ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿಯೂ ಔಷಧಗಳ ಮಾಹಿತಿ ಮುದ್ರಿಸಿ: ವೈದ್ಯಕೀಯ ವಲಯದಲ್ಲಿ ಅಭಿಯಾನ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ
Last Updated 30 ಜೂನ್ 2021, 16:31 IST
ಅಕ್ಷರ ಗಾತ್ರ

ಬೆಂಗಳೂರು: ಔಷಧಗಳ ಉತ್ಪಾದಕರು ಔಷಧಗಳ ಮಾಹಿತಿಯನ್ನು ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಮುದ್ರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.

ಪ್ರಾಧಿಕಾರವು ‘ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅಭಿಯಾನ’ವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಗುರುವಾರ ಚಾಲನೆ ದೊರೆಯಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆಯಬೇಕಾದ ಕೆಲಸಗಳನ್ನು ಪ್ರಾಧಿಕಾರ ಪಟ್ಟಿಮಾಡಿದೆ.

‘ಆರೋಗ್ಯ ಇಲಾಖೆಯಲ್ಲಿ ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡವನ್ನು ಕಲಿಸಬೇಕು. ಕನ್ನಡದಲ್ಲಿ ವ್ಯವಹರಿಸುವ ಜತೆಗೆ ಎಲ್ಲ ಪತ್ರಗಳು, ಆದೇಶಗಳು, ಸೂಚನೆಗಳು ಹಾಗೂ ಮಾಹಿತಿಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದಲ್ಲಿ ಟೆಲಿ ವೈದ್ಯಕೀಯ ಸೌಲಭ್ಯವನ್ನು ಏರ್ಪಡಿಸಬೇಕು. ರೋಗಿಗಳಿಗೆ ಅಗತ್ಯವಾದ ಸಲಹೆ, ಸಮಾಧಾನವನ್ನು ಶುಶ್ರೂಷಕರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಕೂಡ ಕನ್ನಡದಲ್ಲಿ ನೀಡಬೇಕು’ ಎಂದು ಪ್ರಾಧಿಕಾರ ತಿಳಿಸಿದೆ.

‘ವೈದ್ಯಕೀಯ ವಲಯದ ಎಲ್ಲ ಸಿಬ್ಬಂದಿ ಕನ್ನಡ ಬಲ್ಲವರಾದರೆ ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನ ಸುಲಭವಾಗುತ್ತದೆ. ವೈದ್ಯಕೀಯ ಶಿಕ್ಷಣಕ್ಕಾಗಿ ರಾಜ್ಯಕ್ಕೆ ಬಂದವರು ಕೂಡ ಕಡ್ಡಾಯವಾಗಿ ಕನ್ನಡ ಕಲಿಯುವಂತಾಗಬೇಕು. ಇಲಾಖೆಯು ಪ್ರತಿಯೊಂದು ಔಷಧಗಳ ಸಮಗ್ರ ಮಾಹಿತಿಯನ್ನು ಕನ್ನಡದಲ್ಲಿ ಪ್ರಕಟಿಸಬೇಕು. ನಿಯಮಿತವಾಗಿ ಮಾರುಕಟ್ಟೆಯನ್ನು ಪ್ರವೇಶಿಸುವ ಹೊಸ ಔಷಧಗಳು ಹಾಗೂ ಮಾರುಕಟ್ಟೆಯಿಂದ ನಿರ್ಗಮಿಸುವ ಔಷಧಗಳ ಬಗ್ಗೆ ಕನ್ನಡದಲ್ಲಿ ಮಾಹಿತಿಯನ್ನು ನೀಡಬೇಕು’ ಎಂದು ಪ್ರಾಧಿಕಾರ ಆಗ್ರಹಿಸಿದೆ.

‘ನಿಷೇಧಿತ ಔಷಧಿಗಳ ಪಟ್ಟಿಯೂ ಕನ್ನಡದಲ್ಲಿ ದೊರೆಯಬೇಕು. ಔಷಧಗಳ ಸುರಕ್ಷಿತ ಬಳಕೆಯ ಬಗ್ಗೆ ಕನ್ನಡದಲ್ಲಿ ಮಾಹಿತಿ ಲಭ್ಯವಾಗಬೇಕು ಎಂಬುದು ಈ ಅಭಿಯಾನದ ಮುಖ್ಯ ಉದ್ದೇಶ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT