ಬೆಂಗಳೂರು: ಮೆಟ್ರೊ ರೈಲು ಮಾರ್ಗ ವಿಸ್ತರಣೆಗಾಗಿ ನಡೆಯುತ್ತಿರುವ ಸುರಂಗ ಮಾರ್ಗಗಳು ಮತ್ತು ಸುರಂಗ ನಿಲ್ದಾಣಗಳ ಕಾಮಗಾರಿಗಳು 2025ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದ ಲಕ್ಕಸಂದ್ರ ಸುರಂಗ ಮಾರ್ಗ ಹಾಗೂ ಮಹಾತ್ಮ ಗಾಂಧಿ ರಸ್ತೆಯ ಸುರಂಗ ಸ್ಟೇಷನ್ ಬಳಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿಲೋಮೀಟರ್ ಇದೆ. ಅದರಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿ.ಮೀ. ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳುತ್ತಿದ್ದು, 6 ನಿಲ್ದಾಣಗಳಿವೆ. ಡೈರಿ ವೃತ್ತದಿಂದ ನಾಗವಾರದವರೆಗೆ 13.76 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ 12 ಸುರಂಗ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಕೆಲವೆಡೆ ಶೇ 70ರಿಂದ 80ವರೆಗೆ ಕಾಮಗಾರಿ ಆಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರು ಸಹಕಾರ ನೀಡಬೇಕು ಎಂದು ತಿಳಿಸಿದರು.
’ಬ್ರ್ಯಾಂಡ್ ಬೆಂಗಳೂರು’ ನಿರ್ಮಾಣ ಮಾಡಲು ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಬೇಕು. ಅದಕ್ಕೆ ಆದ್ಯತೆ ನೀಡಿ ಕಾಮಗಾರಿ ತೀವ್ರಗತಿಯಲ್ಲಿ ಮಾಡಲಾಗುತ್ತಿದೆ. ತಾಂತ್ರಿಕವಾಗಿ ನಡೆಯುವ ಕಾಮಗಾರಿಗಳು ಇದಾಗಿರುವುದರಿಂದ ಬಹಳ ಸುರಕ್ಷಿತವಾಗಿ ಮಾಡಬೇಕಿದೆ. ಹಾಗಾಗಿ ಅದಕ್ಕೆ ಸಮಯ ಬೇಕಾಗುತ್ತದೆ ಎಂದು ಹೇಳಿದರು.
ಯೋಜನೆ: ಹಂತರ 2ರ ಯೋಜನೆಯಡಿ ರೀಚ್–6 ಮಾರ್ಗ ಇದಾಗಿದೆ. ಒಟ್ಟು ₹ 5,925.94 ಕೋಟಿ ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಸುರಂಗ ಮಾರ್ಗವು ಪ್ಯಾಕೇಜ್ 1ರಲ್ಲಿ ಶೇ 80ರಷ್ಟು (5346 ಮೀಟರ್‌ಗಳಲ್ಲಿ 4327 ಮೀಟರ್) ಪೂರ್ಣಗೊಂಡಿದೆ. ಪ್ಯಾಕೇಜ್ 2 ಸಂಪೂರ್ಣವಾಗಿದೆ(4423 ಮೀಟರ್), ಮೂರನೇ ಪ್ಯಾಕೇಜ್ ಶೇ 98 (5116ರಲ್ಲಿ 4827 ಮೀಟರ್) ಹಾಗೂ ನಾಲ್ಕನೇ ಪ್ಯಾಕೇಜ್ ಶೇ 54ರಷ್ಟು (6375ರಲ್ಲಿ 3122 ಮೀಟರ್) ಪೂರ್ಣಗೊಂಡಿದೆ.
ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಸುರಂಗ ನಿಲ್ದಾಣಗಳು ಶೇ 48ರಷ್ಟು ಆಗಿವೆ. ಆರ್‌ಎಂಎಸ್, ಎಂಜಿ ರೋಡ್, ಶಿವಾಜಿನಗರ ನಿಲ್ದಾಣಗಳು ಶೇ 79ರಷ್ಟು ಪೂರ್ಣಗೊಂಡಿವೆ. ಕಂಟೋನ್ಮೆಂಟ್, ಪಾಟರಿಟೌನ್ ನಿಲ್ದಾಣಗಳು ಶೇ 75ರಷ್ಟು ಹಾಗೂ ಟ್ಯಾನರಿ ರಸ್ತೆ, ವೆಂಕಟೇಶಪುರ, ಕೆ.ಜಿ. ಹಳ್ಳಿ, ನಾಗವಾರ ಮೆಟ್ರೊ ನಿಲ್ದಾಣಗಳು ಶೇ 49 ಪೂರ್ಣಗೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.