ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ಗಾಗಿ ಕೊಂದಿದ್ದ ಮ್ಯಾಟ್ರು, ಬ್ರಾವೋ!

Last Updated 22 ಮೇ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಪಿ ಕಚೇರಿಯಿಂದ ಕೂಗಳತೆ ದೂರದಲ್ಲೇ ಶಿವನಾಯ್ಕ (40) ಎಂಬುವರನ್ನು ಕೊಲೆ ಮಾಡಿ, ಮೊಬೈಲ್ ದೋಚಿ ಪರಾರಿಯಾಗಿದ್ದ ಮೂವರು ಸುಲಿಗೆಕೋರರು ಹಲಸೂರುಗೇಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಲಿಂಗರಾಜಪುರದ ಸೈಯ್ಯದ್‌ ಸೈಫ್ ಅಲಿಯಾಸ್ ಮ್ಯಾಟ್ರು (19), ವೆಂಕಟೇಶಪುರದ ಸೈಯದ್ ನವಾಜ್ ಅಲಿಯಾಸ್ ಬ್ರಾವೋ (19) ಹಾಗೂ 17 ವರ್ಷದ ಹುಡುಗನೊಬ್ಬನನ್ನು ಬಂಧಿಸಿದ್ದೇವೆ. ಯಾವುದೇ ಕೆಲಸಕ್ಕೆ ಹೋಗದೆ, ಮದ್ಯದ ದಾಸರಾಗಿದ್ದ ಇವರನ್ನು ಪೋಷಕರು ಮನೆಯಿಂದ ಹೊರ ಹಾಕಿದ್ದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆರೋಪಿಗಳು ರಾತ್ರಿ ವೇಳೆ ಸುಲಿಗೆಗೆ ಇಳಿದಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಹೊಸಕೆರೆಹಳ್ಳಿ ಸಮೀಪದ ವೀರಭದ್ರೇಶ್ವರನಗರ ನಿವಾಸಿ ಶಿವನಾಯ್ಕ ಎಂಬುವರು, ‘ಏರ್‌ಟೆಲ್’ ಕಂಪನಿಯ ಆಪ್ಟಿಕಲ್ ಕೇಬಲ್ ಅಳವಡಿಕೆ ಕೆಲಸಕ್ಕೆಂದು ಮೇ 11ರ ರಾತ್ರಿ 11.30ರ ಸುಮಾರಿಗೆ ನೃಪತುಂಗ ರಸ್ತೆಗೆ ಬಂದಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದಿದ್ದ ಆರೋಪಿಗಳು, ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ಅವರನ್ನು ಅಡ್ಡಗಟ್ಟಿದ್ದರು. ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದಾಗ ಪ್ರತಿರೋಧ ತೋರಿದ್ದಕ್ಕೆ ಎದೆಗೆ ಚಾಕುವಿನಿಂದ ಇರಿದು ಹೋಗಿದ್ದರು.

ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಕ್ಷಣ ರಕ್ಷಣೆಗೆ ಬಂದರಾದರೂ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಶಿವನಾಯ್ಕ ಕೊನೆಯುಸಿರೆಳೆದಿದ್ದರು. ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಸೈಯದ್ ನವಾಜ್ ವಿರುದ್ಧ ಆರ್‌.ಟಿ.ನಗರ ಹಾಗೂ ಮಹಾಲಕ್ಷ್ಮಿಲೇಔಟ್ ಠಾಣೆಗಳಲ್ಲೂ ಸುಲಿಗೆ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT