ಶುಕ್ರವಾರ, ಮೇ 14, 2021
27 °C

‘ಸೂಚನಾ ಫಲಕ ಇಲ್ಲದ್ದೇ ಸಾವಿಗೆ ಕಾರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಯಲಚೇನಹಳ್ಳಿ ನಿಲ್ದಾಣದಲ್ಲಿ ಅಪಾಯದ ಕುರಿತು ಎಚ್ಚರಿಸುವ ಸೂಚನಾ ಫಲಕ ಇಲ್ಲದಿರುವುದೇ ವೃದ್ಧನ ಸಾವಿಗೆ ಕಾರಣ ಎಂದು ನಾಗರಿಕರು ದೂರಿದ್ದಾರೆ.

ಶೌಚಾಲಯ ಎಂದು ಭಾವಿಸಿ, ವಿದ್ಯುತ್‌ ಪರಿಕರ, ಕೊಳಚೆ ‍‍ಪೈಪ್‌ ಮತ್ತಿತರ ಕೇಬಲ್‌ಗಳ ದುರಸ್ತಿಗೆ ಮೀಸಲಾಗಿರಿಸಿದ್ದ ಕೊಠಡಿಗೆ (ಯುಟಿಲಿಟಿ ಶಾಫ್ಟ್‌) ತೆರಳಿದ್ದ 65 ವರ್ಷದ ನಾಗರಾಜ್ ಎಂಬುವರು, ಏ.4ರಂದು ಸಾವಿಗೀಡಾಗಿದ್ದರು. ಏ.9ಕ್ಕೆ ಇದು ಗಮನಕ್ಕೆ ಬಂದಿದೆ.

‘ಇಂತಹ ಸ್ಥಳಗಳು ಅಪಾಯಕಾರಿಯಾಗಿರುತ್ತವೆ. ಆ ಕೊಠಡಿಗೆ ಬೀಗ ಹಾಕಬೇಕಾಗಿತ್ತು ಮತ್ತು ಇದು ಅಪಾಯಕಾರಿ ಸ್ಥಳ, ಪ್ರವೇಶ ನಿರ್ಬಂಧಿಸಿದೆ ಎಂದ ಎಚ್ಚರಿಕೆ ಫಲಕವನ್ನು ನಿಗಮವು ಅಳವಡಿಸಬೇಕಾಗಿತ್ತು. ಈ ವಿಷಯದಲ್ಲಿ ನಿಗಮವು ನಿರ್ಲಕ್ಷ್ಯ ವಹಿಸಿದೆ’ ಎಂದು ಭಾರ್ಗವಿ ಎಂಬುವರು ದೂರಿದ್ದಾರೆ.

‘ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಸೂಚನಾ ಫಲಕವೂ ಕನ್ನಡದಲ್ಲಿಲ್ಲ. ಮೆಟ್ರೊ ನಿಲ್ದಾಣಗಳಲ್ಲಿ ಇದರಿಂದ ಅನೇಕರಿಗೆ ತೊಂದರೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಸ್ಥಳೀಯ ಭಾಷೆಯಲ್ಲಿ ಮಾಹಿತಿ ಒದಗಿಸುವುದು ಎಷ್ಟು ಮಹತ್ವದ್ದು ಎಂಬುದನ್ನು ಬಿಎಂಆರ್‌ಸಿಎಲ್‌ ಇನ್ನು ಮುಂದಾದರೂ ತಿಳಿದುಕೊಳ್ಳಬೇಕು. ಕನ್ನಡದಲ್ಲಿಯೇ ಸೂಚನಾ ಫಲಕಗಳು, ಮಾಹಿತಿ ಫಲಕ ಇರಬೇಕು ಎಂದು ಈ ಹಿಂದೆ ಪ್ರತಿಭಟನೆ ಮಾಡಿದ್ದೆವು. ಆದರೂ ಪ್ರಯೋಜನವಾಗಿಲ್ಲ’ ಎಂದು ಮೆಟ್ರೊ ರೈಲು ಪ್ರಯಾಣಿಕ ಗುರು ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

‘ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು