ಶನಿವಾರ, ಮೇ 28, 2022
27 °C
ಜೋಡಿ ಮಾರ್ಗದ ಕಾಮಗಾರಿ: ಗೌರಿಬೀದನೂರು ತನಕ ಸಂಚಾರ ಆರಂಭಿಸಲು ಒತ್ತಾಯ

ಹಿಂದೂಪುರಕ್ಕೆ ಮೆಮು ರೈಲು ರದ್ದು: ಪ್ರಯಾಣಿಕರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಲಹಂಕ–ಪೆನುಕೊಂಡ ವಿಭಾಗಗಳಲ್ಲಿ ಜೋಡಿ ಮಾರ್ಗಕ್ಕೆ ಹಿಂದೂಪುರ ಮತ್ತು ದೇವರಪಲ್ಲಿ ನಿಲ್ದಾಣಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, 46 ದಿನಗಳ ಕಾಲ ಈ ಮಾರ್ಗದಲ್ಲಿ ಎರಡು ಮೆಮು ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ರದ್ದುಗೊಳಿಸಿದೆ.

ಯಶವಂತಪುರದಿಂದ ಸಂಜೆ 6.10ಕ್ಕೆ ಹೊರಟು ರಾತ್ರಿ ಹಿಂದೂಪುರದಲ್ಲೇ ತಂಗಿದ್ದು, ಬೆಳಿಗ್ಗೆ ಅಲ್ಲಿಂದ ಹೊರಟು 9.30ರ ವೇಳೆಗೆ ಯಶವಂತಪುರಕ್ಕೆ ಬರುತ್ತಿತ್ತು. ಇನ್ನೊಂದೆಡೆ, ಮೆಮು ರೈಲು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಬೆಳಿಗ್ಗೆ 7.20ಕ್ಕೆ ಹೊರಟು ಚನ್ನಸಂದ್ರ, ಬೈಯಪ್ಪನಹಳ್ಳಿ, ಯಲಹಂಕ ಮಾರ್ಗದಲ್ಲಿ ಧರ್ಮಾವರಂಗೆ ಹೋಗಿ ವಾಪಸ್ ಅದೇ ಮಾರ್ಗದಲ್ಲಿ ಬರುತ್ತಿತ್ತು.

ಯಶವಂತಪುರ–ಹಿಂದೂಪುರ ರೈಲಿನ ಪ್ರಯಾಣ ದರ ₹25 ಇದ್ದರೆ, ಕಂಟೋನ್ಮೆಂಟ್–ಧರ್ಮಾವರಂ ರೈಲಿನ ಪ್ರಯಾಣ ದರ ₹34 ಇತ್ತು. ಎಲ್ಲ ನಿಲ್ದಾಣಗಳಲ್ಲೂ ಈ ರೈಲು ನಿಲುಗಡೆ ಮಾಡುತ್ತಿದ್ದರಿಂದ ₹10 ಮತ್ತು ₹20 ದರದಲ್ಲಿ ಬೆಂಗಳೂರು ತಲುಪಲು ಪ್ರಯಾಣಿಕರಿಗೆ ಅದರಲ್ಲೂ ಕಾರ್ಮಿಕರಿಗೆ ಅನುಕೂಲ ಆಗುತ್ತಿತ್ತು.

ಈ ಎರಡೂ ರೈಲುಗಳ ಸಂಚಾರವನ್ನು 46 ದಿನಗಳ ಮಟ್ಟಿಗೆ ರದ್ದುಗೊಳಿಸಲಾಗಿದೆ. ಹಿಂದೂಪುರಕ್ಕೆ ಸಾಮಾನ್ಯ ಸಾರಿಗೆ ಬಸ್‌ನಲ್ಲಿ ₹100 ದರ ಇದ್ದು, ರೈಲು ಪ್ರಯಾಣಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಿನ ದರ ನೀಡಬೇಕಾದ ಹೊರೆ ಪ್ರಯಾಣಿಕರ ಮೇಲೆ ಬಿದ್ದಿದೆ.

‘ಹಿಂದೂಪುರ ಮತ್ತು ದೇವರಪಲ್ಲಿಯಲ್ಲಿ ಕಾಮಗಾರಿ ನಿರ್ವಹಿಸಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳುತ್ತಿದೆ. ಆದರೆ, ಗೌರಿಬಿದನೂರು ತನಕವಾದರೂ ಈ ರೈಲುಗಳು ಹೋಗಿ ವಾಪಸ್ ಬರುವಂತೆ ಮಾಡಬೇಕು’ ಎಂಬುದು ರೈಲ್ವೆ ಪ್ರಯಾಣಿಕರ ಒತ್ತಾಯ.

‘ಗೌರಿಬಿದನೂರಿನಲ್ಲಿ ಲೊಕೊಪೈಲೆಟ್ ಮತ್ತು ಇತರ ಸಿಬ್ಬಂದಿ ತಂಗಲು ರನ್ನಿಂಗ್ ರೂಂ ಇಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಪ್ರಯಾಣಿಕರ ಹಿತದೃಷ್ಟಿಯಿಂದ ರೈಲು ಸಂಚಾರ ಇರಬೇಕು. ಸಾಧ್ಯವಾಗದಿದ್ದರೆ ಹಗಲು ವೇಳೆಯಲ್ಲಾದರೂ ಈ ರೈಲುಗಳು ಸಂಚಾರ ಆರಂಭಿಸುವುದು ಸೂಕ್ತ’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಹೇಳಿದರು.

‘ಹಿಂದೂಪುರ ಮತ್ತು ದೇವರಪಲ್ಲಿ ಯಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅಲ್ಲಿಯ ತನಕ ಪ್ರಯಾಣಿಕರು ತೊಂದರೆ ಸಹಿಸಿಕೊಳ್ಳಬೇಕು. ಒಮ್ಮೆ ಕಾಮಗಾರಿ ಮುಗಿದರೆ ರೈಲುಗಳ ವೇಗ ಹೆಚ್ಚಳಕ್ಕೆ ಅನುಕೂಲ ಆಗಲಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

‘ಗೌರಿಬಿದನೂರು ನಿಲ್ದಾಣದ ತನಕ ಹೋಗಿ ವಾಪಸ್ ಬರಲು ತಾಂತ್ರಿಕವಾಗಿ ಸಾಧ್ಯತೆ ಇಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.