದ ಅಧ್ಯಕ್ಷ ಎನ್‌.ಕೆ.ಸಿಂಗ್‌ ಅವರು ಬಿಬಿಎಂಪಿ ಜೊತೆ ಸೋಮವಾರ ನಡೆಸಿದ ಸಭೆಯಲ್ಲಿ ಮೇಯರ್‌ ಗಂಗಾಂಬಿಕೆ ಅವರು ಈ ಕುರಿತು ಮನವಿ ಸಲ್ಲಿಸಿದರು.

‘ನಗರದಲ್ಲಿ ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಒಳಚರಂಡಿ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ಅಗತ್ಯವಿದೆ. ಕೈಗಾರಿಕೆಗಳಿಗೆ ಹಾಗೂ ಕುಡಿಯುವುದನ್ನು ಹೊರತುಪಡಿಸಿ ಇತರ ಗೃಹ ಬಳಕೆಗೆ ಇಂತಹ ಶುದ್ಧೀಕರಿಸಿದ ನೀರನ್ನು ಪೂರೈಸುವ ಯೋಜನೆಗೆ ಆಯೋಗವು ಅನುದಾನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ನಗರದಲ್ಲಿ 13,000 ಕಿ.ಮೀ. ಉದ್ದದ ರಸ್ತೆ ಜಾಲವಿದೆ. 3,800 ಕಿ.ಮೀಗಳಷ್ಟು ಉದ್ದದ ಮುಖ್ಯ ರಸ್ತೆ, ಉಪಮುಖ್ಯರಸ್ತೆಗಳಿವೆ. ಹೆಚ್ಚು ವಾಹನಗಳ ಸಂಚಾರ ಇರುವ ರಸ್ತೆಗಳಿವು. ಇವುಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಸುಮಾರು 400 ಕಿ.ಮೀ. ಉದ್ದದ ಒಳಚರಂಡಿ ಜಾಲವನ್ನು ದುರಸ್ತಿಪಡಿಸಬೇಕಾಗಿದೆ’ ಎಂದು ಅವರು ತಿಳಿಸಿದರು.

ಕೆರೆ–ಉದ್ಯಾನ: ಪಾಲಿಕೆ ವ್ಯಾಪ್ತಿಯ 167 ಕೆರೆಗಳ ಪೈಕಿ 50 ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಅಲ್ಲದೆ, 1,339 ಉದ್ಯಾನಗಳ ಪೈಕಿ, 250 ಉದ್ಯಾನಗಳನ್ನು ‘ಟ್ರೀ ಪಾರ್ಕ್‌’ಗಳಾಗಿ ಅಭಿವೃದ್ಧಿಗೊಳಿಸಲು ಬಿಬಿಎಂಪಿ ಉದ್ದೇಶಿಸಿದೆ. ಇದಲ್ಲದೆ, ಅಲ್ಲಲ್ಲಿ ಗ್ರೇಡ್‌ ಸೆಪರೇಟರ್‌ಗಳು ಮತ್ತು ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ ಕೂಡ ಇಂದಿನ ಅಗತ್ಯಗಳಾಗಿವೆ ಎಂದರು.

ಮಾಹಿತಿ ತಂತ್ರಜ್ಞಾನ ಕಂಪನಿಗಳು, ದೊಡ್ಡ ಕೈಗಾರಿಕೆಗಳು, ಮಾಲ್‌, ಹೋಟೆಲ್‌ಗಳು ನಗರದಲ್ಲಿ ಹೇರಳ ಸಂಖ್ಯೆಯಲ್ಲಿವೆ. ಇಂತಹ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಮೇಯರ್‌ ಕೋರಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ನಗರದ ಅಭಿವೃದ್ಧಿ ಕುರಿತ ವಿವಿಧ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ಅಗತ್ಯದ ಕುರಿತು ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾದ ‘ನಮ್ಮ ನಗರ, ನಮ್ಮ ಧ್ವನಿ’ ಸರಣಿಯಲ್ಲಿ ಗಮನ ಸೆಳೆಯಲಾಗಿತ್ತು.

ಯಾವುದಕ್ಕೆ ಅನುದಾನ ಬೇಡಿಕೆ?

* 50 ಕೆರೆಗಳಪುನರುಜ್ಜೀವನಕ್ಕೆ

* ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ

* ರಾಜಕಾಲುವೆ ದುರಸ್ತಿಗೆ

* ಟ್ರೀಪಾರ್ಕ್‌ ಅಭಿವೃದ್ಧಿಗೆ

* ಕೈಗಾರಿಕಾ ಮೂಲಸೌಕರ್ಯಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT