ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಿಗೆ ‘ಪ್ರಚಾರ’ ಅಧಿಕಾರಿಗಳಿಗೆ ಪ್ರವಾಸ

ಪ್ರಮುಖ ಕಚೇರಿಗಳಲ್ಲಿ ಜನರ ಸಮಸ್ಯೆ ಕೇಳುವವರೇ ಇಲ್ಲ
Last Updated 28 ನವೆಂಬರ್ 2019, 5:53 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಉಪಚುನಾವಣೆ ಪ್ರಚಾರದಲ್ಲಿ ಮುಳುಗಿದ್ದರೆ, ಕಚೇರಿಯಲ್ಲಿದ್ದು ಜನರ ಕಷ್ಟ ಆಲಿಸಿ, ಆಡಳಿತ ಯಂತ್ರವನ್ನು ಸುಗಮವಾಗಿ ನಡೆಸಬೇಕಾದ ಅಧಿಕಾರಿಗಳ ಪೈಕಿ ಬಹುತೇಕರು ರಜೆ ಮೇಲೆ ತೆರಳಿದ್ದಾರೆ. ಇದರಿಂದಾಗಿ ರಾಜಧಾನಿಯ ಅಧಿಕಾರ ಕೇಂದ್ರಗಳು ಭಣಗುಡುತ್ತಿವೆ.

ಕಳೆದ ವಾರ ನಡೆದ ಸಂಪುಟ ಸಭೆಗೆ ಬಂದಿದ್ದ ಸಚಿವರು ಅಷ್ಟೇ ವೇಗವಾಗಿ ಅಲ್ಲಿಂದ ತೆರಳಿದರು. ಸಚಿವರು ವಿಧಾನಸೌಧದತ್ತ ಬರುವುದು ನಿಲ್ಲುತ್ತಿದ್ದಂತೆ ಅಧಿಕಾರಿಗಳೂ ಕಚೇರಿಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಟೀಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ರಾಜ್ಯಮಟ್ಟದ ಪ್ರಮುಖ ಕಚೇರಿಗಳು ಇರುವೆಡೆ ಹಿರಿಯ ಅಧಿಕಾರಿಗಳ ಸುಳಿವಿಲ್ಲ. ದೂರದ ಊರುಗಳಿಂದ ಕೆಲಸ ನಿಮಿತ್ತ ಅಧಿಕಾರಿಗಳನ್ನು ನೋಡಲು ಬಂದವರಿಗೆ ಕಚೇರಿಯ ಸಿಬ್ಬಂದಿ, ‘ಸಾಹೇಬರು ರಜೆಯಲ್ಲಿ ಇದ್ದಾರೆ. ಇನ್ನೂ ಕಚೇರಿಗೆ ಬಂದಿಲ್ಲ. ಮೀಟಿಂಗ್‌ಗೆ ಹೋಗಿದ್ದಾರೆ’ ಎಂಬ ಉತ್ತರಗಳನ್ನು ನೀಡಿ ಸಾಗಹಾಕುವ ದೃಶ್ಯ ಸಾಮಾನ್ಯವಾಗಿದೆ.

‘ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿ ನೋಡಲು ಬಂದಿದ್ದೆ, ಸಿಗಲಿಲ್ಲ’ ಎಂದು ಮಾಲೂರು ತಾಲ್ಲೂಕು ಚಿಕ್ಕತಿರುಪತಿ ಗ್ರಾಮದ ಪುರುಷೋತ್ತಮ್ ಪ್ರತಿಕ್ರಿಯಿಸಿದರು.

ಹಿರಿಯ ಅಧಿಕಾರಿಗಳು ರಜೆ ಮೇಲೆ ತೆರಳುತ್ತಿದ್ದಂತೆ ಕಿರಿಯ ಅಧಿಕಾರಿಗಳೂ ಅವರನ್ನೇ ಹಿಂಬಾಲಿಸಿದ್ದಾರೆ. ‘ರಜೆ ತೆಗೆದುಕೊಂಡಿರುವ ಅಧಿಕಾರಿಗಳಲ್ಲಿ ಬಹುತೇಕರು ಪ್ರವಾಸಕ್ಕೆ ತೆರಳಿದ್ದಾರೆ. ಕೆಲವರು ಮಾತ್ರ ಇಲಾಖೆಗೆ ಸಂಬಂಧಿಸಿದ ತರಬೇತಿ ಅಥವಾ ಕಚೇರಿ ಕೆಲಸದ ಮೇಲೆ ಹೊರಗಡೆ ಹೋಗಿದ್ದಾರೆ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ರಜೆಗೆ ಕಾರಣ: ‘ವರ್ಷಾಂತ್ಯ ಸಮೀಪಿಸಿದ್ದು, ಉಳಿದಿರುವ ರಜೆಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳ ಬೇಕಾಗಿದೆ. ಹಾಗಾಗಿ ಅಧಿಕಾರಿಗಳು ರಜೆ ಮೇಲೆ ತೆರಳಿದ್ದಾರೆ. ಸಚಿವರು ಚುನಾವಣೆ ಮುಗಿಸಿ ಬರುತ್ತಿದ್ದಂತೆ ಕೆಲಸದ ಒತ್ತಡ ಹೆಚ್ಚುತ್ತದೆ. ಈಗಲೇ ರಜೆ ಮುಗಿಸಿಕೊಂಡು ಬಂದರೆ, ಮುಂದೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂಬುದು ಅಧಿಕಾರಿಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT