ಗುರುವಾರ , ನವೆಂಬರ್ 21, 2019
26 °C

ಶಾಸಕರ ಲೆಟರ್‌ಹೆಡ್‌ ಫೋರ್ಜರಿ: ಒಬ್ಬನ ಬಂಧನ

Published:
Updated:

ಬೆಂಗಳೂರು: ಮಾಯಕೊಂಡ ಬಿಜೆಪಿ ಶಾಸಕ ಪ್ರೊ.ಎನ್‌. ಲಿಂಗಣ್ಣ ಅವರ ಲೆಟರ್‌ಹೆಡ್ ಫೋರ್ಜರಿ ಮಾಡಿ ಸರ್ಕಾರದಿಂದ ಅನುದಾನ ಪಡೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪ್ಪೇಸ್ವಾಮಿ (26) ಎಂಬಾತನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಿಪ್ಪೇಸ್ವಾಮಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು. ಆರೋಪಿಯ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಅನುದಾನ ಕೋರಿದ ಇನ್ನೂ ಹಲವು ಶಿಫಾರಸು ಪತ್ರಗಳಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಸಚಿವರ ಬಳಿ ಶಿಫಾರಸು ಪತ್ರಕ್ಕೆ ಸಹಿ ಹಾಕಿಸಿ, ಅನುದಾನ ಮುಂಜೂರಾದರೆ ₹ 10 ಸಾವಿರ ಕೊಡುವುದಾಗಿ ಪರಿಚಯಸ್ಥನಾಗಿರುವ ಶಿವರಾಜು ಮತ್ತು ಆತನ ಸ್ನೇಹಿತ ಆಮಿಷ ಒಡ್ಡಿದ್ದರು. ಹಣದ ಅಗತ್ಯದಿಂದ ಈ ಕೆಲಸಕ್ಕೆ ಒಪ್ಪಿಕೊಂಡೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಆತನ ಹೇಳಿಕೆ ನಿಜವೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದೂ ಅವರು ಹೇಳಿದರು.

ಲಿಂಗಣ್ಣ ಅವರ ಹೆಸರಿನ ಲೆಟರ್‌ಹೆಡ್ ಫೋರ್ಜರಿ ಮಾಡಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಐಎಸ್‌ಬಿ ಯೋಜನೆ ಅಡಿಯಲ್ಲಿ 12 ಮಂದಿಗೆ ತಲಾ  ₹ 10 ಲಕ್ಷ ಸಾಲ ಸೌಲಭ್ಯ ಮಂಜೂರು ಮಾಡುವಂತೆ ಉಪಮುಖ್ಯಮಂತ್ರಿಯೂ ಆಗಿರುವ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರಿಗೆ ಎರಡು ಪ್ರತ್ಯೇಕ ಶಿಫಾರಸು ಪತ್ರಗಳನ್ನು ಕಳುಹಿಸಿಕೊಟ್ಟಿದ್ದ ಸಂದರ್ಭದಲ್ಲಿ ಅವು ನಕಲಿ ಶಿಫಾರಸು ಪತ್ರಗಳು ಎಂಬುದು ಬಯಲಾಗಿತ್ತು. ಈ ಕುರಿತು ಶಾಸಕರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು.

ಪ್ರತಿಕ್ರಿಯಿಸಿ (+)