ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಕ್ಕೆ ಮೆಟ್ರೊ: ಎರಡು ತಿಂಗಳಲ್ಲಿ ಭೂಸ್ವಾಧೀನ ಪೂರ್ಣ

ಹೆಚ್ಚುವರಿಯಾಗಿ 9,521 ಚ.ಮೀ. ಭೂಮಿ ಸ್ವಾಧೀನಕ್ಕೆ ಒಪ್ಪಿಗೆ
Last Updated 9 ಜೂನ್ 2020, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೆ.ಆರ್.ಪುರ ಮೆಟ್ರೊ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ (ರೀಚ್‌ 2ಬಿ) ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 9,521 ಚ.ಮೀ. ವಿಸ್ತೀರ್ಣದಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ (ಬಿಎಂಆರ್‌ಸಿಎಲ್‌)ರಾಜ್ಯಸರ್ಕಾರವು ಒಪ್ಪಿಗೆ ನೀಡಿದೆ.

‘ರೀಚ್‌ 2ಬಿ ಮಾರ್ಗ ನಿರ್ಮಾಣಕ್ಕಾಗಿ ಈವರೆಗೆ 3.19 ಲಕ್ಷ ಚ.ಮೀ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಈಗ ಘೋಷಿಸಲಾಗಿರುವ 9,521 ಚ.ಮೀ. ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ಈ ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾದಂತಾಗುತ್ತದೆ. ಎರಡು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ’ ಎಂದು ಬಿಎಂಆರ್‌ಸಿಎಲ್‌ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಪ್ಪ ಗೌಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘3.19 ಲಕ್ಷ ಚ.ಮೀ. ಭೂಮಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಮೊದಲೇ 95 ಸಾವಿರ ಚ.ಮೀ. ಭೂಮಿಯನ್ನು ಸ್ವಾಧೀನಪಡಿಸಿ ಇಟ್ಟುಕೊಂಡಿತ್ತು. ಅದನ್ನು ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಈ ಮಾರ್ಗದಲ್ಲಿ ಈವರೆಗೆ 238 ಕಟ್ಟಡಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಕಟ್ಟಡ ಮಾಲೀಕರಿಗೆ ₹200 ಕೋಟಿಯವರೆಗೆ ಪರಿಹಾರ ನೀಡಲಾಗಿದ್ದು, ಎನ್‌ಎಚ್‌ಎಐಗೂ ₹340 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಒಟ್ಟು ₹10,584 ಕೋಟಿ ವೆಚ್ಚದಲ್ಲಿ ಈ ರೀಚ್‌ 2ಬಿ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ. 38 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 17 ನಿಲ್ದಾಣಗಳು ತಲೆ ಎತ್ತಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT