ಸೋಮವಾರ, ಜುಲೈ 4, 2022
21 °C

ಕಾಂಗ್ರೆಸ್ ಪಾದಯಾತ್ರೆ ಕಪಟ ನಾಟಕ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದ ಮುಖ್ಯಮಂತ್ರಿ ಆಗಿಬಿಡಬೇಕೆಂಬ ಹುಚ್ಚು ಡಿ.ಕೆ. ಶಿವಕುಮಾರ್ ಅವರನ್ನು ಆವರಿಸಿಕೊಂಡಿದೆ. ಅದಕ್ಕಾಗಿ ಅವರು ಸಿದ್ದರಾಮಯ್ಯ ಅವರನ್ನು ಬದಿಗೊತ್ತಲು ಮೇಕೆದಾಟು ಯೋಜನೆಯ ಹೆಸರಿನಲ್ಲಿ ಪಾದಯಾತ್ರೆಯ ಕಪಟ ನಾಟಕ ಆಡುತ್ತಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಲೇವಡಿ ಮಾಡಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಪಾದಯಾತ್ರೆಯಿಂದ ಬಿಜೆಪಿಗೇ ಲಾಭ ಆಗಲಿದೆ’ ಎಂದರು.

‘ಶಿವಕುಮಾರ್ ಏಳು ಬಾರಿ ಶಾಸಕರಾಗಿದ್ದಾರೆ. ಅವರ ಸಹೋದರ ಸಂಸದರಾಗಿದ್ದಾರೆ. ಈಗ ಮೇಕೆದಾಟು ಜಪ ಮಾಡುತ್ತಿರುವ ಅವರಿಬ್ಬರೂ ಇಷ್ಟು ವರ್ಷ ಏನನ್ನು ಕಡಿದು ಕಟ್ಟೆ ಹಾಕುತ್ತಿದ್ದರು?’ ಎಂದು ಪ್ರಶ್ನಿಸಿದರು.

‘ಮೇಕೆದಾಟು ಯೋಜನೆಯನ್ನು ಬಿಜೆಪಿ ಸರ್ಕಾರ ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಅದನ್ನು ಕಂಡು ಶಿವಕುಮಾರ್‌ಗೆ ಭವಿಷ್ಯದ ಬಗ್ಗೆ ಆತಂಕವಾಗಿದೆ. ಅವರ ಪಾದಯಾತ್ರೆ ಕೇವಲ ನಡಿಗೆ ಆಗಬಹುದೇ ಹೊರತು ಅವರೊಂದಿಗೆ ಜನರು ಹೋಗುತ್ತಿಲ್ಲ. ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿರುವವರು ಭಟ್ಟಂಗಿಗಳಷ್ಟೆ’ ಎಂದರು.

‘ಕಾಂಗ್ರೆಸ್ ಪಕ್ಷ ನೀರಿನ ವಿಚಾರದಲ್ಲಿ ರಾಜಕೀಯ ನಾಟಕ ಆಡುತ್ತಿದ್ದು, ರಾಜ್ಯದ ಜನರಿಗೆ ದ್ರೋಹ ಎಸಗುತ್ತಿದೆ. ನೆಲ, ಜಲದ ವಿಚಾರಗಳಲ್ಲಿ ರಾಜಕೀಯಪ್ರೇರಿತ ಹೋರಾಟ ಖಂಡನೀಯ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿವೆ. ತಮಿಳುನಾಡಿನಲ್ಲಿ ಡಿಎಂಕೆ ಜತೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದು ಯಾವುದೋ ಕಾಲವಾಗಿದೆ. ಇಂಥ ದುರವಸ್ಥೆಯಲ್ಲಿರುವ ಪಕ್ಷದ ಅಧ್ಯಕ್ಷರು, ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಆದರೆ, ನಮಗೆ ಸಂಘರ್ಷದಲ್ಲಿ ನಂಬಿಕೆ ಇಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು