ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಕ್ಕಟ್ಟಿನಲ್ಲಿ ಕೃಷಿ ಕ್ಷೇತ್ರ: ನಾಗಮೋಹನ ದಾಸ್ ಆತಂಕ

‘ಮೇದಿನಿ ಜೊತೆ ನನ್ನ ಕಥೆ’ ಕೃತಿ ಲೋಕಾರ್ಪಣೆ
Published : 14 ಸೆಪ್ಟೆಂಬರ್ 2024, 15:15 IST
Last Updated : 14 ಸೆಪ್ಟೆಂಬರ್ 2024, 15:15 IST
ಫಾಲೋ ಮಾಡಿ
Comments

ಬೆಂಗಳೂರು: ‘ಕೃಷಿ‌ ಕ್ಷೇತ್ರ ಇಂದು ಬಿಕ್ಕಟ್ಟಿನಲ್ಲಿದೆ. ಇದಕ್ಕೆ ವಿಜ್ಞಾನದ ಹಾಗೂ ಪರಿಸರ ದುರ್ಬಳಕೆ ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರದ ನೀತಿಗಳು ಕಾರಣವಾಗಿವೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.

ನಗರದ ನ್ಯಾಷನಲ್ ಕಾಲೇಜಿನಲ್ಲಿ ಶನಿವಾರ ಬೆಂಗಳೂರು ವಿಜ್ಞಾನ ವೇದಿಕೆ ಮತ್ತು ಕೃಷಿ ಭಾರತ್‌ ಫೌಂಡೇಷನ್, ಜನ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಅ.ನ.ಯಲ್ಪಪ್ಪರೆಡ್ಡಿ ಅವರ ‘ಮೇದಿನಿ ಜೊತೆ ನನ್ನ ಕಥೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘ದಶಕಗಳ ಹಿಂದೆ 20 ರಿಂದ 30 ಅಡಿಗೆ ನೀರು ಸಿಗುತ್ತಿತ್ತು. ಕೋಲಾರದಲ್ಲಿ ಇಂದು ಎರಡು ಸಾವಿರ ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಅಷ್ಟು ಆಳದಲ್ಲಿ ನೀರು ಸಿಕ್ಕರೂ ಅದು ಶುದ್ಧವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಂಡವಾಳ ಇಲ್ಲದೆ ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಉಳುಮೆಗೆ ಟ್ರ್ಯಾಕ್ಟರ್‌ ಬೇಕು. ಬಿತ್ತನೆ ಬೀಜ, ಕೀಟನಾಶಕ ಎಲ್ಲವನ್ನೂ ಖರೀದಿಸಬೇಕು. ಇವನ್ನೆಲ್ಲ ಬಳಸಿ ಬೆಳೆದರೆ 10 ಕ್ವಿಂಟಲ್‌ ಭತ್ತ ಬೆಳೆಯುವ ಜಾಗದಲ್ಲಿ 40 ಕ್ವಿಂಟಲ್ ಬೆಳೆಯಬಹುದು. ಆದರೆ, 42 ಕ್ವಿಂಟಲ್‌ನಷ್ಟು ಖರ್ಚು ಆಗುತ್ತಿದೆ’ ಎಂದು ವಿವರಿಸಿದರು.

‘ಕೃಷಿ ಕ್ಷೇತ್ರ ವಿಸ್ತರಣೆ ಆಗುತ್ತಿಲ್ಲ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಶೇ90ರಷ್ಟು ಜೌಗು ಪ್ರದೇಶವನ್ನು ಪಾಳು ಬಿಡಲಾಗಿತ್ತು. ಈ ಬಗ್ಗೆ ಕಾರಣ ಕೇಳಿದರೆ ಉತ್ಪಾದನೆಗಿಂತ ಖರ್ಚು ಹೆಚ್ಚು ಎಂಬ ಉತ್ತರ ಬಂತು’ ಎಂದು ಹೇಳಿದರು.

‘ಯಲ್ಲಪ್ಪ ರೆಡ್ಡಿ ಅವರು ಪುಸ್ತಕದಲ್ಲಿ ಮೂರು, ನಾಲ್ಕು ಅನುಭವ ಮಾತ್ರ ಬರೆದಿದ್ದಾರೆ. ಅವರ ಎಲ್ಲಾ ಬರಹಗಳು ಕೃತಿಯಾಗಿ ಪ್ರಕಟವಾಗಬೇಕು. ಇದು ಮುಂದಿನ ಪೀಳಿಗೆಗಾಗಿ ಅಗತ್ಯವಾಗಿ ಬೇಕಿದೆ’ ಎಂದರು.

ವಿಜ್ಞಾನ ಲೇಖಕ ನಾಗೇಶ ಹೆಗಡೆ ಮಾತನಾಡಿ, ‘ದೇಶ ಸಮೃದ್ಧವಾಗಿರಬೇಕಾದರೆ ಅರಣ್ಯ ಪ್ರದೇಶ ಇರಬೇಕು’ ಎಂದರು.

ಶಿಕ್ಷಣ ತಜ್ಞ ಡಾ.ಚಂದನ್ ಗೌಡ, ಎನ್‌ಇಎಸ್‌ ಕಾರ್ಯದರ್ಶಿ ವೆಂಕಟಶಿವರೆಡ್ಡಿ, ಪತ್ರಕರ್ತ ರಂಗನಾಥ ಭಾರದ್ವಾಜ್, ಕೃಷಿ ಭಾರತ್ ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್.ರವೀಂದ್ರ, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ಕೃತಿಯ ಸಂಪಾದಕರಾದ ಎಂ.ಆರ್.ರಕ್ಷಿತ್, ಸುಚರಿತ ಎಂ.ಚಂದ್ರ, ನಿರಂಜನ ಪರಾಂಜಪೆ ಹಾಗೂ ಮಾಯಾಚಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT