ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾವಕಾಶ ಇಲ್ಲದೇ ನನೆಗುದಿಗೆ ಬಿದ್ದ ಸಬ್‌ ಸ್ಟೇಷನ್‌ ಕೇಂದ್ರ

Last Updated 19 ಮಾರ್ಚ್ 2018, 11:48 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಗುಣಮಟ್ಟದ ವಿದ್ಯುತ್‌ ಪಡೆಯುವ ಜನರ ಬಹುವರ್ಷಗಳ ಕನಸು ನನಸಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ತಾಲ್ಲೂಕಿನ ಬೆಜ್ಜವಳ್ಳಿಯಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಕೆಯ ಸಬ್‌ ಸ್ಟೇಷನ್‌ ಕೇಂದ್ರಕ್ಕೆ ಮಂಜೂರಾತಿ ದೊರೆತು 10 ವರ್ಷ ಕಳೆದಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಗುರುತಿಸುವಲ್ಲಿ ಮೆಸ್ಕಾಂ, ಕಂದಾಯ ಹಾಗೂ ಅರಣ್ಯ ಇಲಾಖೆ ವಿಫಲವಾಗಿರುವುದರಿಂದ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದೆ.

ಸುಮಾರು 40 ಗ್ರಾಮಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸುವ ಮಹತ್ವದ ಯೋಜನೆಗೆ ಮಂಜೂರಾತಿ ದೊರೆತ ನಂತರ ಸ್ಥಳಾವಕಾಶಕ್ಕೆ ಮೆಸ್ಕಾಂ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿ ಫಲ ಕಾಣದೆ ಮೌನಕ್ಕೆ ಶರಣಾದಂತಿದೆ. ಬೆಜ್ಜವಳ್ಳಿ, ತೂದೂರು, ಮಂಡಗದ್ದೆ, ಕನ್ನಂಗಿ, ಹಣಗೆರೆ, ಬಾಂಡ್ಯಕುಕ್ಕೆ, ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿಗಳಿಗೆ ಸಬ್‌ಸ್ಟೇಷನ್‌ ಇಲ್ಲದೇ ಇರುವ ಕಾರಣ ವಿದ್ಯುತ್‌ ಪೂರೈಕೆಯಲ್ಲಿ ಗಣನೀಯ ವ್ಯತ್ಯಯ ಉಂಟಾಗುತ್ತಿದೆ. ಆಧುನಿಕ ಸಬ್‌ಸ್ಟೇಷನ್‌ಗೆ ಮಂಜೂರಾತಿ ದೊರೆಕಿದ್ದರೂ ತ್ರೀಫೇಸ್‌, ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆ ಬದಲಾವಣೆ ಕೆಲಸ ಸಿಬ್ಬಂದಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ.

ಮಂಡಗದ್ದೆ ಭಾಗದ ಗ್ರಾಹಕರಿಗೆ ವಿದ್ಯುತ್‌ ಸರಬರಾಜು ಮಾಡುಲು ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ 2007–08ನೇ ವಾರ್ಷಿಕ ಸಾಲಿನಲ್ಲಿ ಮೆಸ್ಕಾಂ ಇಲಾಖೆ ಸಬ್‌ಸ್ಟೇಷನ್‌ ಮಂಜೂರುಗೊಳಿಸಿತ್ತು. ಇಲಾಖೆಯ ನೀಲ ನಕ್ಷೆಯ ಪ್ರಕಾರ 4 ಎಕರೆಗೂ ಹೆಚ್ಚು ಪ್ರದೇಶ ಅವಶ್ಯವಾಗಿದ್ದು, ಜನವಸತಿ, ಸಾಗುವಳಿ ಪ್ರದೇಶ ಹೊರತಾದ ಸ್ಥಳವನ್ನು ಗುರುತಿಸಬೇಕಿದೆ.

ಕಂದಾಯ, ಅರಣ್ಯ ಇಲಾಖೆ ನಡುವೆ ಹೊದಾಣಿಕೆ ಕೊರತೆಯಿಂದಾಗಿ ಸ್ಥಳ ಗುರುತಾಗಿಲ್ಲ. ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ಗುರುತಿಸಿದ ಸ್ಥಳ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ಸ್ಟೇಷನ್‌ ಆರಂಭಕ್ಕೆ ಅಡ್ಡಿಯಾಗಿದೆ. ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿಗೆ ಹೊಂದಿಕೊಂಡಿರುವ ಬಾಂಡ್ಯಕುಕ್ಕೆ ಗ್ರಾಮದ ಕಂದಾಯ ಪ್ರದೇಶದಲ್ಲಿ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಆದರೆ ಸ್ಥಳ ಇನ್ನೂ ನಿಕ್ಕಿಯಾಗಿಲ್ಲ.

ಮಂಡಗದ್ದೆ ಭಾಗದ ರೈತರು ಹೆಚ್ಚಾಗಿ ಒಣಭೂಮಿಯನ್ನು ಆಶ್ರಯಿಸಿದ್ದು, ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ವಿದ್ಯುತ್‌ ಚಾಲಿತ ನೀರಿನ ಪಂಪುಸೆಟ್ಟುಗಳನ್ನು ಅವಲಂಬಿಸಿದ್ದಾರೆ. ಬೇಸಿಗೆಯ ದಿನಗಳಲ್ಲಿ ಸಾಗುವಳಿ ಪ್ರದೇಶಕ್ಕೆ ನೀರು ಹಾಯಿಸಲು ವಿದ್ಯುತ್‌ ಪೂರೈಕೆ ಅನಿವಾರ್ಯವಾಗಿದೆ. ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದಾಗಿ ಕಂಗೆಟ್ಟಿರುವ ರೈತರು ತಕ್ಷಣ ವಿದ್ಯುತ್‌ ಸಬ್ ಸ್ಟೇಷನ್‌ ನಿರ್ಮಾಣಮಾಡುವಂತೆ ಮೆಸ್ಕಾಂ ಇಲಾಖೆ ಮೇಲೆ ಒತ್ತಡ ತರುತ್ತಿದ್ದಾರೆ. ನಿಗದಿತ ಅವಧಿಯಲ್ಲೂ ತ್ರೀಫೇಸ್‌ ವಿದ್ಯುತ್‌ ಪೂರೈಕೆ ಆಗದೇ ಇರುವುದರಿಂದ ಸಾಗುವಳಿ ಪ್ರದೇಶವನ್ನು ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ವೋಲ್ಟೇಜ್‌ ಸಮಸ್ಯೆ ಎದುರಿಸುತ್ತಿರುವ ರೈತರು ಮೆಸ್ಕಾಂ ಇಲಾಖೆಗೆ ಅನೇಕ ಬಾರಿ ದೂರು ಸಲ್ಲಿಸಿದ್ದಾರೆ. ಇಲಾಖೆ ಮಾತ್ರ ಇಲ್ಲಸಲ್ಲದ ನೆಪ ಹೇಳಿ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಸಬ್‌ಸ್ಟೇಷನ್‌ ನಿರ್ಮಾಣದಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಾಧ್ಯವಿದೆ ಎಂಬ ಅರಿವಿದ್ದರೂ ಜಾಣಕುರುಡು ಪ್ರದರ್ಶಿಸುವ ಮೂಲಕ ರೈತರ ಆಕ್ರೋಶಕ್ಕೆ ಮೆಸ್ಕಾಂ ಇಲಾಖೆ ಗುರಿಯಾಗಿದೆ.

ಶಾಸಕ ಕಿಮ್ಮನೆ ರತ್ನಾಕರ ಅವರು ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡುವಂತೆ ಕಂದಾಯ, ಅರಣ್ಯ ಹಾಗೂ ಮೆಸ್ಕಾಂ ಇಲಾಖೆಗೆ ಸೂಚನೆ ನೀಡುತ್ತಲೇ ಬಂದಿದ್ದಾರೆ. 2008ರಿಂದಲೂ ಕಾನೂನಿನ ಅಡೆತಡೆಗಳ ನೆಪ ಹೇಳುತ್ತಾ ಕಾಲ ನೂಕುತ್ತಿರುವ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡುವಂತೆ ಶಾಸಕರು ಹಲವು ಬಾರಿ ಸೂಚಿಸಿದ್ದಾರೆ. ಅವರ ಮಾತಿಗೂ ಕಿಮ್ಮತ್ತಿನ ಬೆಲೆ ದೊರೆತಿಲ್ಲ.

ಈ ನಡುವೆ ಬೆಜ್ಜವಳ್ಳಿಯಲ್ಲಿ ಮೆಸ್ಕಾಂಗೆ ಸಂಬಂಧಿಸಿದ ಸಾಮಗ್ರಿ ನಿರ್ವಹಣಾ ಸ್ಥಳದಲ್ಲಿ ಸಬ್‌ಸ್ಟೇಷನ್‌ ಸ್ಥಾಪಿಸಲು ಅವಕಾಶ ಲಭ್ಯವಿದೆ. ಕಡಿಮೆ ವಿಸ್ತೀರ್ಣದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸ್ಟೇಷನ್‌ ಆರಂಭಿಸಬಹುದಾಗಿದೆ. ಹೊಸ ತಾಂತ್ರಿಕತೆ ಕಡೆಗೆ ಮೆಸ್ಕಾಂ ಹೆಚ್ಚು ಆಸಕ್ತಿ ತೋರಬೇಕು. ಬೃಹತ್‌ ನಗರ ಪ್ರದೇಶದಲ್ಲಿ ಕಡಿಮೆ ವಿಸ್ತೀರ್ಣದ ಸ್ಥಳದಲ್ಲಿ ಸಬ್‌ಸ್ಟೇಷನ್‌ ನಿರ್ಮಿಸಿದಂತೆ ಇಲ್ಲಿಯೂ ಸ್ಥಾಪನೆ ಮಾಡಬಹುದು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
**
ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಜಾಗ ನಿಗದಿಪಡಿಸಲು ಪ್ರಯತ್ನಿಸಲಾಗಿದೆ. ಅರಣ್ಯ ಇಲಾಖೆಯಿಂದ ಪೂರಕ ಸಹಕಾರ ಸಿಗುತ್ತಿಲ್ಲ. ನಿಯಮ ಮೀರಿಯಾದರೂ ಜಾಗ ನಿಗದಿ ಮಾಡಬೇಕು.
ಮೇಲಿನಕೊಪ್ಪ ಹರೀಶ್‌, ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ
**
ತಹಶೀಲ್ದಾರ್‌ ಸ್ಥಳ ನಿಗದಿ ಮಾಡಿದ ಜಾಗದಲ್ಲಿ ಸಬ್‌ಸ್ಟೇಷನ್‌ ಆರಂಭಿಸಲಾಗುವುದು. ಬಾಂಡ್ಯಕುಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಥಳ ನಿಗದಿಗೆ ಸೂಚಿಸಲಾಗಿದೆ. ಸದ್ಯದಲ್ಲಿಯೇ ಸಬ್‌ಸ್ಟೇಷನ್‌ ಕಾಮಗಾರಿ ಆರಂಭವಾಗಲಿದೆ.
ಕಿಮ್ಮನೆ ರತ್ನಾಕರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT