ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: 2ನೇ ಹಂತದ 40 ಕಿ.ಮೀ ಮಾರ್ಗ ಶೀಘ್ರ ಸೇವೆಗೆ– ಬೊಮ್ಮಾಯಿ

Last Updated 4 ಜನವರಿ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಸುಮಾರು 40 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಶೀಘ್ರವೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್‌ ಮಾರ್ಗಗಳು ಮೆಟ್ರೊ ಸೇವೆಯ ಜಾಲಕ್ಕೆ ಸೇರ್ಪಡೆಗೊಳ್ಳಲಿವೆ. ಇದರೊಂದಿಗೆ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ’ ಎಂದಿದ್ದಾರೆ.

ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ನಡುವಿನ 19 ಕಿಲೋ ಮೀಟರ್ ಮಾರ್ಗದಲ್ಲಿ ವೈಟ್‌ಫೀಲ್ಡ್–ಕೆ.ಆರ್.ಪುರ ಮಾರ್ಗದಲ್ಲಿ ಈಗಾಗಲೇ ಪರೀಕ್ಷಾರ್ಥ ಸಂಚಾರ ನಡೆದಿದ್ದು, ಈ ಮಾರ್ಗವನ್ನು ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳಿಸಲು ಬಿಎಂಆರ್‌ಸಿಎಲ್‌ ಉದ್ದೇಶಿಸಿದೆ. ಬೆನ್ನಿಗಾನಹಳ್ಳಿ ನಿಲ್ದಾಣದ ಬಳಿ ರೈಲು ಹಳಿ ಹಾದು ಹೋಗಿದ್ದರಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಕೆ.ಆರ್‌.‍ಪುರ–ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ಮುಂದುವರಿಸಲು ಇನ್ನೂ ಆರು ತಿಂಗಳು ಬೇಕಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಆರ್.ವಿ.ರಸ್ತೆ–ಬೊಮ್ಮಸಂದ್ರ ಮಾರ್ಗದ 15.5 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ನಿಲ್ದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪರೀಕ್ಷಾರ್ಥ ಸಂಚಾರದ ದಿನಾಂಕ ನಿಗದಿಯಾಗಿಲ್ಲ. ಈ ಮಾರ್ಗವನ್ನು ಜುಲೈ ಅಥವಾ ಆಗಸ್ಟ್‌ನಲ್ಲಿ ಕಾರ್ಯಾರಂಭ ಮಾಡಲು ಅಧಿಕಾರಿಗಳು ಉದ್ದೇಶಿಸಿದ್ದಾರೆ. ಈ ನಡುವೆ ನಾಗಸಂದ್ರ–ಬಿಐಇಸಿ ನಡುವೆ 3.77 ಕಿಲೋ ಮೀಟರ್‌ ಮಾರ್ಗದ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಈ ಮಾರು ಮಾರ್ಗಗಳು ಸೇರಿ 40 ಕಿಲೋ ಮೀಟರ್ ಆಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT