ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಎರಡನೇ ಹಂತದಲ್ಲಿ ಯು–ಗರ್ಡರ್‌ ಬಳಕೆ

ಕೆ.ಆರ್.ಪುರ–ಕೆಐಎ ಮಾರ್ಗದಲ್ಲಿ ಅಳವಡಿಕೆ * ಸಮಯ ಮತ್ತು ಶ್ರಮ ಉಳಿತಾಯ–ಬಿಎಂಆರ್‌ಸಿಎಲ್‌
Last Updated 16 ಸೆಪ್ಟೆಂಬರ್ 2019, 20:38 IST
ಅಕ್ಷರ ಗಾತ್ರ

ಬೆಂಗಳೂರು:‘ನಮ್ಮ ಮೆಟ್ರೊ’ ಕಾಮಗಾರಿ ಚುರುಕುಗೊಳಿಸುವ ನಿಟ್ಟಿನಲ್ಲಿ ಯು–ಗರ್ಡರ್‌ ಬಳಕೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ. 22 ಮೀಟರ್‌ನಿಂದ 27 ಮೀಟರ್‌ ಉದ್ದದ ಈ ಗರ್ಡರ್‌ಗಳನ್ನು ವಯಡಕ್ಟ್‌ ನಿರ್ಮಾಣಕ್ಕೆ ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ.

ನಿಧಾನಗತಿಯಲ್ಲಿ ಸಾಗಿರುವ ಸಿಲ್ಕ್‌ ಬೋರ್ಡ್‌–ಕೆ.ಆರ್.ಪುರ ಹಾಗೂ ಕೆ.ಆರ್. ಪುರ– ಕೆಂ‍ಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಾರಿಡಾರ್‌ನಲ್ಲಿ ಈ ಗರ್ಡರ್‌ಗಳನ್ನು ಬಳಸಲಾಗುತ್ತದೆ ಎಂದು ನಿಗಮ ಹೇಳಿದೆ.

ಸಾಮಾನ್ಯವಾಗಿ ದೊಡ್ಡ ಸೇತುವೆಗಳನ್ನು ಹಾಗೂ ಬೃಹತ್‌ ಕಟ್ಟಡಗಳ ನಿರ್ಮಾಣ ವೇಳೆ ಈ ಗರ್ಡರ್‌ಗಳನ್ನು ಬಳಸಲಾಗುತ್ತದೆ.ಉಕ್ಕು ಮತ್ತು ಕಬ್ಬಿಣದಿಂದ ‘U’ ಆಕಾರದಲ್ಲಿ ಇವುಗಳನ್ನು ರೂಪಿಸಲಾಗಿರುತ್ತದೆ. ಈ ಮೊದಲು, 2.2 ಮೀಟರ್‌ನಿಂದ 2.5 ಮೀಟರ್‌ ಉದ್ದದ ಬಾಕ್ಸ್‌ ಗರ್ಡರ್‌ಗಳನ್ನು ಮೆಟ್ರೊ ಮಾರ್ಗ ನಿರ್ಮಾಣ ವೇಳೆ ಉಪಯೋಗಿಸಲಾಗುತ್ತಿತ್ತು.‘ನಮ್ಮ ಮೆಟ್ರೊ’ದಲ್ಲಿ ಇದೇ ಮೊದಲ ಬಾರಿಗೆ ಯು–ಗರ್ಡರ್‌ಗಳ ಬಳಕೆಗೆ ನಿಗಮ ಮುಂದಾಗಿದೆ.

ಅರ್ಧ ದಿನದಲ್ಲಿ ಅಳವಡಿಕೆ:

ಎರಡು ಪಿಲ್ಲರ್‌ಗಳ ನಡುವೆ ಒಂದೇ ಒಂದು ಯು–ಗರ್ಡರ್‌ ಅನ್ನು ಅಳವಡಿಸಬಹುದಾಗಿದೆ. ಅಂದರೆ, ವಯಡಕ್ಟ್‌ ಅನ್ನು ಒಂದು ಗರ್ಡರ್‌ ಸಂಪೂರ್ಣವಾಗಿ ಆವರಿಸುತ್ತದೆ. ಬಾಕ್ಸ್‌ ಗರ್ಡರ್‌ಗಳನ್ನು ಬಳಸುವುದಕ್ಕಿಂತ ಇಂತಹ ಯು–ಗರ್ಡರ್‌ ಬಳಸುವುದರಿಂದ ಸಮಯ ಉಳಿತಾಯವಾಗುವುದಲ್ಲದೆ, ನಿರ್ಮಾಣ ವೆಚ್ಚವೂ ತಗ್ಗುತ್ತದೆ. ಎರಡು ಪಿಲ್ಲರ್‌ಗಳ ನಡುವೆ ಒಂದೇ ರಾತ್ರಿಯಲ್ಲಿ ಈ ಗರ್ಡರ್‌ಗಳನ್ನು ಅಳವಡಿಸಬಹುದಾಗಿದೆ. ಈಗ ಈ ಕಾರ್ಯಕ್ಕೆ ಐದರಿಂದ ಆರು ದಿನ ಸಮಯ ಬೇಕಾಗುತ್ತದೆ.

‘ಹೊರ ವರ್ತುಲ ರಸ್ತೆ ಮತ್ತು ಕೆಐಎ ಮಾರ್ಗದಲ್ಲಿ ಯು–ಗರ್ಡರ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಕಾರಿಡಾರ್‌ನ ಶೇ 80ರಷ್ಟು ಭಾಗದಲ್ಲಿ ಇವುಗಳನ್ನು ಬಳಸಲಾಗುತ್ತದೆ. ತಿರುವುಗಳಿರುವಲ್ಲಿ ‘I’ ಆಕಾರದ ಗರ್ಡರ್‌ಗಳನ್ನು ಉಪಯೋಗಿಸಲಾಗುತ್ತದೆ. ದೆಹಲಿ, ಚೆನ್ನೈ, ಕೊಚ್ಚಿ ಮತ್ತು ಮುಂಬೈನ ಮೆಟ್ರೊ ನಿಗಮಗಳು ಈಗಾಗಲೇ ಯು–ಗರ್ಡರ್‌ಗಳನ್ನು ಬಳಸುತ್ತಿವೆ. ‘ಸಿಸ್ಟ್ರಾ’ ಎಂಜಿನಿಯರಿಂಗ್‌ ಕಂಪನಿಯು ಈ ಗರ್ಡರ್‌ಗಳ ಹಕ್ಕುಸ್ವಾಮ್ಯ ಪಡೆದಿದ್ದು, ಇದರ ವಿನ್ಯಾಸ ರೂಪಿಸಲಿದೆ. ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಪರಿಶೀಲನೆ ನಡೆಸಲಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT