ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್‌ ಪ್ರವಹಿಸಿ ಮೆಕ್ಯಾನಿಕ್‌ ಸಾವು: ಎಂಜಿನಿಯರ್ ವಿರುದ್ಧ ಎಫ್‌ಐಆರ್‌

Published : 8 ಸೆಪ್ಟೆಂಬರ್ 2024, 16:29 IST
Last Updated : 8 ಸೆಪ್ಟೆಂಬರ್ 2024, 16:29 IST
ಫಾಲೋ ಮಾಡಿ
Comments

ಬೆಂಗಳೂರು: ವಿದ್ಯುತ್‌ ಪ್ರವಹಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಯಮಿತದ (ಕೆಪಿಟಿಸಿಎಲ್‌) ಮೆಕ್ಯಾನಿಕ್‌ ಸಂತೋಷ್‌ ಅವರು ಶನಿವಾರ ಮೃತಪಟ್ಟಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಸಹಾಯಕ ಎಂಜಿನಿಯರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೆಪಿಟಿಸಿಎಲ್‌ನ 220 ಕೆ.ವಿ. ಸ್ವೀಕರಣಾ ಕೇಂದ್ರದಲ್ಲಿ ಸಂತೋಷ್‌ ಅವರು ಸ್ಟೇಷನ್‌ ಮೆಕ್ಯಾನಿಕ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗಸ್ಟ್‌ 31ರಂದು ಸಂತೋಷ್‌ ಅವರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯುತ್‌ ಮಾರ್ಗದ ಸಮೀಪದಲ್ಲಿದ್ದ ಮರ ಕಡಿಯುವ ಸಂದರ್ಭದಲ್ಲಿ ವಿದ್ಯುತ್‌ ಪ್ರವಹಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕೋರಮಂಗಲದ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಶನಿವಾರ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕೆಪಿಟಿಸಿಎಲ್‌ ಸ್ವೀಕರಣಾ ಕೇಂದ್ರದ ಸಹಾಯಕ ಎಂಜಿನಿಯರ್‌ ಪ್ರಿಯದರ್ಶಿನಿ ಅವರ ನಿರ್ದೇಶನದಂತೆ ಸಂತೋಷ್‌ ಅವರು ವಿದ್ಯುತ್‌ ಸ್ವೀಕರಣಾ ಕೇಂದ್ರದಲ್ಲಿನ ಮರದ ಕೊಂಬೆ ಕಡಿಯುತ್ತಿದ್ದರು. ಅದೇ ಸಂದರ್ಭದಲ್ಲಿ ಮರದ ಕೊಂಬೆಯೊಂದು ವಿದ್ಯುತ್‌ ತಂತಿಯ ಮೇಲೆ ಬಿದ್ದು, ಸಂತೋಷ್‌ ಅವರಿಗೆ ವಿದ್ಯುತ್‌ ಪ್ರವಹಿಸಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಮರ ಕಡಿಯುವ ವೇಳೆ ಪ್ರಿಯದರ್ಶಿನಿ ಅವರು ಸಂತೋಷ್‌ ಅವರಿಗೆ ಯಾವುದೇ ರೀತಿಯ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ಅವರ ನಿರ್ಲಕ್ಷ್ಯತೆಯಿಂದ ಸಂತೋಷ್‌ ಅವರು ಮೃತಪಟ್ಟಿದ್ದಾರೆ. ಆದ್ದರಿಂದ ಪ್ರಿಯದರ್ಶಿನಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಂತೋಷ್ ಅವರ ಪತ್ನಿ ಸಂಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

‘ಈ ಬಗ್ಗೆ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT