ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಸಲಹಾ ಮಂಡಳಿ ಸಭೆಯಲ್ಲಿ ಶಾಸಕರ ಹಸ್ತಕ್ಷೇಪ !

ಮಂಡಳಿ ಸದಸ್ಯರಿಂದ ಆಕ್ಷೇಪ * ಹೆಸರುಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶವಾಗಿಸಲು ಒತ್ತಾಯ
Last Updated 21 ಫೆಬ್ರುವರಿ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ವನ್ಯಜೀವಿ ಸಲಹಾ ಮಂಡಳಿ ಸಭೆಯಲ್ಲಿ ಮಂಡಳಿಯ ಸದಸ್ಯರಲ್ಲದ ಶಾಸಕರೊಬ್ಬರು ಭಾಗವಹಿಸಲು ಅವಕಾಶ ಕಲ್ಪಿಸಿದ್ದಕ್ಕೆ ಮಂಡಳಿಯ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

'ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ವನ್ಯಜೀವಿ ಸಲಹಾ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದಲ್ಲದೇ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಈ ವಿಚಾರವಾಗಿ ವಿಸ್ತೃತ ಚರ್ಚೆ ನಡೆಸುವುದಕ್ಕೂ ಅವರು ಅಡ್ಡಗಾಲು ಹಾಕಿದ್ದಾರೆ. ಇದು ಸರಿಯಲ್ಲ' ಎಂದು ದೂರಿ ಮಂಡಳಿಯ ಸದಸ್ಯ ತ್ಯಾಗ್‌ ಉತ್ತಪ್ಪ ಅವರು ಮಂಡಳಿಯ ಸದಸ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

‘ಸಭೆಯಲ್ಲಿ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆ ವಿಚಾರ ಪ್ರಸ್ತಾಪವಾದಾಗ ಶಾಸಕ ವಿಶ್ವನಾಥ್‌ ಅವರು ಮಧ್ಯಪ್ರವೇಶ ಮಾಡಿದರು. ಬೆಂಗಳೂರಿನಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಈ ವಿಶಾಲ ಜಾಗವನ್ನು ಮೀಸಲು ಪ್ರದೇಶವೆಂದು ಘೋಷಿಸಿದರೆ, ರೈತರು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅದನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲೇಬಾರದು ಎಂದು ಬಲವಂತಪಡಿಸಿದರು’ ಎಂದು ತ್ಯಾಗ್‌ ಉತ್ತಪ್ಪ ಪತ್ರದಲ್ಲಿ ಆರೋಪಿಸಿದ್ದಾರೆ.

‘10 ಸಾವಿರಕ್ಕೂ ಅಧಿಕ ಪ್ರಾಣಿ, ಸಸ್ಯ ಹಾಗೂ ಕೀಟ ಪ್ರಭೇದಗಳ ಆಶ್ರಯ ತಾಣವಾಗಿರುವ ಹುಲ್ಲುಗಾವಲಿದು. ಸಸ್ಯಾಹಾರಿ ಪ್ರಾಣಿಗಳಷ್ಟೇ ಅಲ್ಲದೆ, ದೊಡ್ಡ ಮಾಂಸಾಹಾರಿ ಪ್ರಾಣಿಗಳೂ ಇದನ್ನು ಅವಲಂಬಿಸಿವೆ. ಹುಲ್ಲುಗಾವಲನ್ನು ನಾಶಪಡಿಸಿದರೆ ಈ ಜೀವಿಗಳಿಗೆ ಬೆಂಬಲವಾಗಿರುವ ವ್ಯವಸ್ಥೆಯನ್ನೇ ಕಿತ್ತುಕೊಂಡಂತೆ’ ಎಂದು ಅವರು ತಿಳಿಸಿದ್ದಾರೆ.

‘ಹೆಸರಘಟ್ಟ ಹುಲ್ಲುಗಾವಲು ದೊಡ್ಡ ಚುಕ್ಕಿ ಗಿಡುಗ (ಗ್ರೇಟರ್‌ ಸ್ಪಾಟೆಡ್ ಈಗಲ್‌), ಲೆಸ್ಸರ್‌ ಫ್ಲೋರಿಕಾನ್‌ನಂತಹ ಪಕ್ಷಿಗಳಿಗೆ ನೆಲೆ ಒದಗಿಸಿದೆ. ಅಳಿವಿನಂಚಿನಲ್ಲಿರುವ ಲೆಸ್ಸರ್‌ ಫ್ಲೋರಿಕಾನ್‌ ಪಕ್ಷಿಗಳು ಬೆರಳೆಣಿಕೆಯಷ್ಟೇ ಸಂಖ್ಯೆಯಲ್ಲಿವೆ. ಅಲ್ಲದೇ, ಕಾಡುಪಾಪ (ಸ್ಲೆಂಡರ್‌ ಲೋರಿಸ್‌), ನೀರು ನಾಯಿ (ಸ್ಮೂತ್‌ ಕೋಟೆಡ್‌ ಓಟರ್‌) ಹಾಗೂ ಚಿರತೆಗಳೂ ಇಲ್ಲಿ ಕಂಡುಬಂದಿವೆ’ ಎಂದು ನಿಸರ್ಗವಾದಿಗಳು ಮತ್ತು ವನ್ಯಜೀವಿ ಕಾರ್ಯಕರ್ತರು ಗುರುತಿಸಿದ್ದಾರೆ. ಬೆಂಗಳೂರಿನಲ್ಲಿ ಉಳಿದಿರುವ ಈ ಏಕೈಕ ಹುಲ್ಲುಗಾವಲಿನ ಪುನರುಜ್ಜೀವನವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕಿದೆ’ ಎಂದು ಅವರು ಒತ್ತಾಯಿಸಿದ್ದಾರೆ.

‘ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಅಗತ್ಯವಿದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸುವುದಕ್ಕೆ ಅವಕಾಶ ನೀಡದಿರುವುದು ಸರಿಯಲ್ಲ. ಈ ಗಂಭೀರ ವಿಷಯದ ಚರ್ಚೆಯನ್ನು ವೃತ್ತಿಪರವಲ್ಲದ ರೀತಿ ತರಾತುರಿಯಲ್ಲಿ ಮುಗಿಸಿದ್ದು ಸರಿಯಲ್ಲ. ಚರ್ಚೆ ನಡೆದ ರೀತಿಗೆ ನನ್ನ ಅಸಮ್ಮತಿ ಇದೆ ಎಂದು ಪರಿಗಣಿಸಬಹುದು. ಈ ಹುಲ್ಲುಗಾವಲಿನ ಸಂರಕ್ಷಣೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಮತ್ತೆ ಅವಕಾಶ ಕಲ್ಪಿಸಬೇಕು. ಮುಂಬರುವ ಮಂಡಳಿ ಸಭೆಯಲ್ಲಿ ಈ ವಿಚಾರವನ್ನು ಮತ್ತೆ ಸೇರ್ಪಡೆಗೊಳಿಸಬೇಕು’ ಎಂದೂ ಅವರು ಸದಸ್ಯ ಕಾರ್ಯದರ್ಶಿ ಅವರನ್ನು ಆಗ್ರಹಿಸಿದ್ದಾರೆ.

ಈ ಹುಲ್ಲುಗಾವಲಿನ 150 ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಆದರೆ, ವನ್ಯಜೀವಿ ಕಾರ್ಯಕರ್ತರಿಂದ ಹಾಗೂ ಪರಿಸರ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕಿದೆ. ನಗರ ಸಮೀಪ ಉಳಿದಿರುವ ಈ ಏಕೈಕ ಹುಲ್ಲುಗಾವಲನ್ನು ಮೀಸಲುಪ್ರದೇಶ ಎಂದು ಘೋಷಿಸಬೇಕು ಎಂಬುದು ಪರಿಸರ ಕಾರ್ಯಕರ್ತರ ಒತ್ತಾಯ.

‘ಸದಸ್ಯರಲ್ಲದವರು ಸಭೆಯಲ್ಲಿ ಭಾಗವಹಿಸುವುದು ಸರಿಯೇ’

‘ಹುಬ್ಬಳ್ಳಿ– ಅಂಕೋಲಾರೈಲು ಮಾರ್ಗಕ್ಕೆ ಅನುಮತಿ ನೀಡುವ ಕುರಿತು ಚರ್ಚಿಸಲು ವನ್ಯಜೀವಿ ಸಲಹಾ ಮಂಡಳಿ ಸಭೆ ಸೇರಿದ್ದಾದ ಅದರಲ್ಲಿ ಇಬ್ಬರು ಸಚಿವರು ಭಾಗವಹಿಸಿದ್ದರು. ಮಂಡಳಿಯ ಸದಸ್ಯರಲ್ಲದವರು ಸಭೆಯಲ್ಲಿ ಭಾಗವಹಿಸಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್‌, ‘ಮಂಡಳಿಯ ನಿರ್ಣಯವನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿತ್ತು. ಇದಾದ ಬಳಿಕವೂ ಮಂಡಳಿಯ ಸಭೆಗೆ ಸದಸ್ಯರಲ್ಲದವರು ಭಾಗವಹಿಸಲು ಅವಕಾಶ ನೀಡಿದ್ದು ಎಷ್ಟು ಸರಿ’ ಎಂದು ವನ್ಯಜೀವಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಮುಖ್ಯಾಂಶಗಳು

ವನ್ಯಜೀವಿ ಸಲಹಾ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಶಾಸಕ

ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸದಂತೆ ಒತ್ತಡ

ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಒತ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT