ಬೆಂಗಳೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಎಂಜಿನಿಯರ್ ಎನ್.ಪಿ. ಬಾಲರಾಜು ಅವರನ್ನು ನಿವೃತ್ತಿ ಬಳಿಕ ಎರಡು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಅದೇ ಹುದ್ದೆಯಲ್ಲಿ ಮುಂದುವರಿಸಲು ಕಡತ ಮಂಡಿಸುವಂತೆ ವಸತಿ ಸಚಿವರ ಕಚೇರಿಯಿಂದ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮತ್ತೆ ಪತ್ರ ಬರೆಯಲಾಗಿದೆ.
ಬಾಲರಾಜು ಇದೇ 31ರಂದು ವಯೋನಿವೃತ್ತಿ ಹೊಂದುತ್ತಿದ್ದಾರೆ. ಸೆಪ್ಟೆಂಬರ್ 1ರಿಂದ ಎರಡು ವರ್ಷಗಳ ಅವಧಿಗೆ ಮಂಡಳಿಯ ಮುಖ್ಯ ಎಂಜಿನಿಯರ್ ಹುದ್ದೆಯಲ್ಲೇ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಜುಲೈ 29ರಂದು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರಿಗೆ ಜುಲೈ 29ರಂದು ಟಿಪ್ಪಣಿ ಹೊರಡಿಸಿದ್ದರು.
ಆದರೆ, ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಮುಂದುವರಿ ದಿರುವ ನಿವೃತ್ತ ಅಧಿಕಾರಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸುವಂತೆ ಹಾಗೂ ನಿವೃತ್ತರನ್ನು ನೇಮಿಸಿಕೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು. ಈ ಕಾರಣದಿಂದ ಬಾಲರಾಜು ಅವರನ್ನು ಗುತ್ತಿಗೆ ಆಧಾರದಲ್ಲಿ ಅದೇ ಹುದ್ದೆಯಲ್ಲಿ ಮುಂದುವರಿಸಲು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಈವರೆಗೂ ಕಡತ ಮಂಡಿಸಿಲ್ಲ.
ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸೋಮವಾರ ಟಿಪ್ಪಣಿ ಹೊರಡಿಸಿರುವ ವಸತಿ ಸಚಿವರ ಆಪ್ತ ಕಾರ್ಯದರ್ಶಿ ಎಸ್. ಸರ್ಫರಾಜ್ ಖಾನ್, ‘ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಎಂಜಿನಿಯರ್ ಎನ್.ಬಿ. ಬಾಲರಾಜು ಆಗಸ್ಟ್ 31ರಂದು ನಿವೃತ್ತರಾಗುತ್ತಿದ್ದು, ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅನುವಾಗುವಂತೆ ಕಡತ ಮಂಡಿಸುವಂತೆ ತಮ್ಮನ್ನು ಕೋರಲು ಸಚಿವರಿಂದ ನಿರ್ದೇಶಿತನಾಗಿದ್ದೇನೆ’ ಎಂದು ತಿಳಿಸಿದ್ದಾರೆ.
ಬಾಲರಾಜು ಈಗ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮುಖ್ಯ ಎಂಜಿನಿಯರ್ ಹುದ್ದೆಯ ಜತೆಗೆ ರಾಜೀವ್ ಗಾಂಧಿ ವಸತಿ ನಿಗಮದ ಮುಖ್ಯ ಎಂಜಿನಿಯರ್ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಹೊಂದಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು ನಗರದಲ್ಲಿ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಗಳ ನಿರ್ಮಾಣ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನೂ ಹೊತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.