ಶನಿವಾರ, ಜೂನ್ 12, 2021
24 °C

ವೈದ್ಯಕೀಯ ಜ್ಞಾನ ಆತಂಕವನ್ನು ದೂರಮಾಡಿತು: ಡಾ ಸುಜಾತಾ ರಾಥೋಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ಮತ್ತು ಪತಿ ಇಬ್ಬರೂ ಕೋವಿಡ್ ಸೋಂಕಿತರಾಗಿದ್ದೆವು. ಮನೆಯಲ್ಲಿ ವಯಸ್ಸಾದ ಅತ್ತೆಯಿದ್ದರು. ಅವರಿಗೆ ರಕ್ಷಣೆ ಒದಗಿಸುವ ಜತೆಗೆ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿತ್ತು. ಹೀಗಾಗಿ, ವೃತ್ತಿಯಲ್ಲಿ ವೈದ್ಯನಾಗಿದ್ದ ನನ್ನಲ್ಲಿಯೂ ಸ್ವಲ್ಪ ಆತಂಕವಿತ್ತು. ಉತ್ತಮವಾದ ಮನೆ ಆರೈಕೆ ಹಾಗೂ ವೈದ್ಯಕೀಯ ಜ್ಞಾನವು ಕಾಯಿಲೆಯನ್ನು ಸುಲಭವಾಗಿ ಜಯಿಸಲು ಸಹಕಾರಿಯಾಯಿತು.’ 

‘ನಮ್ಮ ಆಸ್ಪತ್ರೆಯಲ್ಲಿ ಕೆಲವರು ಸೋಂಕಿತರಾಗಿದ್ದರು. ಅಗತ್ಯ ಸುರಕ್ಷಾ ಸಾಧನಗಳನ್ನು ಧರಿಸಿ ಕಾರ್ಯನಿರ್ವಹಿಸಲಾಗುತ್ತಿತ್ತು. ಅಷ್ಟಾಗಿಯೂ ಏ.28ರಂದು ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು. ಅದಾಗಲೇ ಪತಿ ಕೂಡ ಕೋವಿಡ್‌ ಪೀಡಿತರಾಗಿ ಮನೆ ಆರೈಕೆಯಲ್ಲಿದ್ದರು. ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅತ್ತೆಗೆ ಮಧುಮೇಹವಿದೆ. ಇದು ನನ್ನ ಗಾಬರಿಗೆ ಕಾರಣವಾಗಿತ್ತು. ಸೋಂಕಿನ ಲಕ್ಷಣಗಳು ಅಷ್ಟಾಗಿ ಇರದ ಕಾರಣ ಮನೆ ಆರೈಕೆಗೆ ಒಳಗಾದೆ. ಶ್ವಾಸಕೋಶ ತಜ್ಞ ವೈದ್ಯರು ಸ್ನೇಹಿತರಿದ್ದರು. ಏನಾದರೂ ಸಮಸ್ಯೆಯಾದರೆ ಅವರ ಜತೆಗೆ ಸಮಾಲೋಚನೆ ನಡೆಸಬಹುದಾಗಿತ್ತು. ಇದರಿಂದಾಗಿ ಕಾಯಿಲೆ ಜಯಿಸುವ ಆತ್ಮವಿಶ್ವಾಸವಿತ್ತು.’

‘ಝಿಂಕ್ ಸೇರಿದಂತೆ ಕೊರೊನಾ ಸೋಂಕಿತರಿಗೆ ನೀಡುವ ಮಾತ್ರೆಗಳನ್ನು ಸೇವಿಸಿದೆ. ಪ್ರಾಣಾಯಾಮ ಹಾಗೂ ವ್ಯಾಯಾಮಗಳನ್ನು ಮಾಡಿದೆ. ದೂರವಾಣಿ ಮೂಲಕವೇ ಆಸ್ಪತ್ರೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿ, ನಿರ್ದೇಶನಗಳನ್ನು ನೀಡಿದೆ. ಈಗ ನಾನು ಮತ್ತು ಪತಿ ಚೇತರಿಸಿಕೊಂಡಿದ್ದೇವೆ. ಸ್ಟೀರಾಯ್ಡ್ ಸೇವಿಸದೆಯೇ, ಆಮ್ಲಜನಕ ಪೂರಣ ವ್ಯವಸ್ಥೆಯ ನೆರವು ಪಡೆಯದೆಯೇ ಗುಣಮುಖರಾದೆವು ಎಂಬ ಸಮಾಧಾನವಿದೆ.’

‘ಈ ಕಾಯಿಲೆಯ ಬಗ್ಗೆ ಭಯ ಪಡುವ ಬದಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಭಯಪಟ್ಟಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ತಪ್ಪು ಸಂದೇಶಗಳಿಗೆ ಕಿವಿಗೊಡಬಾರದು. ಕೋವಿಡ್‌ ಬಗ್ಗೆ ಇರುವ ವೈದ್ಯಕೀಯ ದಾಖಲೆಗಳನ್ನು ಅನುಸರಿಸಿ ವೈದ್ಯರು ಚಿಕಿತ್ಸೆ ಒದಗಿಸುತ್ತಿದ್ದಾರೆ. ಲಸಿಕೆಯನ್ನು ಪಡೆದುಕೊಂಡಲ್ಲಿ ನಮಗೆ ರಕ್ಷಣೆ ಸಿಗಲಿದೆ. ಸೋಂಕಿತರಾದ ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಆರು ನಿಮಿಷ ನಡೆದಾಡಿದ ಬಳಿಕ ರಕ್ತದಲ್ಲಿನ ಆಮ್ಲಜನಕ ಪ್ರಮಾಣ 92 ಅಥವಾ ಅದಕ್ಕಿಂತ ಕಡಿಮೆಗೆ ಬಂದಲ್ಲಿ ವೈದ್ಯಕೀಯ ನಿಗಾದ ಅಗತ್ಯವಿದೆ.’

‘ಮನೆಯಲ್ಲೇ ಆರೈಕೆಗೆ ಒಳಗಾದಾಗ ಬಿಸಿ ನೀರಿನಲ್ಲಿ ಬಟ್ಟೆ ತೊಳೆದುಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವೈದ್ಯರ ಜತೆಗೆ ಸಂಪರ್ಕವನ್ನು ಇಟ್ಟುಕೊಂಡಿದ್ದು, ಸಲಹೆ ಪಡೆಯಬೇಕು. ಅವರು ಸೂಚಿಸುವ ಮಾತ್ರೆಗಳನ್ನು ಸೇವಿಸಬೇಕು. ಹಬೆ ತೆಗೆದುಕೊಳ್ಳುವಿಕೆ, ಬಿಸಿನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವನೆ, ಪ್ರಾಣಾಯಾಮದಂತಹ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.’

-ಡಾ. ಸುಜಾತಾ ರಾಥೋಡ್, ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು