ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ, ರಾಜಾನುಕುಂಟೆಗೆ ಮೆಟ್ರೊ: ಡಿಪಿಆರ್‌ಗೆ ಸೂಚನೆ

* ಇಂದಿನಿಂದ ಕೆಂಗೇರಿಯವರೆಗೆ ಮೆಟ್ರೊ ಸೇವೆ * 2024ಕ್ಕೇ ಎರಡನೇ ಹಂತ ಪೂರ್ಣಗೊಳಿಸಲು ಬೊಮ್ಮಾಯಿ ನಿರ್ದೇಶನ
Last Updated 29 ಆಗಸ್ಟ್ 2021, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ನಾಯಂಡಹಳ್ಳಿ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.

‌ಕೆಂಗೇರಿ ಬಸ್‌ ಟರ್ಮಿನಲ್‌ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ‘ಕೆಂಗೇರಿ ಮಾರ್ಗ ಉದ್ಘಾಟನೆಯಿಂದ ಅಭಿವೃದ್ಧಿಯ ನವಯುಗ ಪ್ರಾರಂಭವಾಗಿದೆ. ಮೆಟ್ರೊ ಮಾರ್ಗಗಳು ಭವಿಷ್ಯದಲ್ಲಿ ರಾಮನಗರ, ಮಾಗಡಿ ಮತ್ತು ರಾಜಾನುಕುಂಟೆವರೆಗೂ ವಿಸ್ತರಣೆಯಾಗಬೇಕು’ ಎಂದರು.

‘ಈ ಮಾರ್ಗಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದೂ ಹೇಳಿದರು.

‘ನಗರದಲ್ಲಿ ಒಟ್ಟು 317 ಕಿ.ಮೀ ಮೆಟ್ರೋ ಮಾರ್ಗ ಆಗಬೇಕು. ಇಂದು ಉದ್ಘಾಟಿಸಲಾಗಿರುವ 7.5 ಕಿ.ಮೀ ಸೇರಿದಂತೆ ಈವರೆಗೆ 56 ಕಿ.ಮೀ ಸಾಧನೆ ಆಗಿದೆ. ಮುಂದಿನ ವರ್ಷ 32 ಕಿ.ಮೀ.ವರೆಗಿನ ಮಾರ್ಗ ನಿರ್ಮಿಸಲಾಗುವುದು’ ಎಂದು ಅವರು ಹೇಳಿದರು‌.

2024ಕ್ಕೇ ಪೂರ್ಣಗೊಳಿಸಿ:‘ಎರಡನೇ ಹಂತದ ಯೋಜನೆಯನ್ನು 2024ರೊಳಗೇ ಮುಕ್ತಾಯಗೊಳಿಸಬೇಕು. ಅಧಿಕಾರಿಗಳಿಗೆ ಇದು ಕಷ್ಟ ಅನಿಸಬಹುದು. ಆದರೆ, ಕಷ್ಟಪಟ್ಟರೆ ಯಾವುದೂ ಅಸಾಧ್ಯವಲ್ಲ’ ಎಂದೂ ಹೇಳಿದರು.

ಎರಡನೆ ಹಂತದಲ್ಲಿ 75 ಕಿ.ಮೀ. ಉದ್ದದ ಜಾಲ 2025ರ ಮಾರ್ಚ್‌ಗೆ ಪೂರ್ಣಗೊಳಿಸುವ ಗಡುವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಹೊಂದಿತ್ತು. ಗಡುವಿಗಿಂತ ಆರೇಳು ತಿಂಗಳು ಮುನ್ನವೇ ಪೂರ್ಣಗೊಳಸಬೇಕು ಎಂದು ಬೊಮ್ಮಾಯಿ ಸೂಚಿಸಿದರು.

ಈ ಗುರಿ ಈಡೇರಿದರೆ, ನಗರದಲ್ಲಿ ನಮ್ಮ ಮೆಟ್ರೊದ ಒಟ್ಟು ಜಾಲ 117 ಕಿ.ಮೀ.ಗೆ ವಿಸ್ತರಣೆಯಾಗಲಿದೆ.

‘ಬೆಂಗಳೂರಿನಲ್ಲಿ ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ನಿರ್ಮಿಸಿದಂತೆ, ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಸಿಬಿಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

ವಿಮಾನ ನಿಲ್ದಾಣ ಮಾರ್ಗ ಆಕರ್ಷಣೆ:‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೆಟ್ರೊ ರೈಲು ಸಂಪರ್ಕ ಮಾತ್ರವಲ್ಲದೆ, ಉಪನಗರ ರೈಲಿನ ಸಂಪರ್ಕವನ್ನೂ ನೀಡಲಾಗಿದೆ. ಮುಂದೆ ಹೈಸ್ಪೀಡ್‌ ರೈಲು ಕೂಡ ಓಡಲಿದೆ. ದೇಶದ ಯಾವುದೇ ವಿಮಾನ ನಿಲ್ದಾಣ ರಸ್ತೆಯೂ ಇಂತಹ ಸೌಲಭ್ಯ ಹೊಂದಿಲ್ಲ’ ಎಂದು ಬೊಮ್ಮಾಯಿ ಹೇಳಿದರು.

ಡ್ಯಾಶ್‌ಬೋರ್ಡ್‌ ನಿರ್ಮಾಣ: 'ರಾಜಧಾನಿಯಲ್ಲಿ ನಡೆಯುತ್ತಿರುವ ಬೃಹತ್‌ ಯೋಜನೆಗಳ ಕುರಿತು ಪ್ರತಿದಿನ ಪರಿಶೀಲನೆ ನಡೆಯಲಿದೆ. ಇಂತಹ ಬೃಹತ್‌ ಯೋಜನೆಗಳ ಪರಿಶೀಲನೆಗಾಗಿಯೇ ಪ್ರತ್ಯೇಕ ಡ್ಯಾಶ್‌ ಬೋರ್ಡ್ ನಿರ್ಮಿಸುವ ಕಾರ್ಯ ನಡೆದಿದ್ದು, 20 ದಿನಗಳಲ್ಲಿ ಅದು ಸಿದ್ಧಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ವಿಸ್ತರಣೆ ಅಗತ್ಯ:ಹರ್‌ದೀಪ್‌ ಸಿಂಗ್ ಪುರಿ, ‘ಮೈಸೂರು ರಸ್ತೆ– ಕೆಂಗೇರಿ ವಿಸ್ತರಿತ ಮಾರ್ಗವು ಬೆಂಗಳೂರು ನಗರ ಸಾರಿಗೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ದೇಶದ ಮಾಹಿತಿ ತಂತ್ರಜ್ಞಾನ ವಲಯಕ್ಕೆ ಶೇ 38ರಷ್ಟು ಕೊಡುಗೆ ನೀಡುವ ಬೆಂಗಳೂರಿಗೆ ಮೆಟ್ರೊ ಜಾಲ ಇನ್ನೂ ಹೆಚ್ಚು ವಿಸ್ತರಿಸುವ ಅಗತ್ಯವಿದೆ’ ಎಂದರು.

‘ಕಾಂಗ್ರೆಸ್‌ ನೇತ್ವತ್ವದ ಯುಪಿಎ ಸರ್ಕಾರವು 10 ವರ್ಷಗಳಲ್ಲಿ ನಗರೀಕರಣಕ್ಕೆ ₹1.57 ಸಾವಿರ ಕೋಟಿ ಖರ್ಚು ಮಾಡಿತ್ತು. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಆರು ವರ್ಷಗಳಲ್ಲಿ, ಈ ಮೊತ್ತದ ಆರು ಪಟ್ಟು ಅಂದರೆ ₹1.11 ಲಕ್ಷ ಕೋಟಿಯನ್ನು ನಗರ ಪ್ರದೇಶಗಳ ಅಭಿವೃದ್ಧಿಗೆ ವಿನಿಯೋಗಿಸಿದೆ’ ಎಂದರು.

ಅಂಕಿ–ಅಂಶ

75 ಕಿ.ಮೀ.

ಎರಡನೇ ಹಂತದಲ್ಲಿನ ಮೆಟ್ರೊ ಮಾರ್ಗದ ಒಟ್ಟು ಉದ್ದ

61

ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ಒಟ್ಟು ನಿಲ್ದಾಣಗಳು

56 ಕಿ.ಮೀ.

ಈವರೆಗೆ ಇರುವ ಮೆಟ್ರೊ ಜಾಲದ ಉದ್ದ

56

ನಗರದಲ್ಲಿ ಸದ್ಯ ಇರುವ ಮೆಟ್ರೊ ನಿಲ್ದಾಣಗಳು

ಮೂರನೇ ಹಂತಕ್ಕೆ ಡಿಪಿಆರ್‌ ಶೀಘ್ರ

‘ನಮ್ಮ ಮೆಟ್ರೊ‘ ಮೂರನೇ ಹಂತದ ಸಮಗ್ರ ಯೋಜನಾ ವರದಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.

ಹೊರವರ್ತುಲ ರಸ್ತೆಯ ಪಶ್ಚಿಮ ಮಾರ್ಗ ಕೆಂಪಾಪುರದಿಂದ ಜೆ.ಸಿ. ನಗರ 4ನೇ ಹಂತಕ್ಕೆ 32.16 ಕಿ.ಮೀ. ಉದ್ದ ಹಾಗೂ ಮಾಗಡಿ ರಸ್ತೆ ಮಾರ್ಗವು ಹೊಸಹಳ್ಳಿ ಮೆಟ್ರೊ ನಿಲ್ದಾಣದಿಂದ ಕಡಬಗೆರೆ 12.82 ಕಿ.ಮೀ ಉದ್ದದ ಮಾರ್ಗವು ಮೂರನೇ ಹಂತದಲ್ಲಿ ನಿರ್ಮಾಣವಾಗಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿ ಈ ಹಂತದ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾವವಿದೆ.

ಏಕರೂಪದ ಸ್ಮಾರ್ಟ್‌ಕಾರ್ಡ್‌ ಸೌಲಭ್ಯ ಅಕ್ಟೋಬರ್‌ನಿಂದ

ದೇಶದ ಯಾವುದೇ ಮೆಟ್ರೊ ನಿಲ್ದಾಣಗಳಲ್ಲಿ ಬಳಸಬಹುದಾದ ಏಕರೂಪದ ಸ್ಮಾರ್ಟ್‌ಕಾರ್ಡ್‌ ಬಳಕೆಯು ‘ನಮ್ಮ ಮೆಟ್ರೊ’ದಲ್ಲಿಯೂ ಅಕ್ಟೋಬರ್‌ನಿಂದ ಪ್ರಾರಂಭವಾಗಲಿದೆ.

ಈಗಿನ ಸ್ವಯಂಚಾಲಿತ ದರ ಸಂಗ್ರಹ (ಎಎಫ್‌ಸಿ) ವ್ಯವಸ್ಥೆಯನ್ನು ಉನ್ನತೀಕರಿಸಲಾಗುತ್ತಿದ್ದು, ಓಪನ್‌ಲೂಪ್‌ ಎನ್‌ಸಿಎಂಸಿ (ಒನ್‌ ನೇಷನ್‌, ಒನ್‌ ಕಾರ್ಡ್‌) ಕಾರ್ಡ್‌ ಆಗಿ ರೂಪಿಸುವ ಕಾರ್ಯ ನಡೆಯಲಿದೆ.

‘ಈಗ ಉದ್ಘಾಟನೆಯಾಗುತ್ತಿರುವ ಆರು ನಿಲ್ದಾಣಗಳಲ್ಲಿ ಈ ಎನ್‌ಸಿಎಂಸಿ ಬಳಸುವ ವ್ಯವಸ್ಥೆ ಮಾಡಲಾಗಿದೆ. ಹಂತ–1ರ ಮಾರ್ಗದಲ್ಲಿಯೂ ಎನ್‌ಸಿಎಂಸಿ ಆಧಾರಿತ ಟಿಕೆಟಿಂಗ್ ಸೇವೆಯನ್ನು ಅಕ್ಟೋಬರ್ ಒಳಗೆ ಒದಗಿಸುವ ಗುರಿ ಹೊಂದಲಾಗಿದೆ. ನಂತರದಲ್ಲಿ, ನಗರದ 56 ಕಿ.ಮೀ. ಉದ್ದದ ಮೆಟ್ರೊ ಜಾಲದಲ್ಲಿ ಪ್ರಯಾಣ ದರ ಪಾವತಿಸಲು ಪ್ರಯಾಣಿಕರು ರೂಪೇ ಕಾರ್ಡ್‌ ಅಥವಾ ಎನ್‌ಸಿಎಂಸಿ ಬ್ಯಾಂಕ್ ಕಾರ್ಡ್‌ ಬಳಸಬಹುದು’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್‌ ತಿಳಿಸಿದರು.

ಮುಂದಿನ ಆದ್ಯತೆ ಕೆ.ಆರ್. ಪುರ–ವೈಟ್‌ಫೀಲ್ಡ್‌ ಮಾರ್ಗ

‘ಕೆ.ಆರ್.ಪುರ–ವೈಟ್‌ಫೀಲ್ಡ್‌ ಮಾರ್ಗದಲ್ಲಿ ಕಾಮಗಾರಿ ಚುರುಕುಗೊಳ್ಳಲಿದ್ದು, ಕೆಂಗೇರಿ ನಂತರ, ಉದ್ಘಾಟನೆಗೊಳ್ಳಲಿರುವ ವಿಸ್ತರಿತ ಮಾರ್ಗ ಇದಾಗಲಿದೆ’ ಎಂದು ಅಂಜುಮ್ ಪರ್ವೇಜ್‌ ಹೇಳಿದರು.

‘ಯಾವುದೇ ಮಾರ್ಗದ ನಿರ್ಮಾಣ ಕಾಮಗಾರಿಯ ಮುಕ್ತಾಯದ ಸಮಯ ಆಯಾ ಗುತ್ತಿಗೆದಾರರನ್ನು ಅವಲಂಬಿಸಿರುತ್ತದೆ. ಸದ್ಯ, ವೈಟ್‌ಫೀಲ್ಡ್‌ ಮತ್ತು ಕೆ.ಆರ್. ಪುರ ಮಾರ್ಗ ಮುಂದೆ ಉದ್ಘಾಟನೆಗೆ ಸಿದ್ಧವಾಗುವ ನಿರೀಕ್ಷೆ ಇದೆ’ ಎಂದರು.

‘ಎಲೆಕ್ಟ್ರಾನಿಕ್‌ ಸಿಟಿ ಮಾರ್ಗವು ಇದರ ನಂತರ ಸಿದ್ಧಗೊಳ್ಳಲಿದೆ’ ಎಂದೂ ತಿಳಿಸಿದರು.

ಬಿಎಂಆರ್‌ಸಿಎಲ್‌ನಿಂದ ಕನ್ನಡ ಕಡೆಗಣನೆ

ಕೆಂಗೇರಿ ವಿಸ್ತರಿತ ಮಾರ್ಗದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯ ಹಿಂದೆ ಹಾಕಲಾಗಿದ್ದ ಪರದೆಯ ಮೇಲೆ ಕನ್ನಡಕ್ಕೆ ಸ್ಥಾನ ಇರಲಿಲ್ಲ. ಎಲ್ಲ ಮಾಹಿತಿಯೂ ಇಂಗ್ಲಿಷ್‌ನಲ್ಲಿಯೇ ಇತ್ತು. ಯಾವ ಗಣ್ಯರೂ ಈ ಬಗ್ಗೆ ಆಕ್ಷೇಪವನ್ನೂ ಎತ್ತಲಿಲ್ಲ.

‘ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪದೇ ಪದೇ ಕನ್ನಡವನ್ನು ಕಡೆಗಣಿಸಿ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯನ್ನು ಹೇರಲಾಗುತ್ತಿದೆ. ಬಿಎಂಆರ್‌ಸಿಎಲ್‌ ಕೂಡ ಕನ್ನಡವನ್ನು ಕಡೆಗಣಿಸುತ್ತಿರುತ್ತದೆ’ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

‘ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಕೆಲವು ತಪ್ಪುಗಳು ಆಗುವುದು ಸಹಜ. ಆದರೆ, ಉದ್ದೇಶಪೂರ್ವಕವಾಗಿ ಕನ್ನಡವನ್ನು ಕೈಬಿಟ್ಟಿಲ್ಲ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಅಂಜುಮ್‌ ಪರ್ವೇಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT