ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಪತ್ನಿ ಮೇಲೆ ಮುನಿಸಿಕೊಂಡು ನಾಪತ್ತೆಯಾಗಿದ್ದ ಟೆಕಿ ನೋಯ್ಡಾದಲ್ಲಿ ಪತ್ತೆ

ನಿಗಾ ಇಡಲು ಸಿ.ಸಿ.ಟಿ.ವಿ. ಕ್ಯಾಮೆರಾ ಹಾಕಿಸಿದ್ದ ಪತ್ನಿ
Published 16 ಆಗಸ್ಟ್ 2024, 15:22 IST
Last Updated 16 ಆಗಸ್ಟ್ 2024, 15:22 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯ ಮೇಲೆ ಮುನಿಸಿಕೊಂಡು ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟಾಟಾನಗರದ ಮನೆಯಿಂದ ಇತ್ತೀಚಿಗೆ ನಾಪತ್ತೆಯಾಗಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ವಿಪಿನ್ ಗುಪ್ತ ಅವರನ್ನು ನೋಯ್ಡಾದಲ್ಲಿ ಪತ್ತೆಹಚ್ಚಿ ನಗರಕ್ಕೆ ಕರೆತರಲಾಗಿದೆ.

ತಿರುಪತಿಗೆ ತೆರಳಿದ್ದ ವಿಪಿನ್ ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ‘ನಾನೇ ಮನೆ ಬಿಟ್ಟು ಬಂದಿದ್ದೇನೆ, ವಾಪಸ್ ಮನೆಗೆ ಹೋಗಲಾರೆ. ಪತ್ನಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ನನ್ನನ್ನು ನಿಯಂತ್ರಿಸಲೆಂದೇ ಮನೆಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಕಿಸಿದ್ದಾಳೆ. ಆಕೆಯ ಕಾಟದಿಂದ ನೊಂದು ಮನೆ ಬಿಟ್ಟು ಬಂದಿದ್ದೇನೆ’ ಎಂದು ವಿಪಿನ್ ಅಳಲು ತೋಡಿಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯಿಂದ ಬೈಕ್‌ನಲ್ಲಿ ಹೊರಟ ವಿಪಿನ್, ವಾಹನವನ್ನು ಹೆಬ್ಬಾಳದಲ್ಲಿ ನಿಲ್ಲಿಸಿದ್ದರು. ಬಳಿಕ ಅಲ್ಲಿಂದ ಬಸ್‌ ಮೂಲಕ ತಿರುಪತಿಗೆ ತೆರಳಿದ್ದರು. ಅಲ್ಲಿಂದ ಬಸ್‌ಗಳ ಮೂಲಕ ನೊಯ್ಡಾ ತಲುಪಿದ್ದಾರೆ. ಮನೆ ಬಿಟ್ಟು ಹೋಗಿರುವ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ. 

ಲಖನೌದ ವಿಪಿನ್‌ ಗುಪ್ತ, ಪತ್ನಿ ಶ್ರೀಪರ್ಣಾ ಮತ್ತು ಇಬ್ಬರು ಪುತ್ರಿಯರ ಜೊತೆಗೆ ಟಾಟಾನಗರದ ಅಪಾರ್ಟ್‌ಮೆಂಟ್‌ನಲ್ಲಿ ನೆಲಸಿದ್ದರು. ಜೂನ್‌ನಲ್ಲಿ ಉದ್ಯೋಗ ತೊರೆದಿದ್ದರು. ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.

ಆಗಸ್ಟ್‌ 4ರಂದು ಮಧ್ಯಾಹ್ನ 12.42ಕ್ಕೆ ಮನೆಯಿಂದ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದರು. ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಅವರ ಪತ್ನಿ ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು. ಪತಿಯನ್ನು ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’​ನಲ್ಲೂ ವಿಡಿಯೊ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದರು.

ವಿಪಿನ್‌ ಅವರು ಈ ಹಿಂದೆಯೂ ಒಮ್ಮೆ ನಾಪತ್ತೆ ಆಗಿ, ಮೊಬೈಲ್‌ ಸಹ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದರು. ಗೋವಾದಲ್ಲಿ ಅವರನ್ನು ಪತ್ತೆಹಚ್ಚಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT