ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ದುರಂತ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

₹ 10 ಕೋಟಿ ಪರಿಹಾರ ಕೋರಿ ಅರ್ಜಿ
Published 25 ಜುಲೈ 2023, 21:17 IST
Last Updated 25 ಜುಲೈ 2023, 21:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಗವಾರದ ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಉರುಳಿ ತೇಜಸ್ವಿನಿ ಮತ್ತು ಅವರ ಪುತ್ರ ವಿಹಾನ್ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ₹ 10 ಕೋಟಿ ನಷ್ಟ ಪರಿಹಾರ ನೀಡಲು ಆದೇಶಿಸಬೇಕು’ ಎಂದು ಕೋರಿ ಮೃತ ತೇಜಸ್ವಿನಿ (28) ಅವರ ಪತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್) ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಪತಿ ಲೋಹಿತ್ ಕುಮಾರ್ ವಿ.ಸುಲಾಖೆ ಸಲ್ಲಿಸಿರುವ ರಿಟ್ ಅರ್ಜಿಯನ್ನು, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಎಫ್. ಹುಸೇನ್ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಮೆಟ್ರೊ ಕಾಮಗಾರಿ ಗುತ್ತಿಗೆದಾರ ಕಂಪನಿಯಾದ ಮೆಸರ್ಸ್ ನಾಗಾರ್ಜುನ ಕನ್‌ಸ್ಟ್ರಕ್ಷನ್ ನ ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ ಎಂಟು ಜನ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಘಟನೆ: ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ 2017ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಅವಳಿ ಮಕ್ಕಳು ಜನಿಸಿದ್ದರು. ದಾವಣಗೆರೆಯ ಈ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. 2023ರ ಜನವರಿ 1ರಂದು ಬೆಳಗ್ಗೆ 10 ಗಂಟೆಯ ವೇಳೆಯಲ್ಲಿ ಹೊರಮಾವುನಲ್ಲಿರುವ ತಮ್ಮ ಮನೆಯಿಂದ ಕಚೇರಿಗೆ ಪತ್ನಿ ಮತ್ತು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ನಾಗವಾರದ ಎಚ್‌ಬಿಆರ್ ಬಡಾವಣೆಯ ವರ್ತುಲ ರಸ್ತೆಯ ಆ್ಯಕ್ಸಿಸ್ ಬ್ಯಾಂಕ್ ಮುಂದೆ ಹೋಗುತ್ತಿದ್ದಾಗ ನಿರ್ಮಾಣ ಹಂತದಲ್ಲಿದ್ದ ಮೆಟ್ರೊ ಪಿಲ್ಲರ್ ಇವರ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ತೇಜಸ್ವಿನಿ ಮತ್ತು ಮಗ ವಿಹಾನ್‌ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

‘ಲೋಹಿತ್ ಕುಮಾರ್ ಮತ್ತು ಪುತ್ರಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT