ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಗತ್ತು ಇಲ್ಲಿಲ್ಲ, ಕುಟುಂಬದ ಮಿಡಿತವೇ ಇಲ್ಲೆಲ್ಲಾ...

Last Updated 23 ಫೆಬ್ರುವರಿ 2019, 4:19 IST
ಅಕ್ಷರ ಗಾತ್ರ

ಬೆಂಗಳೂರು: ವಾಯುಪಡೆ, ಭೂಸೇನೆ ಮತ್ತು ನೌಕಾಪಡೆಯ ನೂರಾರು ಮಂದಿ ಶನಿವಾರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಜರಾದರು. ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ತೋರಿಸುತ್ತಾ ಹೆಮ್ಮೆಯಿಂದ ತಮ್ಮ ಕೆಲಸದ ವೈಖರಿಯನ್ನು ವಿವರಿಸಿದರು. ವೈಮಾನಿಕ ಪ್ರದರ್ಶನದಲ್ಲಿ ಕಂಡುಬಂದ ರಕ್ಷಣಾ ಸಿಬ್ಬಂದಿಯ ಕೌಟುಂಬಿಕ ಜೀವನದ ಇಣುಕುನೋಟ ಇದಾಗಿದೆ.

ಕ್ಲಿಪ್ಪಿನ ಹಿಡಿತ ಬಿಟ್ಟು ಹೋದ ಜುಟ್ಟು ಹಾಕಲು ಹೆಣಗುತ್ತಿದ್ದ ಅಪ್ಪನ ಹಿಡಿತ ತಪ್ಪಿಕೊಂಡು ಓಡುತ್ತಿದ್ದ ಪುಟ್ಟಿಗೆ ತನ್ನ ಅಪ್ಪ ಈ ದೇಶ ಕಾಯುವ ಹೆಮ್ಮೆಯ ಪೈಲಟ್, ಯುದ್ಧ ವಿಮಾನ ಹಾರಿಸುವ ಪ್ರತಿಷ್ಠಿತ ವ್ಯಕ್ತಿ ಎನ್ನುವ ಪರಿಜ್ಞಾನ ಒಂದಿಷ್ಟೂ ಇರಲಿಲ್ಲ. ಅಪರೂಪಕ್ಕೆ ಸಿಕ್ಕ ಅಪ್ಪನನ್ನು ಕಾಡಿಸಬೇಕು, ಆಡಿಸಬೇಕು ಎಂಬುದಷ್ಟೇ ಅವಳ ಧ್ಯೇಯ.

ವಿಮಾನಗಳ ಮುಂದೆ ನಿಂತ ಅಪ್ಪನ ಟೋಪಿ ಮೇಲೆ ಕೈ ಇಟ್ಟು ಸೆಲ್ಫಿಗೆ ಪೋಸ್ ಕೊಡುತ್ತಿದ್ದ ಪುಟ್ಟನಿಗೆ ನಾಳೆ ಈ ಫೋಟೊ ಯಾರಿಗೆಲ್ಲಾ ತೋರಿಸಬಹುದು ಎನ್ನುವ ಕಾತರ.

ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಬಂದಿದ್ದ ತಂದೆ-ತಾಯಿ. ತಿಳಿ ಬಣ್ಣದ ವಾಯುಪಡೆ ಸಮವಸ್ತ್ರದಲ್ಲಿದ್ದ ಮಗನ ಹೆಗಲು ಹಿಡಿದು ಸುತ್ತುತ್ತಿದ್ದ ಅಪ್ಪನ ಗಡ್ಡ ಹಣ್ಣಾಗಿತ್ತು. ಅವನು ನೀಡುವ ವಿವರಣೆ ಕೇಳುತ್ತಿದ್ದ ಅಮ್ಮನ ಸುಕ್ಕುಗಟ್ಟಿದ ಹಣೆಯ ಮೇಲಿದ್ದ ಗೆರೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು.

'ಅಯ್ಯೋ ನನ್ನ ಮಗನೇ, ಎಷ್ಟೊಂದು ವಿಷಯ ತಿಳ್ಕೊಂಡಿದ್ದೀಯೋ’ ಎಂದು ಅಪ್ಪ ಉದ್ಗರಿಸಿದ ತಕ್ಷಣ ಅಮ್ಮ ತನ್ನ ಯಜಮಾನನ್ನು ಕಣ್ಣಲ್ಲೇ ಗದರಿಸಿ, ಮಗನ ದೃಷ್ಟಿ ತೆಗೆದಳು.

ಆ ಗುಜರಾತಿನ ವಾಯುಯೋಧನ ಮೂಗಿನ ಕೆಳಗೆ ಇದೀಗ ಕುಡಿಮೀಸೆ ಅರಳುತ್ತಿದೆ. ಗಾಢಕೆಂಪು ಲೆಹೆಂಗಾ ತೊಟ್ಟು ಚಂದ ಮೇಕಪ್ ಮಾಡಿಕೊಂಡಿದ್ದ ಹುಡುಗಿ ಅವನ ತೋಳು ಬೆಸೆದುಕೊಂಡೇ ಅಡ್ಡಾಡುತ್ತಿದ್ದಳು. ಸಾಧ್ಯವಾದಷ್ಟೂ ತನ್ನ ತುಕಡಿಯ ಗೆಳೆಯರು-ಅಧಿಕಾರಿಗಳ ಕಣ್ತಪ್ಪಿಸಲು ಯತ್ನಿಸುತ್ತಿದ್ದ ಜೋಡಿ ಆಗೊಮ್ಮೆ ಈಗೊಮ್ಮೆ ಪರಿಚಿತರು ಸಿಕ್ಕಾಗ ನಾಚಿ ಕರಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT