ಸೋಮವಾರ, ಜೂನ್ 14, 2021
20 °C
ನಮ್ಮ ಮೆಟ್ರೊ: ಗುಲಾಬಿ ಮಾರ್ಗದ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿನ ಕಾಮಗಾರಿ ಗುತ್ತಿಗೆ ರದ್ದು

ನಮ್ಮ ಮೆಟ್ರೊ: ಕಾಮಗಾರಿ ಸ್ಥಗಿತ–ದಟ್ಟಣೆ ವಿಪರೀತ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ‘ ಎರಡನೇ ಹಂತದಲ್ಲಿ ಗುಲಾಬಿ ಮಾರ್ಗದಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಮತ್ತು ಜನರ ಪರದಾಟ ಮುಂದುವರಿದಿದೆ.

‘ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಈ ಮಾರ್ಗದಲ್ಲಿ ಮೆಟ್ರೊ ಪಿಲ್ಲರ್‌ಗಳನ್ನು ಹಾಕಲಾಗಿದೆ. ಉಳಿದಂತೆ ಯಾವ ಕಾಮಗಾರಿಯೂ ನಡೆಯುತ್ತಿಲ್ಲ. ಪಿಲ್ಲರ್‌ಗಳ ಮಧ್ಯೆ ಅಲ್ಲಲ್ಲಿ ಬಿದ್ದಿರುವ ಮಣ್ಣು ರಸ್ತೆಯವರೆಗೂ ಹರಡಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ’ ಎಂದು ವಾಹನ ಸವಾರ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಮಾರ್ಗದಲ್ಲಿ ಮೊದಲೇ ಸಂಚಾರ ದಟ್ಟಣೆ ಹೆಚ್ಚು. ಪರಿಸ್ಥಿತಿ ನೋಡಿದರೆ ಕಾಮಗಾರಿ ಇನ್ನೂ ಎರಡು ಮೂರು ವರ್ಷಗಳಾದರೂ ಮುಗಿಯುವಂತೆ ಕಾಣುತ್ತಿಲ್ಲ’ ಎಂದು ಅವರು ಹೇಳಿದರು.

ಗುತ್ತಿಗೆ ರದ್ದು: ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಹಣಕಾಸಿನ ತೊಂದರೆಯ ಕಾರಣ ನಿಗದಿತ ಅವಧಿಯಲ್ಲಿ ಮುಗಿಸಬೇಕಾದಷ್ಟು ಕಾಮಗಾರಿ ಮುಗಿಸಿಲ್ಲ. ಕಳಪೆ ಕಾರ್ಯಾಚರಣೆ ಪರಿಣಾಮ ಈ ಟೆಂಡರ್‌ ಅನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ರದ್ದು ಮಾಡಿದೆ.

21 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 14 ಕಿ.ಮೀ. ಉದ್ದದ ಸುರಂಗ ಮಾರ್ಗವೂ ಬರುತ್ತದೆ. ಎತ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್‌ ಪಡೆದಿತ್ತು.

2019ರ ಡಿಸೆಂಬರ್‌ ವೇಳೆಗೆ ಶೇ 22ರಷ್ಟು ಸಿವಿಲ್ ಕಾಮಗಾರಿಯನ್ನು ಕಂಪನಿ ಪೂರ್ಣಗೊಳಿಸಿತ್ತು. 2021ರ ಫೆಬ್ರುವರಿಯಾದರೂ ಶೇ 37ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿತ್ತು. ಕಾಮಗಾರಿ ತೀರಾ ವಿಳಂಬವಾದ ಕಾರಣ ನಿಗಮವು ಕಂಪನಿಗೆ ನೋಟಿಸ್ ನೀಡಿತ್ತು.

‘ಟೆಂಡರ್‌ನ ಷರತ್ತಿಗೆ ಅನುಗುಣವಾಗಿ ಕಾಲಮಿತಿಯಲ್ಲಿ ಮುಗಿಸಬೇಕಾದಷ್ಟು ಕಾಮಗಾರಿಯನ್ನು ಕಂಪನಿ ಮುಗಿಸಿರಲಿಲ್ಲ. ಅವರಿಗೆ ನೀಡಿದ್ದ ಗುತ್ತಿಗೆ ರದ್ದು ಮಾಡಿ, ಹೊಸ ಟೆಂಡರ್‌ ಕರೆಯಲಾಗಿದೆ. ಈ ಮಾರ್ಗದಲ್ಲಿ ಮತ್ತೆ ಕೆಲಸ ಪ್ರಾರಂಭವಾಗಲು ಇನ್ನೂ 3ರಿಂದ 4 ತಿಂಗಳು ಆಗಬಹುದು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಏ.21 ಕೊನೆಯ ದಿನ: ಈ ಮಾರ್ಗದಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿಗಮವು ಮಾ.22ರಂದು ನಿಗಮವು ಹೊಸ ಟೆಂಡರ್ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏ.21 ಕೊನೆಯ ದಿನ.

ಗೊಟ್ಟಿಗೆರೆಯಿಂದ ಸ್ವಾಗತ್‌ ಕ್ರಾಸ್‌ವರೆಗೆ ವಯಡಕ್ಟ್‌ ಮತ್ತು ಐದು ನಿಲ್ದಾಣಗಳ ನಿರ್ಮಾಣ ಹಾಗೂ ಕೊತ್ತನೂರು ಡಿಪೊ ನಿರ್ಮಾಣ ಗುತ್ತಿಗೆಯನ್ನು ಇದು ಹೊಂದಿದೆ.

ಗೊಟ್ಟಿಗೆರೆ, ಹುಳಿಮಾವು, ಐಐಎಂಬಿ, ಜೆ.ಪಿ.ನಗರ 4ನೇ ಹಂತ ಹಾಗೂ ಸ್ವಾಗತ್ ಕ್ರಾಸ್‌ ನಿಲ್ದಾಣಗಳನ್ನು ನಿರ್ಮಿಸಬೇಕಾಗುತ್ತದೆ.

ಮೂರು ವರ್ಷ ಪರದಾಟ: ‘ಗುಲಾಬಿ ಮಾರ್ಗದ ಈ ಎತ್ತರಿಸಿದ ಮಾರ್ಗ ನಿರ್ಮಾಣ ಕಾಮಗಾರಿಯು 2023ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದು ನಿಗಮ ಹೇಳಿದೆ.

ಅಂದರೆ, ಈ ಮಾರ್ಗದಲ್ಲಿ ಇನ್ನೂ ಮೂರು ವರ್ಷಗಳವರೆಗೆ ದೂಳು, ಸಂಚಾರ ದಟ್ಟಣೆ ಸಾಮಾನ್ಯವಾಗಿರಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು