ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ 10 ಲಕ್ಷ ಜನರಿಗೆ 3.5 ಕಿ.ಮೀ ಮೆಟ್ರೊ: ಲಂಡನ್‌ಗಿಂತ ಬೆಂಗಳೂರು ಮುಂದು

ಎರಡನೇ ಹಂತದ ವಿಸ್ತರಣೆ ‍ಪೂರ್ಣಗೊಂಡ ಬಳಿಕ ಈ ಪ್ರಮಾಣ ನಾಲ್ಕು ಪಟ್ಟು ಹೆಚ್ಚುವ ನಿರೀಕ್ಷೆ
Last Updated 6 ಡಿಸೆಂಬರ್ 2021, 21:55 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೊ’ ಜಾಲ ವಿಸ್ತರಣೆಯ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಬಹಳಷ್ಟಿದೆ. ಲಂಡನ್‌ ಹಾಗೂ ದೆಹಲಿ ನಗರಗಳಿಗೆ ಹೋಲಿಸಿದರೆ ನಗರದಲ್ಲಿ ಮೆಟ್ರೊ ಸೌಕರ್ಯ ತೀರಾ ಕಡಿಮೆ. ದೆಹಲಿಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 12.8 ಕಿ.ಮೀ ಮೆಟ್ರೋ ಜಾಲ ಇದ್ದರೆ, ಬೆಂಗಳೂರಿನಲ್ಲಿ ಇಷ್ಟು ಜನಸಂಖ್ಯೆಗೆ 3.5 ಕಿ.ಮೀ ಮೆಟ್ರೊ ಜಾಲವಿದೆ.

ಸಾರ್ವಜನಿಕ ಸಾರಿಗೆಯ ಅಂತರರಾಷ್ಟ್ರೀಯ ಸಂಸ್ಥೆ ‘ಯುಐಟಿ‍ಪಿ’ಯು ಭಾರತದ ಮೆಟ್ರೊ ಯೋಜನೆಗಳನ್ನು ಅಧ್ಯಯನ ಮಾಡಿದ್ದು, ಇದರ ಮುಖ್ಯಾಂಶಗಳನ್ನು ಜಗತ್ತಿನ ಇತರ ರಾಷ್ಟ್ರಗಳ ಮೆಟ್ರೊ ಯೋಜನೆಗಳ ಜೊತೆ ಹೋಲಿಸಿ ವಿಶ್ಲೇಷಣೆ ನಡೆಸಿದೆ. ಇದರ ಫಲಿತಾಂಶವನ್ನು ಆಧರಿಸಿದ ವರದಿಯನ್ನು 2021ರ ನವೆಂಬರ್‌ನಲ್ಲಿ ಪ್ರಕಟಿಸಿದೆ. ಅದರ ಪ್ರಕಾರ ಲಂಡನ್‌ನಲ್ಲಿ 93 ಲಕ್ಷ ಜನಸಂಖ್ಯೆ ಇದ್ದು ಒಟ್ಟು 436 ಕಿ.ಮೀ ಉದ್ದದ ಮೆಟ್ರೊ ಜಾಲವಿದೆ. ಅಂದರೆ ಅಲ್ಲಿ ಪ್ರತಿ
10 ಲಕ್ಷ ಜನಸಂಖ್ಯೆಗೆ 46.9 ಕಿ.ಮೀ ಉದ್ದದ ಮೆಟ್ರೊ ಜಾಲ ಲಭ್ಯ. ಬೆಂಗಳೂರಿನಲ್ಲಿ 2020ರ ಅಂಕಿ–ಅಂಶಗಳ
ಪ್ರಕಾರ 1.23 ಕೋಟಿ ಜನಸಂಖ್ಯೆ ಇದೆ. ಆಗ 42 ಕಿ.ಮೀ ಉದ್ದದ ಮೆಟ್ರೊ ಜಾಲ ಮಾತ್ರ
ಇತ್ತು. ಅಂದರೆ ಪ್ರತಿ 10 ಲಕ್ಷ ಜನಸಂಖ್ಯೆಗೆ 3.4 ಕಿ.ಮೀ ಉದ್ದದ ಮೆಟ್ರೊ ಜಾಲ ಮಾತ್ರ ಇತ್ತು.

2021ರಲ್ಲಿ ಎರಡು ವಿಸ್ತರಿತ ಮಾರ್ಗಗಳು (ಪುಟ್ಟೇನಹಳ್ಳಿ– ರೇಷ್ಮೆ ಸಂಸ್ಥೆ ಮತ್ತು ಮೈಸೂರು
ರಸ್ತೆ– ಕೆಂಗೇರಿ) ಲೋಕಾರ್ಪಣೆಗೊಂಡ ಬಳಿಕ ನಗರದ ಮೆಟ್ರೊ
ಜಾಲ 56 ಕಿ.ಮೀಗೆ ವಿಸ್ತರಣೆಯಾಗಿದೆ.

ನಮ್ಮ ಮೆಟ್ರೊ ಯೋಜನೆಯ ಎರಡನೇ ಹಂತದ (2, 2ಎ, 2ಬಿ ಹಂತಗಳು ಸೇರಿ) ವಿಸ್ತರಣೆಯ ಕಾಮಗಾರಿಗಳನ್ನು 2024ರ ಒಳಗೆ ಪೂರ್ಣಗೊಳಿಸುವ ಉದ್ದೇಶವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೊಂದಿದೆ. ಎರಡನೇ ಹಂತದ ವಿಸ್ತರಣೆ ಪೂರ್ಣಗೊಂಡ ಬಳಿಕ ಮೆಟ್ರೊ ಜಾಲವು175 ಕಿ.ಮೀ.ಗೆ ವಿಸ್ತರಣೆಗೊಳ್ಳಲಿದೆ. ಆಗಲೂ ಪ್ರತಿ10 ಲಕ್ಷ ಜನಸಂಖ್ಯೆಗೆ (ಮೂರು ವರ್ಷದಲ್ಲಿ ಜನಸಂಖ್ಯೆ ಸುಮಾರು12 ಲಕ್ಷ ಹೆಚ್ಚಳವಾಗುವ ಅಂದಾಜಿನಂತೆ) 12.96 ಕಿ.ಮೀ ಮೆಟ್ರೊ ಜಾಲ ಮಾತ್ರನಿರ್ಮಾಣವಾಗಲಿದೆ. ಲಂಡನ್‌ನಷ್ಟು ಪ್ರಮಾಣದಲ್ಲಿ ಮೆಟ್ರೊ ಜಾಲವನ್ನು ಹೊಂದಲು ನಗರದ ಮೆಟ್ರೊ ಜಾಲವನ್ನು
ಈಗ ಯೋಜಿಸಿರುವ ಪ್ರಮಾಣಕ್ಕಿಂತ ನಾಲ್ಕುಪಟ್ಟು ಹೆಚ್ಚು ವಿಸ್ತರಿಸಬೇಕಾಗುತ್ತದೆ.

ಲಂಡನ್‌ಗಿಂತ ಬೆಂಗಳೂರು ಮುಂದು

ಲಂಡನ್‌ಗೆ ಹೋಲಿಸಿದರೆ ಬೆಂಗಳೂರಿನಲ್ಲಿ ‘ಮೆಟ್ರೊ’ ಜಾಲ ಕಡಿಮೆ ಇದ್ದರೂ ಪ್ರತಿ ಕಿ.ಮೀ ಮಾರ್ಗವನ್ನು ಬಳಸುವ ಪ್ರಯಾಣಿಕರ ದೈನಂದಿನ ಸರಾಸರಿ ಆ ನಗರಕ್ಕಿಂತ ತುಸು ಹೆಚ್ಚೇ ಇದೆ.

ಲಂಡನ್‌ನಲ್ಲಿ ಪ್ರತಿ ಕಿ.ಮೀ ಮೆಟ್ರೊ ಮಾರ್ಗವನ್ನು ನಿತ್ಯ ಸರಾಸರಿ 9,129 ಪ್ರಯಾಣಿಕರು ಬಳಸುತ್ತಾರೆ. ಬೆಂಗಳೂರಿನಲ್ಲಿ ಈ ಪ್ರಮಾಣ 9,456ರಷ್ಟಿದೆ. ಮುಂಬೈ ಮೆಟ್ರೊಗೆ ಹೋಲಿಸಿದರೆ ಇದು ತೀರಾ ಕಡಿಮೆ. ಮುಂಬೈನಲ್ಲಿ ಈ ಪ್ರಮಾಣ 40,650ರಷ್ಟಿದೆ. ದೆಹಲಿ ಮೆಟ್ರೊದಲ್ಲಿ ಈ ಸಂಖ್ಯೆ 14 ಸಾವಿರದಷ್ಟಿದೆ.

‘ನಗರದಲ್ಲಿ ನಮ್ಮ ಮೆಟ್ರೊ ಜಾಲ ವಿಸ್ತರಣೆಯಾದಂತೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಲಿದೆ. ಈಗ ನಗರದ ಆಯ್ದೆ ಪ್ರದೇಶಗಳಿಗೆ ಮಾತ್ರ ಮೆಟ್ರೊ ಸಂಪರ್ಕ ಇದೆ. ಹಾಗಾಗಿ ಪ್ರಯಾಣಿಕರು ಸ್ವಲ್ಪ ದೂರ ಮೆಟ್ರೊದಲ್ಲಿ, ಮತ್ತೆ ಸ್ವಲ್ಪ ದೂರ ಬಸ್‌ ಅಥವಾ ಆಟೊಗಳಲ್ಲಿ ಪ್ರಯಾಣಿಸ ಬೇಕಾಗುತ್ತದೆ. ನಗರದ ಎಲ್ಲ ಪ್ರದೇಶಗಳಿಗೂ ಮೆಟ್ರೊ ಸಂಪರ್ಕ ಕಲ್ಪಿಸಿದ ಬಳಿಕ ಪ್ರಯಾಣಿಕರ ಸಂಖ್ಯೆಯು ತನ್ನಿಂದ ತಾನೆ ಹೆಚ್ಚಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT