ಮಂಗಳವಾರ, ಮಾರ್ಚ್ 2, 2021
23 °C
ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗ: ನಿರ್ಮಾಣಕ್ಕೆ ಮುನ್ನವೇ ಬಿಎಂಆರ್‌ಸಿಎಲ್‌ ಕ್ರಮ

ಮೆಟ್ರೊ: ನಾಲ್ಕು ನಿಲ್ದಾಣಗಳ ಹೆಸರು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೆ.ಆರ್‌.ಪುರ– ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ನಿರ್ಮಿಸಲು ಉದ್ದೇಶಿಸಿರುವ ಮೆಟ್ರೊ ಮಾರ್ಗದ ನಾಲ್ಕು ನಿಲ್ದಾಣಗಳ ಹೆಸರುಗಳನ್ನು ಅವು ನಿರ್ಮಾಣವಾಗುವ ಮುನ್ನವೇ ಬದಲಾಯಿಸಲಾಗುತ್ತಿದೆ.

ಬಾಬೂಸಪಾಳ್ಯ ನಿಲ್ದಾಣವನ್ನು ಎಚ್‌ಆರ್‌ಬಿಆರ್‌ ಲೇಔಟ್‌ ನಿಲ್ದಾಣವೆಂದೂ, ಕೋಗಿಲು ಕ್ರಾಸ್‌ ನಿಲ್ದಾಣದ ಹೆಸರನ್ನು ಯಲಹಂಕ ನಿಲ್ದಾಣ ಎಂದೂ, ಸ್ಕೈ ಗಾರ್ಡನ್‌ ನಿಲ್ದಾಣವನ್ನು ಏರ್‌ಪೋರ್ಟ್‌ ಸಿಟಿ ಎಂದೂ ಹಾಗೂ ಏರ್‌ಪೋರ್ಟ್ ಟರ್ಮಿನಲ್‌ ನಿಲ್ದಾಣವನ್ನು ಕೆಐಎ ಟರ್ಮಿನಲ್ಸ್‌ ಎಂದೂ ಮರುನಾಮಕರಣಗೊಳಿಸಲು ಅನುಮೋದನೆ ನೀಡುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಸರ್ಕಾರವನ್ನು ಕೋರಿತ್ತು. ಈ ಪ್ರಸ್ತಾಪಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ.

ಎರಡರ ಬದಲು ಒಂದೇ ನಿಲ್ದಾಣ: ಕಸ್ತೂರಿನಗರ ಹಾಗೂ ಚನ್ನಸಂದ್ರಗಳಲ್ಲಿ ನಿಲ್ದಾಣ ನಿರ್ಮಿಸಲು ಈ ಹಿಂದೆ ಬಿಎಂಆರ್‌ಸಿಎಲ್‌ ಉದ್ದೇಶಿಸಿತ್ತು. ಈ ಎರಡು ನಿಲ್ದಾಣಗಳ ಬದಲು ಒಂದೇ ನಿಲ್ದಾಣ ನಿರ್ಮಿಸುವ ಪ್ರಸ್ತಾವಕ್ಕೂ ಸರ್ಕಾರ ಸಮ್ಮತಿಸಿದೆ. ಪರಿಷ್ಕೃತ ನಿಲ್ದಾಣವು ಈ ಹಿಂದೆ ಪ್ರಸ್ತಾಪಿಸಿದ್ದ ಕಸ್ತೂರಿ ನಗರ ನಿಲ್ದಾಣದ ಸ್ಥಳದಿಂದ 559 ಮೀ ಉತ್ತರದಲ್ಲಿ ಹಾಗೂ ಚನ್ನಸಂದ್ರ ನಿಲ್ದಾಣಕ್ಕೆ ಜಾಗ ಗುರುತಿಸಿದ್ದಲ್ಲಿಂದ 289 ಮೀ ದಕ್ಷಿಣದಲ್ಲಿ ನಿರ್ಮಾಣವಾಗಲಿದೆ. ಪರಿಷ್ಕೃತ ಜಾಗವು ಕಸ್ತೂರಿನಗರದ ನಿವಾಸಿಗಳಿಗೆ ಹೆಚ್ಚು ಹತ್ತಿರದಲ್ಲಿದೆ. 

ವರ್ತುಲ ರಸ್ತೆಯ ಒಳಗಿನ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಸ್ತೂರಿನಗರ ನಿಲ್ದಾಣವನ್ನು ಬೆನ್ನಿಗಾನಹಳ್ಳಿ ಜಂಕ್ಷನ್‌ನ ಸಮೀಪದಲ್ಲಿ ನಿರ್ಮಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ಆದರೆ, ಅಲ್ಲಿನ ಸಂಚಾರ ದಟ್ಟಣೆ ಹೆಚ್ಚು ಇರುವುದರಿಂದ ಅದು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ನಿಗಮವು ಬಂದಿದೆ. ಪರಿಷ್ಕೃತ ಸ್ಥಳವು ರಾಮಮೂರ್ತಿನಗರಕ್ಕೂ ಸಮೀಪದಲ್ಲಿದೆ. 

ಕಸ್ತೂರಿನಗರ ನಿಲ್ದಾಣಕ್ಕೆ ಈ ಹಿಂದೆ ಗುರುತಿಸಿದ್ದ ಸ್ಥಳದ ಜಾಗದ ಸಮೀಪದಲ್ಲೇ ರೈಲ್ವೆ ಇಲಾಖೆಗೆ ಸೇರಿದ ಜಾಗವಿದೆ. ಆ ನಿಲ್ದಾಣದ ಪೂರ್ವ ದಿಕ್ಕಿನಲ್ಲಿ ರೈಲು ಮಾರ್ಗವು ಹಾದುಹೋಗುತ್ತಿತ್ತು. ಅಲ್ಲೇ ನಿಲ್ದಾಣ ನಿರ್ಮಿಸಿದರೆ, ಅದನ್ನು ಬಳಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವನ್ನು ನಿರೀಕ್ಷಿಸುವಂತಿಲ್ಲ ಎಂದು ನಿಗಮವು ಅಭಿಪ್ರಾಯಪಟ್ಟಿದೆ.

ಬೆಟ್ಟಹಲಸೂರಿನಲ್ಲಿ ಹೊಸ ನಿಲ್ದಾಣ
ಬೆಂಗಳೂರು ಕ್ರಾಸ್‌ ಮತ್ತು ಟ್ರಂಪೆಟ್‌ ಜಂಕ್ಷನ್‌ ನಡುವಿನ ಬೆಟ್ಟಹಲಸೂರಿನಲ್ಲಿ ಹೊಸ ಮೆಟ್ರೊ ನಿಲ್ದಾಣವನ್ನು ನಿರ್ಮಿಸಲು ಅನುಮತಿ ಕೋರಿ ಬಿಎಂಆರ್‌ಸಿಎಲ್‌ ಸಲ್ಲಿಸಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಸ್ಥಳವು ಬೆಂಗಳೂರು ಕ್ರಾಸ್‌ನಿಂದ 4.03 ಕಿ.ಮೀ ಹಾಗೂ ಟ್ರಂಪೆಟ್‌ನಿಂದ 4.68 ಕಿ.ಮೀ ದೂರದಲ್ಲಿದೆ.

ಬಿಡಿಎ ಪರಿಷ್ಕೃತ ನಗರ ಮಹಾಯೋಜನೆ– 2031ರಲ್ಲಿ ಯಲಹಂಕದಾಚೆ ಹೆಚ್ಚಿನ ವಸತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವ ಇದೆ. ಹಾಗಾಗಿ ಈ ಪ್ರದೇಶದಲ್ಲಿ ಹೆಚ್ಚು ಜನವಸತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ನಿಗಮವು ಹೇಳಿದೆ. ಹೊಸ ನಿಲ್ದಾಣಕ್ಕೆ ₹ 140 ಕೋಟಿ ಹಾಗೂ ಭೂಮಿಯ ಮೌಲ್ಯವನ್ನು ಭರಿಸಲು ಎಂಬಸಿ ಬಳಗವು ಒಪ್ಪಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು