ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಓಡಾಟ ನಿರ್ಬಂಧ; ಚಾಲಕರ ಆಕ್ರೋಶ

ಕಾಮರಾಜ ರಸ್ತೆ ಬಂದ್ * ಎಂ.ಜಿ. ರಸ್ತೆಗೆ ಹೋಗಲು ದುಬಾರಿ ಪ್ರಯಾಣ ದರ
Last Updated 21 ಜೂನ್ 2019, 19:21 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ಕಾಮಗಾರಿಗಾಗಿ ಕಾಮರಾಜ ರಸ್ತೆಯಲ್ಲಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದ್ದು, ಈ ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಲು ಸಾರ್ವಜನಿಕರ ಪರದಾಟ ಮುಂದುವರಿದಿದೆ.

ಅನಿಲ್‌ ಕುಂಬ್ಳೆ ವೃತ್ತದಿಂದ ಕಾವೇರಿ ಎಂಪೋರಿಯಂವರೆಗಿನ ಎಂ.ಜಿ.ರಸ್ತೆಯಲ್ಲಿ ಆಟೊಗಳ ಓಡಾಟಕ್ಕೆ ನಿರ್ಬಂಧ ಹೇರಿ ಹಲವು ವರ್ಷಗಳೇ ಕಳೆದಿವೆ. ಇದೀಗ ಆ ನಿರ್ಬಂಧಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಆಟೊ ಚಾಲಕರು, ನಿರ್ಬಂಧವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.

‘ಮೆಟ್ರೊ ಕಾಮಗಾರಿ ಆರಂಭಕ್ಕೂ ಮುನ್ನ, ಕ್ವೀನ್ಸ್‌ ರಸ್ತೆಯಿಂದ ಕಬ್ಬನ್‌ ರಸ್ತೆ ಮೂಲಕ ಕಾಮರಾಜ ರಸ್ತೆಯಲ್ಲಿ ಬಂದು ಎಂ.ಜಿ.ರಸ್ತೆಗೆ ಹೋಗುತ್ತಿದ್ದೆವು. ಕಾಮಗಾರಿ ಆರಂಭವಾದಾಗಿನಿಂದ, ಕಬ್ಬನ್‌ ರಸ್ತೆಯಲ್ಲೇ ಮುಂದೆ ಸಾಗಿ ಮಣಿಪಾಲ್ ಸೆಂಟರ್‌ ಮೂಲಕ ಎಂ.ಜಿ.ರಸ್ತೆಗೆ ಬರುವಂತಾಗಿದೆ’ ಎಂದು ಆಟೊ ಚಾಲಕ ಇರ್ಫಾನ್ ಹೇಳಿದರು.

‘ಸುತ್ತಿ ಬಳಸಿ ಬರುವುದರಿಂದ ಪ್ರಯಾಣ ದರ ಹೆಚ್ಚಾಗುತ್ತಿದೆ. ಇದರಿಂದ ಪ್ರಯಾಣಿಕರು ಆಟೊದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ನಮಗೀಗ ದುಡಿಮೆಯೂ ಕಡಿಮೆಯಾಗಿದೆ. ಕಾಮಗಾರಿ ಮುಗಿಯುವವರೆಗೆ ಅನಿಲ್‌ ಕುಂಬ್ಳೆ ವೃತ್ತದಿಂದ ಕಾವೇರಿ ಎಂಪೋರಿಯಂವರೆಗಿನ ರಸ್ತೆಯಲ್ಲಿ ಆಟೊಗಳ ಸಂಚಾರಕ್ಕೆ ಪೊಲೀಸರು ಅವಕಾಶ ನೀಡಬೇಕು’ ಎಂದು ಕೋರಿದರು.

‘ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂನಿಂದ ಅನಿಲ್‌ ಕುಂಬ್ಳೆ ವೃತ್ತದವರೆಗಿನ ರಸ್ತೆಯಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರೀಪೇಯ್ಸ್ ಆಟೊ ಕೇಂದ್ರವಿದೆ. ನಿರ್ಬಂಧ ಹಿಂಪಡೆದರೆ, ರಸ್ತೆಯಲ್ಲಿ ಆಟೊಗಳನ್ನು ನಿಲ್ಲಿಸುವುದಿಲ್ಲ. ಬದಲಿಗೆ, ಕೇಂದ್ರಕ್ಕೆ ಹೋಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತೇವೆ’ ಎಂದು ಚಾಲಕ ಮಸೂದ್ ಹೇಳಿದರು.

₹ 25 ಬದಲು ₹40 ದರ: ‘ಕಾಮಗಾರಿ ಶುರುವಾದಾಗಿನಿಂದ ಎಂ.ಜಿ. ರಸ್ತೆಗೆ ಸುತ್ತಿ ಬಳಸಿ ಬರಬೇಕಾದ ಅನಿವಾರ್ಯತೆ ಬಂದೊದಗಿದೆ. ₹ 25 ರೂಪಾಯಿ ಮೀಟರ್‌ ದರ ಆಗುವ ಜಾಗದಲ್ಲಿ ₹ 40 ಪಾವತಿಸಬೇಕಾದ ಸ್ಥಿತಿ ಬಂದಿದೆ’ ಎಂದು ಪ್ರಯಾಣಿಕ ರಮೇಶ್ ಅಳಲು ತೋಡಿಕೊಂಡರು.

‘ಕ್ವೀನ್ಸ್‌ ರಸ್ತೆಯಿಂದ ಸೆಂಟ್ರಲ್‌ ಸ್ಟ್ರೀಟ್ ರಸ್ತೆ ಮೂಲಕ ಅನಿಲ್ ಕುಂಬ್ಳೆ ವೃತ್ತಕ್ಕೆ ಬಂದು ಎಂ.ಜಿ.ರಸ್ತೆ ತಲುಪಬಹುದು. ಆದರೆ, ಈ ಮಾರ್ಗದಲ್ಲಿ ಆಟೊ ಸಂಚಾರ ನಿರ್ಬಂಧಿಸಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಆಕಸ್ಮಾತ್ ಈ ಮಾರ್ಗದಲ್ಲಿ ಬಂದರೆ ದಂಡವನ್ನೂ ವಿಧಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT