ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಬ್ಯಾಂಕ್‌ಗಳ ಹಣವೂ ದರೋಡೆ: ಸಚಿವ ಎಚ್.ಕೆ. ಪಾಟೀಲ ಕಳವಳ

ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮದಲ್ಲಿ
Published 25 ಆಗಸ್ಟ್ 2024, 22:30 IST
Last Updated 25 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರದ ಸ್ವರೂಪ ಇತ್ತೀಚೆಗೆ ಬದಲಾಗಿದ್ದು, ಸರ್ಕಾರಿ ಬ್ಯಾಂಕ್‌ಗಳ ಖಾತೆಗಳಲ್ಲಿರುವ ಹಣವೂ ನೇರವಾಗಿ ವಂಚಕರಿಗೆ ವರ್ಗಾವಣೆಯಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ 75ನೇ ವರ್ಷದ ಸಂಸ್ಮರಣೆಗಾಗಿ ಭಾನುವಾರ ಹಮ್ಮಿಕೊಂಡಿದ್ದ ‘21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇತ್ತೀಚಿಗೆ ಗಾಂಧೀಜಿಯನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಗಾಂಧೀಜಿ ಫೋಟೋ ಹೆಚ್ಚೆಚ್ಚು ಕಾಣುತ್ತಿರುವ ಕಡೆಯೇ ದರೋಡೆಕೋರರಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವು ದರೋಡೆ ಸ್ವರೂಪ ಪಡೆದಿದೆ. ಹಿಂದೆ ಯಾವುದೇ ಒಂದು ನಿರ್ದಿಷ್ಟ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಪಡೆಯುತ್ತಿದ್ದರು. ಆ ಹಣದಿಂದ ಕಾರು, ಮನೆ ಖರೀದಿಸುತ್ತಿದ್ದರು. ಈಗ ದರೋಡೆಯ ಸ್ವರೂಪ ಕಲ್ಪನೆಗೂ ಮೀರಿ ಬದಲಾಗಿದೆ. ಇಂತಹ ಸಮಾಜದಲ್ಲಿ ಬದಲಾವಣೆ ತರಲು ಗಾಂಧಿ ಸ್ಮಾರಕ ನಿಧಿ ಮುಂದಾಗಬೇಕು’ ಎಂದು ಹೇಳಿದರು. 

‘ಗಾಂಧೀಜಿ ಅವರು ಬುದ್ಧಿವಂತಿಕೆ ಯಿಂದ ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಮಾಡಿದ್ದರು. ಈ ಮೂಲಕ ಸ್ವಾತಂತ್ರ್ಯ ಕೊಡಿಸಲು ಶ್ರಮಿಸಿದ್ದರು. ಈಗಸತ್ಯಾಗ್ರಹ ಅಪಾಯದಲ್ಲಿದೆ. ಅನ್ಯಾಯದ ವಿರುದ್ಧ ಸತ್ಯಾಗ್ರಹ ಕೈಗೊಂಡರೆ ಪೊಲೀಸರು ಬಂಧಿಸುತ್ತಾರೆ. ಕೇಂದ್ರ ಸರ್ಕಾರವು ಕಾನೂನು ತಿದ್ದುಪಡಿಯ ಮೂಲಕ ಸತ್ಯಾಗ್ರಹದ ಸತ್ವವನ್ನು ಕಿತ್ತೊಗೆಯುವ ಪ್ರಯತ್ನ ಮಾಡಿದೆ. ಗಾಂಧಿ ಸಂಸ್ಥೆಗಳ ಆಸ್ತಿ ಸಂರಕ್ಷಣೆಗೆ ವಿಶೇಷ ಕಾನೂನು ರೂಪಿಸಬೇಕಿದೆ’ ಎಂದು ತಿಳಿಸಿದರು. 

ದುರಾಸೆಗೆ ಮದ್ದಿಲ್ಲ: ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಮಾತನಾಡಿ, ‘ಅಪರಾಧಗಳು ಹಾಗೂ ಭ್ರಷ್ಟಾಚಾರ ವನ್ನು ಹತ್ತಿರದಿಂದ ಕಂಡಿದ್ದೇನೆ. ಅಧಿಕಾರದಲ್ಲಿರುವವರ ಸ್ವಾರ್ಥ ಮತ್ತು ದುರಾಸೆಯು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ. ಪ್ರಸ್ತುತ ಸನ್ನಿವೇಶಕ್ಕೆ
ಸಮಾಜದ ಸ್ಥಿತಿಯೇ ಕಾರಣ. ಎಲ್ಲಕಾಯಿಲೆಗಳಿಗೂ ಮದ್ದಿದೆ. ಆದರೆ, ದುರಾಸೆಗೆ ಇಲ್ಲ’ ಎಂದರು.

‘ಜೀಪ್‌ ಹಗರಣ, ಬೊಫೋರ್ಸ್ ಹಗರಣ, ಕಾಮನ್‌ವೆಲ್ತ್ ಹಗರಣ, 2ಜಿ ಹಗರಣ, ಕಲ್ಲಿದ್ದಲು ಹಗರಣ ಸೇರಿ ವಿವಿಧ ಹಗರಣಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯಲಾಗಿದೆ. ಆಡಳಿತದಲ್ಲಿ ರುವವರ ಸ್ವಾರ್ಥ-ದುರಾಸೆಇವುಗಳಿಗೆಲ್ಲಾ ಕಾರಣ’ ಎಂದು ತಿಳಿಸಿದರು. 

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ವಿಚಾರ ಸಂಕಿರಣದ ಎರಡು ದಿನಗಳ ವರದಿ ಮಂಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT