ಶನಿವಾರ, ಏಪ್ರಿಲ್ 1, 2023
23 °C
ಕರೆ ಕದ್ದಾಲಿಕೆ ಪ್ರಕರಣ

ಶಾಸಕ ಅರವಿಂದ ಬೆಲ್ಲದ ಹೇಳಿಕೆ ಸಂಗ್ರಹ: ಅರ್ಚಕರೊಬ್ಬರಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೂರವಾಣಿ ಕರೆ ಕದ್ದಾಲಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಶೇಷಾದ್ರಿಪುರ ಉಪವಿಭಾಗದ ಎಸಿಪಿ ನೇತೃತ್ವದ ತಂಡ, ಬಿಜೆ‍ಪಿ ಶಾಸಕ ಅರವಿಂದ ಬೆಲ್ಲದ ಅವರಿಂದ ಎರಡನೇ ಬಾರಿ ಹೇಳಿಕೆ ಪಡೆದಿದೆ. ಜೊತೆಗೆ, ಹೈದರಾಬಾದ್‌ನಲ್ಲಿರುವ ಅರ್ಚಕರೊಬ್ಬರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ.

‘ನನ್ನ ಕರೆಯನ್ನು ಯಾರೋ ಕದ್ದಾಲಿಕೆ ಮಾಡುತ್ತಿದ್ದಾರೆ. ಜೈಲಿನಿಂದ ಯುವರಾಜ್ ಎಂಬಾತ ಸಹ ಕರೆ ಮಾಡಿದ್ದ’ ಎಂದು ಆರೋಪಿಸಿ ಶಾಸಕ ಬೆಲ್ಲದ ಇತ್ತೀಚೆಗಷ್ಟೇ ಗೃಹ ಸಚಿವರ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು.

ದೂರಿನ ವಿಚಾರಣೆ ಜವಾಬ್ದಾರಿಯನ್ನು ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಯತಿರಾಜ್ ಅವರಿಗೆ ವಹಿಸಲಾಗಿತ್ತು. ವಿಚಾರಣೆ ನಡೆಯುತ್ತಿರುವಾಗಲೇ ಯತಿರಾಜ್ ಅವರನ್ನು ಏಕಾಏಕಿ ಬದಲಾವಣೆ ಮಾಡಿ, ತನಿಖೆ ಹೊಣೆಯನ್ನು ಶೇಷಾದ್ರಿಪುರ ಉಪವಿಭಾಗದ ಎಸಿಪಿ ಪೃಥ್ವಿ ಅವರಿಗೆ ವಹಿಸಲಾಗಿದೆ.

ವಿಚಾರಣೆ ಚುರುಕುಗೊಳಿಸಿರುವ ಎಸಿಪಿ ಪೃಥ್ವಿ, ‘ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿಯ ಅಗತ್ಯವಿದೆ. ಹೀಗಾಗಿ, ಹೇಳಿಕೆ ನೀಡಲು ಕಚೇರಿಗೆ ಬನ್ನಿ’ ಎಂದು ಬೆಲ್ಲದ ಅವರಿಗೆ ಪತ್ರ ಕಳುಹಿಸಿದ್ದರು. ಅದರನ್ವಯ ಶಾಸಕ ಬೆಲ್ಲದ, ಬುಧವಾರ ಎಸಿಪಿ ಎದುರು ಹಾಜರಾದರು.

‘ಜೈಲಿನಿಂದ ಯಾವೆಲ್ಲ ಸಂಖ್ಯೆಯಿಂದ ಕರೆಗಳು ಬಂದಿದ್ದವು. ಕರೆ ಕದ್ದಾಲಿಕೆ ಬಗ್ಗೆ ಯಾವೆಲ್ಲ ಪುರಾವೆಗಳು ಇವೆ ಎಂಬುದರ ಬಗ್ಗೆ ಬೆಲ್ಲದ ಅವರಿಂದ ಮಾಹಿತಿ ಪಡೆಯಲಾಗಿದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹೈದರಾಬಾದ್ ಅರ್ಚಕರಿಗೆ ಬುಲಾವು: ‘ಬೆಲ್ಲದ ಅವರು ನೀಡಿರುವ ಮೊಬೈಲ್ ಸಂಖ್ಯೆ, ಹೈದರಾಬಾದ್‌ನಲ್ಲಿರುವ ಅರ್ಚಕರೊಬ್ಬರ ಹೆಸರಿನಲ್ಲಿದೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಅರ್ಚಕರೇ ಕರೆ ಮಾಡಿದ್ದರಾ? ಅಥವಾ ಅವರ ಸಂಖ್ಯೆಯಿಂದ ಬೇರೆ ಯಾರಾದರೂ ಕರೆ ಮಾಡಿದ್ದರಾ? ಎಂಬುದು ವಿಚಾರಣೆ ಬಳಿಕವೇ ತಿಳಿಯಬೇಕಿದೆ’ ಎಂದೂ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು