ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿಗೆ ‘ಮಾಡ್ಯುಲರ್‌ ಐಸಿಯು’

ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟನೆ
Last Updated 8 ಫೆಬ್ರುವರಿ 2021, 20:38 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಎದುರಾಗುವ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಮಾಡ್ಯುಲರ್‌ ಐಸಿಯು ಸ್ಥಾಪಿಸಲಾಗಿದೆ.

ಸರಕು ಸಾಗಣೆಯ ಕಂಟೇನರ್‌ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಕಂಟೇನರ್‌, 5 ಸುಸಜ್ಜಿತ ಐಸಿಯು ಹಾಸಿಗೆಗಳನ್ನು ಒಳಗೊಂಡಿವೆ. ಇವುಗಳ ನಿರ್ವಹಣೆಗೆ ತಜ್ಞ ವೈದ್ಯರು, ಅರೆವೈದ್ಯ ಸಿಬ್ಬಂದಿ, ಶುಶ್ರೂಷಕಿಯರು ಸೇರಿ ಒಟ್ಟು 150 ಮಂದಿಯನ್ನು ನೇಮಿಸಲಾಗಿದೆ.

ಪ್ರತಿ ಮಾಡ್ಯುಲರ್‌ ಐಸಿಯುನಲ್ಲೂ ಹೈ ಸ್ಪೀಡ್‌ ವೈಫೈ, ಪ್ರತ್ಯೇಕ ಲ್ಯಾನ್‌ ಕೇಬಲ್‌, ಎಚ್‌ಡಿ ಕ್ಯಾಮೆರಾಗಳು, ಸೆಂಟ್ರಲ್‌ ಮಾನಿಟರಿಂಗ್‌ ವ್ಯವಸ್ಥೆ ಇರುತ್ತದೆ. ವೈದ್ಯರು ತಾವಿದ್ದಲ್ಲಿಂದಲೇ ರೋಗಿಗೆ ಚಿಕಿತ್ಸೆ ನೀಡಲು ಸೆಂಟ್ರಲ್‌ ಮಾನಿಟರಿಂಗ್‌ ವ್ಯವಸ್ಥೆ ಸಹಕಾರಿ.

ಪ್ರತಿ ಕಂಟೇನರ್‌ನಲ್ಲೂ ದ್ರವರೂಪದ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದ್ದು, ಇದರ ಪ್ರಮಾಣವನ್ನು 2,000 ಲೀಟರ್‌ನಿಂದ 8,000 ಲೀಟರ್‌ಗೆ ಹೆಚ್ಚಿಸಲಾಗಿದೆ.

ಪ್ರಾಯೋಗಿಕ ಬಳಕೆ: ಕೆ.ಸಿ. ಜನರಲ್ ಆಸ್ಪತ್ರೆಗೆ ಪ್ರಾಯೋಗಿಕ ಬಳಕೆಗಾಗಿ 10 ಕಂಟೇನರುಗಳನ್ನು ಒದಗಿಸಲಾಗಿದೆ. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು. ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ಕೊಠಡಿಗಳನ್ನು ನಿರ್ಮಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ‘ರಿನ್ಯಾಕ್’ ಕಂಪನಿಯು ಮಾಡ್ಯುಲರ್‌ ಐಸಿಯು ಅಭಿವೃದ್ಧಿಪಡಿಸಿದೆ.

ಮಾಡ್ಯುಲರ್‌ ಐಸಿಯು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ‘ಕೋವಿಡ್‌–19 ಲಸಿಕಾ ಅಭಿಯಾನದಲ್ಲಿ ರಾಜ್ಯ ಸರ್ಕಾರವು ಮುಂಚೂಣಿಯಲ್ಲಿದೆ. ಸಕಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ’ ಎಂದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ‘₹5 ಕೋಟಿ ವೆಚ್ಚದಲ್ಲಿ ಮೂರು ತಿಂಗಳಲ್ಲೇ ಮಾಡ್ಯೂಲರ್‌ ಐಸಿಯು ನಿರ್ಮಿಸಲಾಗಿದೆ. 14 ಖಾಸಗಿ ಸಂಸ್ಥೆಗಳು ತಲಾ ₹25 ಲಕ್ಷ ದೇಣಿಗೆ ನೀಡಿ
ಈ ಕಾರ್ಯಕ್ಕೆ ಕೈ ಜೋಡಿಸಿವೆ’ ಎಂದು ಹೇಳಿದರು.

ಶಾಸಕ ದಿನೇಶ್‌ ಗುಂಡೂರಾವ್‌, ‘ಆಸ್ಪ‍ತ್ರೆಯ ಆವರಣದಲ್ಲಿ ಕ್ಯಾಥ್‌ ಲ್ಯಾಬ್‌, ಟ್ರಾಮಾ ಕೇರ್‌ ಸೆಂಟರ್‌ ಹಾಗೂ 150 ಹಾಸಿಗೆಗಳ ತಾಯಿ–ಮಗು ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಿರ್ಧರಿಸಿದೆ. ಇದು ಸ್ವಾಗತಾರ್ಹ’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT