ಕೆಂಗೇರಿ: ಮೆಟ್ರೊಗೆ ಕಾಯಬೇಕು ವರ್ಷ

ಗುರುವಾರ , ಜೂಲೈ 18, 2019
22 °C
‘ನಮ್ಮ ಮೆಟ್ರೊ’ 2ನೇ ಹಂತ ಕಾಮಗಾರಿಯ ಆರಂಭದಲ್ಲಿದ್ದ ವೇಗ ಈಗಿಲ್ಲ l 2020ರ ಆಗಸ್ಟ್‌ನಲ್ಲಿ ಸಂಚಾರ!

ಕೆಂಗೇರಿ: ಮೆಟ್ರೊಗೆ ಕಾಯಬೇಕು ವರ್ಷ

Published:
Updated:
Prajavani

ಬೆಂಗಳೂರು: ಯೋಜಿಸಿದ ರೀತಿಯಲ್ಲೇ ಕಾಮಗಾರಿ ನಡೆಯುತ್ತಿದ್ದರೆ ಇಷ್ಟು ಹೊತ್ತಿಗೆ ಕೆಂಗೇರಿಯವರೆಗೆ ಮೆಟ್ರೊ ರೈಲು ಸಂಚರಿಸಬೇಕಿತ್ತು. ಆದರೆ, ರೈಲು ಓಡುವುದಿರಲಿ, ಇನ್ನೂ ಕಾಮಗಾರಿಯೇ ಪೂರ್ಣಗೊಂಡಿಲ್ಲ. 

ಮೈಸೂರು ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ಸಲುವಾಗಿ ಅಳವಡಿಸಿದ್ದ ಬ್ಯಾರಿಕೇಡ್‌ಗಿಂದ ವಾಹನ ಸವಾರರಿಗೆ ಉಂಟಾಗುತ್ತಿದ್ದ ಕಿರಿಕಿರಿ ಸದ್ಯ ತಪ್ಪಿದೆ. ಕಣ್ಮುಂದೆ ಮೆಟ್ರೊ ಓಡುವುದನ್ನು ನೋಡಲು ಕೆಂಗೇರಿ ಜನ, ಇನ್ನೂ ಒಂದು ವರ್ಷ ಕಾಯಬೇಕಾಗಿದೆ. 

ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿಯವರೆಗಿನ ಮೆಟ್ರೊ ಕಾಮಗಾರಿಯನ್ನು 2018ರ ನವೆಂಬರ್‌ ಒಳಗೆ ಪೂರ್ಣಗೊಳಿಸುವುದಾಗಿ ಬಿಎಂಆರ್‌ಸಿಎಲ್‌ ಹೇಳಿತ್ತು. ಬಳಿಕ ಈ ಗಡುವನ್ನು 2019ರ ಮಾರ್ಚ್‌ವರೆಗೆ ವಿಸ್ತರಿಸಲಾಯಿತು. ಈ ಗಡುವು ಕೂಡಾ ಈಗ ವಿಸ್ತರಣೆಯಾಗಿದೆ. ಈ ಮಾರ್ಗದಲ್ಲಿ 2020ರ ಆಗಸ್ಟ್‌ ಒಳಗೆ ಮೆಟ್ರೊ ಸಂಚಾರ ಆರಂಭವಾಗಲಿದೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿಯವರೆಗೆ ಒಟ್ಟು ಆರು ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ನಾಯಂಡಹಳ್ಳಿ, ರಾಜರಾಜೇಶ್ವರಿ‌ನಗರ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಆರ್.ವಿ. ಕಾಲೇಜು ನಿಲ್ದಾಣಗಳ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಐಎಲ್ ಆ್ಯಂಡ್ ಎಫ್‍ಎಸ್ ಎಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್‌ಗೆ ಕಂಪ‍ನಿಗೆ ವಹಿಸಲಾಗಿದೆ. ಮೈಲಸಂದ್ರ ಮತ್ತು ಕೆಂಗೇರಿ ನಿಲ್ದಾಣಗಳ ನಿರ್ಮಾಣ ಗುತ್ತಿಗೆಯನ್ನು ‘ಸೋಮ’ ಕಂಪನಿ ವಹಿಸಿಕೊಂಡಿದೆ.

ಪಿಲ್ಲರ್‌ಗಳನ್ನು ಅಳವಡಿಸುವ ಹಾಗೂ ವಯಡಕ್ಟ್‌ ನಿರ್ಮಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆದಿತ್ತು. ಆದರೆ, ಇತ್ತೀಚೆಗೆ ಕೆಲಸದ ವೇಗ ಕುಂಠಿತಗೊಂಡಿದೆ ಎಂದು ದೂರುತ್ತಾರೆ ಸ್ಥಳೀಯರು.

ಮೆಟ್ರೊ ಮಾರ್ಗದ ಕೆಳಗಿರುವ ರಸ್ತೆಗಳ ಬದಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಲಾಗುತ್ತಿದೆ. ಇಲ್ಲಿ ಪಿಲ್ಲರ್‌ಗಳು, ವಯಡಕ್ಟ್‌ ಅಳವಡಿಕೆ ಕಾಮಗಾರಿಗಳು ಮುಗಿದಿದ್ದು, ಎತ್ತರಿಸಿದ ಮಾರ್ಗದಲ್ಲಿ ಹಳಿಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಮೆಟ್ರೊ ನಿಲ್ದಾಣಗಳ ಕಾಮಗಾರಿಯೂ ಸಾಗಿದೆ. ಇವುಗಳ ಒಳಾಂಗಣದ ಕಾರ್ಯಗಳು ಇನ್ನಷ್ಟೇ ನಡೆಯಬೇಕಿವೆ.

ಮೆಟ್ರೊ ಎರಡನೇ ಹಂತದ ಯೋಜನೆಗೆ 2014ರ ಫೆಬ್ರುವರಿಯಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು.  ₹26,405 ಕೋಟಿ ವೆಚ್ಚದಲ್ಲಿ 72 ಕಿ.ಮೀ ಉದ್ದದ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಎರಡನೇ ಹಂತದ ಕೆಲವು ವಿಸ್ತರಿತ ಮಾರ್ಗಗಳ ಕಾಮಗಾರಿಗಳನ್ನು 2015ರ ಅಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು.

2020ರ ಒಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ನಿಗಮವು ಹೊಂದಿತ್ತು. ಆದರೆ, ಈ ಗಡುವನ್ನು ಪರಿಷ್ಕರಿಸಿರುವ ನಿಗಮ 2021ರ ಮಾರ್ಚ್‌ಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದೆ. 

**

‘ಕಾಮಗಾರಿಯಿಂದ ನಿದ್ರಾಭಂಗ’

ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾರ್ಮಿಕರು ಹಗಲು–ರಾತ್ರಿ ದುಡಿಯುತ್ತಿದ್ದಾರೆ. ರಾತ್ರಿ 2 ಗಂಟೆಯವರೆಗೆ ಯಂತ್ರಗಳ ಶಬ್ದ ಕೇಳುವುದರಿಂದ ನಿದ್ದೆ ಮಾಡುವುದಕ್ಕೆ ತೊಂದರೆಯಾಗಿದೆ

ನಾಗರಾಜ, ಕೆಂಗೇರಿ

**

‘ಕಾಮಗಾರಿ ಚುರುಕಾಗಬೇಕು’

ಕೆಲಸವೇನೋ ನಡೆಯುತ್ತಿದೆ. ಆದರೆ, ಇನ್ನೂ ಚುರುಕಾಗಬೇಕು. 2018ರಲ್ಲಿ ಕೆಂಗೇರಿಗೆ ಮೆಟ್ರೊ ರೈಲು ಬರುತ್ತದೆ ಎಂದಿದ್ದರು. ಆದರೆ, ನಿಲ್ದಾಣಗಳ ನಿರ್ಮಾಣವೇ ಇನ್ನೂ ಆಗಿಲ್ಲ. ಸಂಚಾರ ದಟ್ಟಣೆ, ದೂಳಿನ ಸಮಸ್ಯೆ ಇದೆ.

ಜಗದೀಶ, ಕೆಂಗೇರಿ ನಿವಾಸಿ

**

‘ವಾಹನ ಸಂಚಾರಕ್ಕೆ ಈಗ ತೊಡಕಿಲ್ಲ’

ಕಾರ್ಮಿಕರು ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳೂ ಬಂದು ಆಗಾಗ ಪರಿಶೀಲನೆ ನಡೆಸುತ್ತಿದ್ದಾರೆ. ವಾಹನ ಸಂಚಾರಕ್ಕೆ ಇಲ್ಲಿ ತೊಡಕು ಉಂಟಾಗಿತ್ತು. ಅದನ್ನು ಬಗೆಹರಿಸಿದ್ದಾರೆ.

ಎಚ್. ತಿಪ್ಪೇಸ್ವಾಮಿ, ಕೆಂಗೇರಿ ನಿವಾಸಿ

**

‘ನಿಲ್ದಾಣಗಳ ಕೆಲಸ ನಿಧಾನಗತಿ’

ಪಿಲ್ಲರ್‌ಗಳನ್ನು ಹಾಕುವ, ಎತ್ತರಿಸಿದ ಮಾರ್ಗ ನಿರ್ಮಿಸುವ ಕಾಮಗಾರಿ ಆರಂಭದಲ್ಲಿ ಚುರುಕಾಗಿ ನಡೆಯಿತು. ಇದೀಗ ನಿಲ್ದಾಣಗಳ ನಿರ್ಮಾಣ ಕಾಮಗಾರಿ ನಿಧಾನವಾಗಿದೆ. ಎಂದು ಮುಗಿಯುವುದೋ.

ನಂದಕುಮಾರ್, ಕೆಂಗೇರಿ

**

ಭೂಸ್ವಾಧೀನ ವಿಳಂಬ, ಗುತ್ತಿಗೆ ಪಡೆದ ಕಂಪನಿಯ ಆರ್ಥಿಕ ಸಮಸ್ಯೆ ಕಾಮಗಾರಿಯನ್ನು ಕುಂಠಿತಗೊಳಿಸಿತು. 2020ರ ಆಗಸ್ಟ್‌ ಒಳಗೆ ಮೆಟ್ರೊ ಸಂಚರಿಸಲಿದೆ
- ಬಿ.ಎಲ್‌. ಯಶವಂತ ಚವಾಣ್‌ , ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !