ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸದಸ್ಯ– ಶಾಸಕ ನಡುವೆ ಜಟಾಪಟಿ

Last Updated 28 ಜುಲೈ 2020, 16:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಕೋವಿಡ್‌ ನಿಯಂತ್ರಣ ಕುರಿತ ಚರ್ಚೆ ವೇಳೆ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರಮೇಶ್ ಗೌಡ ಹಾಗೂ ಆಡಳಿತ ಪಕ್ಷದ ಸದಸ್ಯ ಪದ್ಮನಾಭ ರೆಡ್ಡಿ ಅವರ ನಡುವೆ ಆರಂಭವಾದ ಚಕಮಕಿ ವಿಕೋಪಕ್ಕೆ ಹೋಯಿತು. ಒಂದು ಹಂತದಲ್ಲಿ ಪದ್ಮನಾಭ ರೆಡ್ಡಿಯವರು ರಮೇಶ್‌ ಗೌಡ ಅವರತ್ತತೋಳೇರಿಸಿಕೊಂಡು ಸಾಗಿದರು.

ಅವರ ಈ ವರ್ತನೆಯನ್ನು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಮೇಯರ್ ಪೀಠದ ಎದುರು ಧರಣಿ ನಡೆಸಿದರು.

‘ನಗರದಲ್ಲಿ ಆಂಬುಲೆನ್ಸ್‌ಗಳ ಕೊರತೆ ತೀವ್ರವಾಗಿದೆ. ₹ 11 ಸಾವಿರ ಕೋಟಿ ಬಜೆಟ್ ಮಂಡಿಸಿದ ಪಾಲಿಕೆಗೆ ವಾರ್ಡ್‌ಗೆ ಎರಡು ಆಂಬುಲೆನ್ಸ್‌ ಖರೀದಿಸುವ ಶಕ್ತಿ ಇಲ್ಲವೇ’ ಎಂದು ರಮೇಶ್‌ ಗೌಡ ಪ್ರಶ್ನಿಸಿದರು.

‘ನಗರದಲ್ಲಿ 700 ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಮೇಯರ್ ಎಂ.ಗೌತಮ್‌ ಕುಮಾರ್‌ ತಿಳಿಸಿದರು.

ಇದನ್ನೊಪ್ಪದ ರಮೇಶ್ ಗೌಡ, ‘ಯಾವುದಾದರೂ ಆಂಬುಲೆನ್ಸ್‌ಗೆ ಕರೆ ಮಾಡಿ. ಒಂದು ಗಂಟೆ ಒಳಗೆ ಆಂಬುಲೆನ್ಸ್‌ ಬಂದರೆ ನಿಮ್ಮಮಾತನ್ನು ಒಪ್ಪುತ್ತೇನೆ’ ಎಂದು ಸವಾಲು ಹಾಕಿದರು.

‘ಸುಮ್ಮನೆ ಸುಳ್ಳು ಹೇಳಿ ದಾರಿ ತಪ್ಪಿಸಬೇಡಿ’ ಎಂದು ಪದ್ಮನಾಭ ರೆಡ್ಡಿ ರಮೇಶ್‌ ಅವರತ್ತ ಧಾವಿಸಿ ಬಂದರು. ಉಮೇಶ್‌ ಶೆಟ್ಟಿ ಅವರನ್ನು ಆಸನದತ್ತ ಕರೆದೊಯ್ದರು.

‘ಸುಳ್ಳನ್ನು ಹತ್ತು ಬಾರಿ ಹೇಳಿದರೂ ಸತ್ಯ ಆಗದು. ರೌಡಿಸಂ ನಮ್ಮ ಬಳಿ ನಡೆಯಲ್ಲ. ಧಮಕಿಗೆಲ್ಲ ಹೆದರಲ್ಲ’ ಎಂದು ಎದುರೇಟು ನೀಡಿದ ರಮೇಶ್‌ ಗೌಡ ಧರಣಿ ಕುಳಿತರು.

ಪದ್ಮನಾಭ ರೆಡ್ಡಿ ಅವರ ವರ್ತನೆ ಖಂಡಿಸಿದ ವಿರೋಧ ಪಕ್ಷದ ಸದಸ್ಯರು ಮೇಯರ್‌ ಪೀಠದ ಎದುರು ಧಾವಿಸಿ ಘೋಷಣೆ ಕೂಗಲಾರಂಭಿಸಿದರು. ‘ರೆಡ್ಡಿ ಅವರು ಕ್ಷಮೆ ಕೇಳಬೇಕು’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹಾಗೂ ಜೆಡಿಎಸ್‌ ನಾಯಕಿ ನೇತ್ರ ನಾರಾಯಣ್‌ ಒತ್ತಾಯಿಸಿದರು.

‘ಶಾಸಕರ ಮೇಲೆ ಹಲ್ಲೆ ಮಾಡಲು ಬರುತ್ತೀರಿ? ನೀವು ಹೇಳಿದ್ದನ್ನೆಲ್ಲಾ ವಿರೋಧ ಪಕ್ಷದವರು ಒಪ್ಪಿಕೊಳ್ಳಬೇಕಾ. ತಪ್ಪು ಎತ್ತಿ ತೋರಿಸುವುದು ಬೇಡವೇ’ ಎಂದು ವಾಜಿದ್‌ ಪ್ರಶ್ನಿಸಿದರು.

ಕೋವಿಡ್‌ ವೇಳೆ ಅಂತರ ಕಾಪಾಡಬೇಕಿದೆ. ಪ್ರಶ್ನೆ ಮಾಡಿದ್ದಕ್ಕೆ ಮೈಮೇಲೆ ಬಿದ್ದರೆ ಹೇಗೆ ಎಂದು ವಿರೋಧ ಪಕ್ಷದ ಸದಸ್ಯ ಎಂ.ಶಿವರಾಜು ಆಕ್ಷೇಪ ವ್ಯಕ್ತಪಡಿಸಿದರು.

‘ಪದ್ಮನಾಭ ರೆಡ್ಡಿ ಅವರು ಒಳ್ಳೆಯ ಸಲಹೆ ನೀಡುತ್ತಾರೆ ನಿಜ. ಆದರೆ ಅವರು ಇಂದಿನ ನಡವಳಿಕೆ ಸಭೆಗೆ ಶೋಭೆ ತರುವಂತಹದ್ದಲ್ಲ’ ಎಂದು ಪದ್ಮಾವತಿ ಬೇಸರ ವ್ಯಕ್ತಪಡಿಸಿದರು.

ಬಳಿಕ ಮೇಯರ್‌ ವಿರೋಧ ಪಕ್ಷದವರನ್ನು ಸಮಾಧಾನ ಪಡಿಸಿದರು.

ವಾಸನೆ ಗ್ರಹಿಕೆ ಪರೀಕ್ಷೆ: ಮೇಯರ್‌ ಸಲಹೆ

‘ವಾಸನೆ ಹಾಗೂ ರುಚಿ ಗ್ರಹಿಕೆ ಸಾಮರ್ಥ್ಯವನ್ನು ಕಳೆದುಕೊಳ್ಳುವುದು ಕೂಡಾ ಕೋವಿಡ್‌ನ ಲಕ್ಷಣಗಳು. ಈಗಾಗಲೇ ನವದೆಹಲಿ ಸೇರಿದಂತೆ ಕೆಲವು ಮಹಾನಗರಗಳಲ್ಲಿ ಮಾಲ್‌ಗಳಿಗೆ ಬರುವವರು ವಾಸನೆ ಮತ್ತು ರುಚಿಯನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂದು ಪರೀಕ್ಷೆ ಮಾಡಿ ನಂತರವೇ ಅವರನ್ನು ಒಳಗೆ ಬಿಟ್ಟುಕೊಳ್ಳಲಾಗುತ್ತಿದೆ. ಲಿಂಬೆ ಹಾಗೂ ಕಿತ್ತಳೆಯನ್ನು ಮೂಸಿ ನೋಡುವಂತೆ ಹೇಳಲಾಗುತ್ತಿದೆ. ನಮ್ಮಲ್ಲೂ ಇಂತಹ ನಿಯಮ ಜಾರಿಗೊಳಿಸುವ ಬಗ್ಗೆ ಪರಿಶೀಲಿಸಬಹುದು’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಸಲಹೆ ನೀಡಿದರು.

ಸಹಜ ಸಾವು: ಮೃತದೇಹ ಹಸ್ತಾಂತರಕ್ಕೆ ತಕರಾರು

ಕೋವಿಡ್‌ ಇಲ್ಲದವರು ಮೃತಪಟ್ಟರೂ ಅವರ ಅಂತ್ಯಸಂಸ್ಕಾರಕ್ಕೆ ಸಮಸ್ಯೆ ಆಗುತ್ತಿದೆ. ಕೋವಿಡ್‌ ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೆ ಅಂತ್ಯ ಸಂಸ್ಕರ ನಡೆಸುವಂತಿಲ್ಲ. ಈ ನಿಯಮ ಸರಳೀಕರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

‘ರೋಗಿ ಮನೆಯಲ್ಲೇ ತೀರಿಕೊಂಡಾಗ ಅವರಿಗೆ ಕೋವಿಡ್‌ ಇಲ್ಲದಿದ್ದರೂ ವೈದ್ಯರುನಮೂನೆ 4ಕ್ಕೆ ಸಹಿ ಮಾಡುತ್ತಿಲ್ಲ’ ಎಂದು ಆರ್‌.ಸಂಪತ್‌ರಾಜ್‌ ದೂರಿದರು.

‘ಕೋವಿಡೇತರ ಮರಣಗಳಲ್ಲಿ ಶವ ಹಸ್ತಾಂತರಕ್ಕೆ ಬಿಬಿಎಂಪಿ ಅಧಿಕಾರಿಯೇ ಬರಬೇಕಾಗಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರ ಸಹಿ ಸಾಕಾಗುತ್ತದೆ. ಮನೆಯಲ್ಲೇ ಯಾರಾದರೂ ಮೃತಪಟ್ಟರೆ ಆಯಾ ಕ್ಷೇತ್ರದ ಆರೋಗ್ಯ ವೈದ್ಯಾಧಿಕಾರಿ ದೃಢೀಕರಿಸಬೇಕಾಗುತ್ತದೆ. ಮೃತ ವ್ಯಕ್ತಿಗೆ ಕೋವಿಡ್‌ ಇತ್ತು ಎಂಬ ಸಂದೇಹವಿದ್ದರೆ ಅರ್ಧ ಗಂಟೆಯಲ್ಲೇ ಫಲಿತಾಂಶ ಬರುವ ಆ್ಯಂಟಿಜೆನ್‌ ಪರೀಕ್ಷೆ ನಡೆಸಬೇಕಾಗುತ್ತದೆ. ಅದರಲ್ಲಿ ಸೋಂಕು ಪತ್ತೆಯಾಗದಿದ್ದರೆ ಎಂದಿನಂತೆ ಶವ ಸಂಸ್ಕಾರ ನಡೆಸಬಹುದು. ಸೋಂಕು ದೃಢಪಟ್ಟರೆ ಪಾಲಿಕೆ ವತಿಯಿಂದಲೇ ಶವಸಂಸ್ಕಾರಕ್ಕೆ ಕ್ರಮಕೈಗೊಳ್ಳಲಾಗುತ್ತದೆ’ ಎಂದು ವಿಶೇಷ ಆಯುಕ್ತ ಡಿ.ರಂದೀಪ್‌ ತಿಳಿಸಿದರು.

‘ಮೃತ ಶಿಕ್ಷಕಿಯರ ಕುಟುಂಬಕ್ಕೆ ಪರಿಹಾರ ಕೊಡಿ‘

‘ಮನೆ ಮನೆ ಸಮೀಕ್ಷೆಯಲ್ಲಿ ಭಾಗವಹಿಸಿದ ಇಬ್ಬರು ಶಿಕ್ಷಕಿಯರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅವರಿಗೆ ಪಾಲಿಕೆ ವತಿಯಿಂದ ತಲಾ ₹ 5 ಲಕ್ಷ ಪರಿಹಾರ ನೀಡಬೇಕು’ ಎಂದು ಸಂಪತ್‌ರಾಜ್‌ ಒತ್ತಾಯಿಸಿದರು.

ಕೋವಿಡ್‌ ಸೋಂಕು ತಗುಲಿದ ಪೌರಕಾರ್ಮಿಕರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸುವಂತೆ ಕೆಲವು ಸದಸ್ಯರು ಸಲಹೆ ನೀಡಿದರು.

‘ಲೆಕ್ಕಕ್ಕೆ ಮಾತ್ರ 140 ಅಧಿಕಾರಿಗಳು’

‘ನನ್ನ ವಾರ್ಡ್‌ಗೆ ಬೂತ್‌ ಮಟ್ಟದ ಮತ್ತು ವಾರ್ಡ್‌ ಮಟ್ಟದ ಸಮಿತಿಗಳಿಗೆ ಒಟ್ಟು 140 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ 10 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕನಿಷ್ಠ ಪಕ್ಷ 60– 70ಮಂದಿಯಾದರೂ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ’ ಎಂದು ಪಾಲಿಕೆ ಸದಸ್ಯ ಸೋಮಶೇಖರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT