ಗುರುವಾರ , ಆಗಸ್ಟ್ 22, 2019
23 °C

ಉದ್ಯೋಗ ಅರಸಿ ಬಂದವರಿಂದ ಮೊಬೈಲ್‌ ಶೋ ರೂಂಗೆ ಕನ್ನ!

Published:
Updated:
Prajavani

ಬೆಂಗಳೂರು: ಉದ್ಯೋಗ ಅರಸಿ ನಗರಕ್ಕೆ ಬಂದ ಒಡಿಶಾದ ನಾಲ್ವರು, ಮೊಬೈಲ್‌ ಕಳವು ಮಾಡಲು ಶೋ ರೂಂಗೆ ಕನ್ನ ಕೊರೆದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಬಿಚಿತ್ರ ಚೌಧರಿ, ದಾಮೋದರ್ ರಾವ್, ಅನಿಲ್ ರಾವ್ ಮತ್ತು ಆಕಾಶ್ ಮಲ್ಲಿಕ್ ಬಂಧಿತರು. ಶೋ ರೂನಿಂದ ಕದ್ದ 44 ಮೊಬೈಲ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಗೋವಿಂದಶೆಟ್ಟಿ ಪಾಳ್ಯದಲ್ಲಿರುವ ಪ್ರಣೀತಾ ಮೊಬೈಲ್ ಶೋ ರೂಂಗೆ ಜುಲೈ14ರಂದು ರಾತ್ರಿ 1 ಗಂಟೆಗೆ ನುಗ್ಗಿದ ಅಪರಿಚಿತರು, ವಿವಿಧ ಕಂಪನಿಗಳ ₹ 6 ಲಕ್ಷ ಮೌಲದ 52 ಮೊಬೈಲ್‌ಗಳನ್ನು ಕಳವು ಮಾಡಿದ್ದರು. ಶೋ ರೂಂನ ಹಿಂಬದಿಯ ಗೋಡೆಗೆ ಕನ್ನ ಕೊರೆದು ಕಳ್ಳರು ಒಳಗೆ ಪ್ರವೇಶಿಸಿದ್ದರು. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತಂತ್ರತಜ್ಞಾನದ ನೆರವಿನಿಂದ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

‘3–4 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು ಶಾಂತಿಪುರ ಮತ್ತು ಗೊಟ್ಟಿಗೆರೆಯಲ್ಲಿ ನೆಲೆಸಿದ್ದರು. ‌ಪ್ಲಂಬಿಂಗ್‌ ಮತ್ತು ಇಂಟೀರಿಯರ್‌ ಡೆಕೊರೇಷನ್‌ ಕೆಲಸ ಮಾಡುತ್ತಿದ್ದರು. ವಿಲಾಸಿ ಜೀವನ ಮಾಡುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದರು’ ಎಂದು ಪೊಲೀಸರು ತಿಳಿಸಿದರು.

Post Comments (+)