ಖಾತೆಯಿಂದ ಹಣ ವರ್ಗಾವಣೆ; ಮಹಿಳೆಯ ತಪ್ಪಿಲ್ಲ, ಬ್ಯಾಂಕ್‌ ಸಿಬ್ಬಂದಿಯ ನಿರ್ಲಕ್ಷ್ಯ

7
ಪೊಲೀಸರಿಗೆ ದೂರು

ಖಾತೆಯಿಂದ ಹಣ ವರ್ಗಾವಣೆ; ಮಹಿಳೆಯ ತಪ್ಪಿಲ್ಲ, ಬ್ಯಾಂಕ್‌ ಸಿಬ್ಬಂದಿಯ ನಿರ್ಲಕ್ಷ್ಯ

Published:
Updated:

ಬೆಂಗಳೂರು: ‘ಯೆಸ್’ ಬ್ಯಾಂಕ್‌ನ ಕಸ್ತೂರಬಾ ರಸ್ತೆ ಶಾಖೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಪಾದರಾಯನಪುರದ ನಿವಾಸಿ ನಜೀರ್ ಅಹ್ಮದ್ ಅವರ ಖಾತೆಯಲ್ಲಿದ್ದ ₹ 1.69 ಲಕ್ಷ ಹಣ ಮಹಿಳೆಯೊಬ್ಬರ ಖಾತೆಗೆ ವರ್ಗಾವಣೆ ಆಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

‘ಖಾಲಿದಾ ಖಾನಮ್ ಎಂಬ ಮಹಿಳೆ ಬ್ಯಾಂಕ್‌ಗೆ ನಕಲಿ ಮರಣ ಪ್ರಮಾಣ ಪತ್ರ ನೀಡಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ನಜೀರ್‌ ಅಹ್ಮದ್ ಅವರು ಕಬ್ಬನ್‌ ಪಾರ್ಕ್‌ ಠಾಣೆಗೆ ದೂರು ಕೊಟ್ಟಿದ್ದರು.

ತನಿಖೆ ನಡೆಸಿದ ಪೊಲೀಸರು, ‘ಪ್ರಕರಣದಲ್ಲಿ ಮಹಿಳೆಯ ತಪ್ಪಿಲ್ಲ. ಅವರು ಅಮಾಯಕರು. ಬ್ಯಾಂಕಿನವರ ನಿರ್ಲಕ್ಷ್ಯದಿಂದ ಈ ರೀತಿ ಎಡವಟ್ಟಾಗಿದೆ’ ಎಂದು ಸ್ಪ‍ಷ್ಟಪಡಿಸಿದ್ದಾರೆ.

‘ಖಾನಮ್ ಅವರ ಹೇಳಿಕೆ ಪಡೆಯಲಾಗಿದ್ದು, ಪ್ರಕರಣ ಸಂಬಂಧ ಸದ್ಯದಲ್ಲೇ ನ್ಯಾಯಾಲಯಕ್ಕೆ ಬಿ–ರಿಪೋರ್ಟ್ ಸಲ್ಲಿಸಲಿದ್ದೇವೆ. ಬ್ಯಾಂಕ್‌ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ, ಅವರ ಆಡಳಿತ ಮಂಡಳಿಗೆ ವರದಿ ಕಳುಹಿಸಲಿದ್ದೇವೆ. ಸಿಬ್ಬಂದಿ ವಿರುದ್ಧ ಆಡಳಿತ ಮಂಡಳಿಯವರೇ ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸರು ವಿವರಿಸಿದರು.

ಆಗಿದ್ದೇನು: 63 ವರ್ಷದ ನಜೀರ್ ಅಹ್ಮದ್, ಪಾದರಾಯನಪುರದ ಪಶ್ಚಿಮ ಭಾಗದಲ್ಲಿರುವ 2ನೇ ಅಡ್ಡರಸ್ತೆಯಲ್ಲಿ ವಾಸವಿದ್ದಾರೆ. ಅವರ ಮನೆಯ ಪಕ್ಕದ ರಸ್ತೆಯಲ್ಲಿ ಖಾಲಿದಾ ಖಾನಮ್ ನೆಲೆಸಿದ್ದಾರೆ. ಅವರ ಪತಿಯ ಹೆಸರು ಸಹ ನಜೀರ್ ಅಹ್ಮದ್. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಜೀರ್‌ (50), ಆರು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದರು.

ದೂರುದಾರ ನಜೀರ್, ‘ಯೆಸ್’ ಬ್ಯಾಂಕ್‌ನಲ್ಲಿ ವರ್ಷದ ಹಿಂದೆ ಖಾತೆ ತೆರೆದಿದ್ದು, ಅದರಲ್ಲಿ ₹ 1.69 ಲಕ್ಷ ಹಣವಿತ್ತು. ಖಾತೆಯ ವಹಿವಾಟಿನ ವಿವರದ ದಾಖಲೆಯನ್ನು ಬ್ಯಾಂಕ್‌ನವರು ಇತ್ತೀಚೆಗೆ ನಜೀರ್‌ ಅವರ ವಿಳಾಸಕ್ಕೆ ಕೊರಿಯರ್ ಮಾಡಿದ್ದರು. ಕೊರಿಯರ್ ಸಂಸ್ಥೆ ಸಿಬ್ಬಂದಿ, ಗ್ರಾಹಕ ನಜೀರ್‌ ಅವರ ಮನೆಗೆ ಅದನ್ನು ತಲುಪಿಸುವ ಬದಲು ಮೃತ ನಜೀರ್ ಅಹ್ಮದ್‌ ಮನೆಗೆ ಕೊಟ್ಟು ಹೋಗಿದ್ದರು.

ಅದನ್ನು ನೋಡಿದ ಮಹಿಳೆ, ತಮ್ಮ ಗಮನಕ್ಕೆ ಬಾರದಂತೆ ಪತಿಯೇ ಬ್ಯಾಂಕ್‌ನಲ್ಲಿ ಹಣ ಇಟ್ಟಿರಬಹುದು ಎಂದು ಭಾವಿಸಿದ್ದರು. ಕೊರಿಯರ್‌ನಲ್ಲಿ ಬಂದಿದ್ದ ದಾಖಲೆ ಹಾಗೂ ಪತಿಯ ಮರಣ ಪ್ರಮಾಣಪತ್ರದ ಸಮೇತ ಬ್ಯಾಂಕ್‌ಗೆ ಹೋಗಿ ವಿಚಾರಿಸಿದ್ದರು. ತಮ್ಮ ಖಾತೆದಾರ ನಜೀರ್ ಅಹ್ಮದ್ ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದ ಬ್ಯಾಂಕ್‌ ಸಿಬ್ಬಂದಿ, ಅವರ ಹಣವನ್ನು ಖಾನಮ್ ಖಾತೆಗೆ ವರ್ಗಾವಣೆ ಮಾಡಿ ಖಾತೆ ಸ್ಥಗಿತಗೊಳಿಸಿದ್ದರು.

‘ಖಾತೆ ಸ್ಥಗಿತಗೊಳಿಸಲಾಗಿದೆ’ ಎಂದು ಬ್ಯಾಂಕ್‌ನವರು, ನೈಜ ಗ್ರಾಹಕ ನಜೀರ್ ಅಹ್ಮದ್ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರು. ಗಾಬರಿಗೊಂಡ ಅವರು, ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ, ‘ಯಾರೋ ಮಹಿಳೆಯೊಬ್ಬರು ಬಂದು ಹಣ ಪಡೆದುಕೊಂಡಿದ್ದಾರೆ’ ಎಂದು ಬ್ಯಾಂಕ್‌ ಸಿಬ್ಬಂದಿ ಹೇಳಿದ್ದರು. ತಾವು ಜೀವಂತವಾಗಿರುವುದಾಗಿ ಅವರು ಎಷ್ಟೇ ಅಲವತ್ತುಕೊಂಡರೂ ಬ್ಯಾಂಕ್‌ ಸಿಬ್ಬಂದಿ ಸ್ಪಂದಿಸಿರಲಿಲ್ಲ. ಇದರಿಂದ ದಿಕ್ಕುಗಾಣದೇ ಅವರು ಠಾಣೆಯ ಮೆಟ್ಟಿಲೇರಿದ್ದರು.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಯೆಸ್‘ ಬ್ಯಾಂಕ್ ಅಧಿಕಾರಿಗಳು ಲಭ್ಯರಾಗಿಲ್ಲ.

‘ಹಣ ವಾಪಸ್‌ ನೀಡುವುದಾಗಿ ಹೇಳಿದ್ದಾರೆ’

‘ಯಾವುದೇ ಗ್ರಾಹಕರು ಮೃತಪಟ್ಟರೆ, ಅವರ ನಾಮಿನಿಗೆ ಹಣ ವರ್ಗಾವಣೆ ಮಾಡಬೇಕು. ಆ ರೀತಿ ಮಾಡುವಾಗಲೂ ವಿಳಾಸ ಹಾಗೂ ಇತರೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನೋಡಬೇಕು. ಆದರೆ, ಈ ಪ್ರಕರಣದಲ್ಲಿ ಬ್ಯಾಂಕ್‌ ಸಿಬ್ಬಂದಿ ಅಂಥ ಯಾವುದೇ ಪರಿಶೀಲನೆ ಮಾಡಿಲ್ಲ’ ಎಂದು ಪೊಲೀಸರು ಹೇಳಿದರು.

‘ಮಹಿಳೆ ವಿಧವೆ ಎಂಬ ಕಾರಣಕ್ಕೆ ಸಿಬ್ಬಂದಿ, ಹೆಚ್ಚು ವಿಚಾರಣೆ ನಡೆಸದೇ ತ್ವರಿತವಾಗಿ ಹಣ ವರ್ಗಾಯಿಸಿರುವುದಾಗಿ ವ್ಯವಸ್ಥಾಪಕರು ಹೇಳಿದ್ದಾರೆ. ಜತೆಗೆ, ತಮ್ಮ ನಿರ್ಲಕ್ಷ್ಯದಿಂದಲೇ ಎಡವಟ್ಟಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ₹1.69 ಲಕ್ಷ ಹಣವನ್ನು ಮೂಲ ಗ್ರಾಹಕರ ಖಾತೆಗೆ ಮರು ವರ್ಗಾವಣೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ. ಬ್ಯಾಂಕ್‌ ಸಿಬ್ಬಂದಿಯನ್ನು ಸೋಮವಾರ ಠಾಣೆಗೆ ಕರೆಸಿ ಮತ್ತೊಮ್ಮೆ ವಿಚಾರಣೆ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !