ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಟ್ರೊ ಪ್ರೊಜೆಕ್ಷನ್‌’: ಸವಾರರಿಗೆ ಸಂಕಟ

ಸಂಚಾರ ದಟ್ಟಣೆ: ಕಬ್ಬನ್‌ ರಸ್ತೆಯಿಂದ ರಾಜಭವನದತ್ತ ಸಾಗುವವರಿಗೆ ತೊಂದರೆ
Last Updated 31 ಆಗಸ್ಟ್ 2021, 22:54 IST
ಅಕ್ಷರ ಗಾತ್ರ

ಬೆಂಗಳೂರು: ಸರಾಗ ವಾಹನ ಸಂಚಾರಕ್ಕೆ ಅನುವಾಗಲಿ ಎಂಬ ಉದ್ದೇಶದಿಂದ ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣದ ಸನಿಹವಿರುವ ‘ಮಿನ್ಸ್‌ ಸ್ಕ್ವೇರ್‌’ ವೃತ್ತದ ಬಳಿ ‘ಟ್ರಾಫಿಕ್‌ ಐಲ್ಯಾಂಡ್‌’ ನಿರ್ಮಿಸಲಾಗಿದೆ. ಅದಕ್ಕೆ ಹೊಂದಿಕೊಂಡಿರುವ ‘ಮೆಟ್ರೊ ಪ್ರೊಜೆಕ್ಷನ್‌’ಗಳಿಂದಾಗಿಯೇ ಈಗ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದು ವಾಹನ ಸವಾರರ ಸಂಕಟವನ್ನೂ ಹೆಚ್ಚಿಸಿದೆ.

ಎರಡು ಮೆಟ್ರೊ ‘ಪ್ರೊಜೆಕ್ಷನ್‌’ಗಳ ಪೈಕಿ ಒಂದು ಪಾದಚಾರಿ ಮಾರ್ಗದಲ್ಲಿದೆ. ಮತ್ತೊಂದು ರಸ್ತೆಯ ಮಧ್ಯಭಾಗಕ್ಕೆ ಚಾಚಿಕೊಂಡಿದೆ. ಇದರಿಂದಾಗಿ ಕಬ್ಬನ್‌ ರಸ್ತೆಯ ಕಡೆಯಿಂದ ರಾಜಭವನದತ್ತ ಸಾಗುವ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಕ್ವೀನ್ಸ್‌ ರಸ್ತೆಯ ಮೂಲಕ ರಾಜಭವನ ತಲುಪುವವರೂ ಇದೇ ಮಾರ್ಗ ಬಳಸುವುದರಿಂದ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆಗಾಗ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

‘ಸಿಗ್ನಲ್‌ ಬಿಟ್ಟ ಬಳಿಕ ಕಬ್ಬನ್‌ ರಸ್ತೆಯಿಂದ ಬರುವ ಕೆಲ ವಾಹನಗಳು ಸರಿಯಾದ ಪಥದಲ್ಲಿ ಸಾಗುತ್ತವೆ. ಆ ವಾಹನಗಳ ಹಿಂದೆ ಬರುವವರು ಬಲಬದಿಯಿಂದನುಗ್ಗಲು ಪ್ರಯತ್ನಿಸುತ್ತಾರೆ. ಹಾಗೆ ಹೋದವರಿಗೆ ಮೆಟ್ರೊ ಪ್ರೊಜೆಕ್ಷನ್‌ ಅಡ್ಡಿ
ಯಾಗುತ್ತದೆ. ಆಗ ಅನಿವಾರ್ಯವಾಗಿ ಅವರು ತಮ್ಮ ಮುಂದಿರುವ ವಾಹನಗಳು ಸಾಗುವ
ವರೆಗೂ ಅಲ್ಲೇ ನಿಲ್ಲಬೇಕು. ಇದರಿಂದ ಆದಾಯ ತೆರಿಗೆ ಇಲಾಖೆ ಕಡೆಯಿಂದ ಬರುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಒಂದಷ್ಟು ವಾಹನಗಳು ಹೋಗುವಷ್ಟರಲ್ಲಿ ಸಿಗ್ನಲ್‌ ಬೀಳುತ್ತದೆ. ದಟ್ಟಣೆಯ ಕಾರಣ ಕೆಲವರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆ, ಕಚೇರಿಗಳಿಗೆ ಹೋಗಲು ಆಗುತ್ತಿಲ್ಲ’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ (ಸಿ4ಸಿ) ಸಂಘಟನೆಯ ಸಂಸ್ಥಾಪಕ ರಾಜ್‌ಕುಮಾರ್‌ ದುಗಾರ್‌ ತಿಳಿಸಿದರು.

‘ಈ ಪ್ರೊಜೆಕ್ಷನ್‌ ತೆರವುಗೊಳಿಸುವಂತೆ ಅನೇಕ ಬಾರಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರು ಈ ವರ್ಷದ ಮಾರ್ಚ್‌ನಲ್ಲಿ ಸಭೆ ಕರೆದಿದ್ದಾಗ ಈ ಸಮಸ್ಯೆ ಬಗ್ಗೆ ಗಮನಸೆಳೆಯಲಾಗಿತ್ತು. ಅವರು ಕೂಡ ಈ ಪ್ರೊಜೆಕ್ಷನ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಬಂಧಪಟ್ಟವರ ಜೊತೆ ಮಾತನಾಡಿ ಅದನ್ನು ತೆರವುಗೊಳಿಸುವಂತೆ ಸಂಚಾರ ವಿಭಾಗದ ಜಂಟಿ ಕಮಿಷನರ್‌ ಬಿ.ಆರ್‌.ರವಿಕಾಂತೇಗೌಡ ಅವರಿಗೆ ಸೂಚಿಸಿದ್ದರು. ಈ ಸಂಬಂಧ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಪೊಲೀಸರು ಬಿಎಂಆರ್‌ಸಿಎಲ್‌ಗೆ ಪತ್ರವನ್ನೂ ಬರೆದಿದ್ದಾರೆ. ಹೀಗಿದ್ದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಪ್ರೊಜೆಕ್ಷನ್‌ನಿಂದ ಸರಾಗ ಸಂಚಾರ ವ್ಯವಸ್ಥೆಯ ಆಶಯವೇ ಮರೆಯಾಗುತ್ತಿದೆ. ಸಾರ್ವಜನಿಕರಿಗೂ ಅನಗತ್ಯ ತೊಂದರೆಯಾಗುತ್ತಿದೆ. ಬಿಎಂಆರ್‌ಸಿಎಲ್‌ ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆ ಪರಿಹಾರ ಸೂಚಿಸ
ಬೇಕು’ ಎಂದು ಮನವಿ ಮಾಡಿದರು.

‘ತಜ್ಞರ ಸಲಹೆ ಪಡೆದು ಸರಿಪಡಿಸುತ್ತೇವೆ’
‘ನಮ್ಮ ಮೆಟ್ರೊ ಜೊತೆಗೆ ಹೈಸ್ಪೀಡ್‌ ರೈಲು ಕಾರಿಡಾರ್‌ ನಿರ್ಮಿಸಬೇಕೆಂಬ ಉದ್ದೇಶದಿಂದ ‍ಪಿಲ್ಲರ್‌ಗಳನ್ನು ಹಾಕಲಾಗಿತ್ತು. ಈ ಪೈಕಿ ಒಂದು ಪಿಲ್ಲರ್‌ ಈ ಪ್ರೊಜೆಕ್ಷನ್‌ಗಳ ಅಡಿಯಲ್ಲಿದೆ. ಅದರಿಂದ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅಲ್ಲಿ ಜಂಕ್ಷನ್‌ ನಿರ್ಮಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ತಿಳಿಸಿದರು.

‘ಸಾರ್ವಜನಿಕರಿಂದ ದೂರುಗಳು ಬರುತ್ತಿರುವುದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ತಜ್ಞರ ಅಭಿಪ್ರಾಯವನ್ನೂ ಕೇಳಿದ್ದೇವೆ. ರಸ್ತೆಗೆ ಸಮನಾಂತರವಾಗಿ ಪ್ರೊಜೆಕ್ಷನ್‌ ತಗ್ಗಿಸುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಅವರು ಸಲಹೆ ನೀಡಿದರೆ ಅದನ್ನು ಸರಿಪಡಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT